Site icon Vistara News

ಬೀಜಿಂಗ್‌ ತಲುಪಬಲ್ಲ ಸಾಮರ್ಥ್ಯದ ಅಗ್ನಿ-V ಕ್ಷಿಪಣಿ ಉಡಾಯಿಸಿದ ಭಾರತ | ಗಡಿ ತಗಾದೆ ತೆಗೆದಿದ್ದಕ್ಕೆ ಎಚ್ಚರಿಕೆ?

agni-v missile

ನವ ದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತೀಯ ಸೈನಿಕರ ಜತೆ ಚೀನಾ ಸೈನಿಕರು ಕಾಲು ಕೆರೆದು ಹೊಡೆದಾಡಿಕೊಂಡ ಒಂದು ದಿನದ ಅಂತರದಲ್ಲಿ, ಬೀಜಿಂಗ್‌ಗೆ ತಲುಪಬಲ್ಲ ಸಾಮರ್ಥ್ಯ ಹೊಂದಿರುವ ಅಗ್ನಿ- v ಕ್ಷಿಪಣಿಯನ್ನು ಭಾರತ ಪ್ರಯೋಗಾರ್ಥ ಉಡಾಯಿಸಿದೆ.

ಅಗ್ನಿ- v ಕ್ಷಿಪಣಿ ಬ್ಯಾಲಿಸ್ಟಿಕ್‌ (ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ) ಕ್ಷಿಪಣಿಯಾಗಿದ್ದು, 5000 ಕಿಲೋಮೀಟರ್‌ ದೂರವ್ಯಾಪ್ತಿ ಹೊಂದಿದೆ. ಅಂದರೆ ಇದು ಚೀನಾದ ರಾಜಧಾನಿ ಬೀಜಿಂಗ್‌ ಅನ್ನು ಮುಟ್ಟಬಲ್ಲುದು. ಇದು ಭಾರತೀಯ ಮಿಲಿಟರಿಗೆ ಗಣನೀಯ ಬಲ ತಂದುಕೊಟ್ಟಿದೆ.

ಒಡಿಶಾದ ಎಪಿಜೆ ಅಬ್ದುಲ್‌ ಕಲಾಂ ದ್ವೀಪದಿಂದ ಈ ಕ್ಷಿಪಣಿಯನ್ನು ಉಡಾಯಿಸಲಾಗಿದೆ. ಈ ಕ್ಷಿಪಣಿಯ ದೂರವ್ಯಾಪ್ತಿಯಲ್ಲಿ ಏಷ್ಯಾದ ಬಹುಭಾಗ, ಚೀನಾದ ಉತ್ತರ ಭಾಗ, ಯುರೋಪ್‌ನ ಕೆಲಭಾಗ ಕೂಡ ಬರುತ್ತದೆ. ಚೀನಾ ಹೊಂದಿರುವ ಭಾರಿ ಕ್ಷಿಪಣಿ ಬಲವನ್ನು ಸರಿಗಟ್ಟಲು ಭಾರತ ಮಾಡುತ್ತಿರುವ ಯತ್ನಗಳಲ್ಲಿ ಅಗ್ನಿಯೂ ಒಂದು. ಚೀನಾದ ಬಳಿ ಇರುವ ಡಾಂಗ್‌ಫೆಂಗ್-‌ 41 ಕ್ಷಿಪಣಿ 12,000-15,000 ಕಿಲೋಮೀಟರ್‌ ದೂರವ್ಯಾಪ್ತಿ ಹೊಂದಿದೆ ಎನ್ನಲಾಗಿದೆ.

ಅಗ್ನಿ-4 ಕ್ಷಿಪಣಿಗಳು 700- 3500 ಕಿಲೋಮೀಟರ್‌ ಸಾಮರ್ಥ್ಯ ಹೊಂದಿದ್ದು, ಅವುಗಳನ್ನು ಈಗಾಗಲೇ ಮಿಲಿಟರಿಯಲ್ಲಿ ಅಳವಡಿಸಲಾಗಿದೆ. ಈಗ ಅಗ್ನಿ-5 ಕ್ಷಿಪಣಿಯ ಪ್ರಯೋಗಾರ್ಥ ಉಡಾವನೆಗಳು ಯಶಸ್ವಿಯಾಗಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೂಡ ಇದರ ಪ್ರಯೋಗ ನಡೆದಿತ್ತು. 17 ಮೀಟರ್‌ ಉದ್ದ ಹಾಗೂ 1.5 ಟನ್‌ ಸಿಡಿತಲೆ ಹೊರಬಲ್ಲ ಸಾಮರ್ಥ್ಯದ ಈ ಕ್ಷಿಪಣಿ ಗುರಿ ತಲುಪುವಲ್ಲಿ ಹೆಚ್ಚಿನ ನಿಖರತೆ ಹೊಂದಿದೆ.

ಜೂನ್‌ನಲ್ಲಿ ಅಗ್ನಿ-4 ಕ್ಷಿಪಣಿಯ ಯಶಸ್ವಿ ಉಡಾವಣೆ ನಡೆದಿತ್ತು. ಮೇ ತಿಂಗಳಲ್ಲಿ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯನ್ನು ಸುಖೋಯಿ ಫೈಟರ್‌ ಜೆಟ್‌ನಿಂದ ಉಡಾಯಿಸಲಾಗಿತ್ತು.

ಇದನ್ನೂ ಓದಿ | Agni v | ಬೀಜಿಂಗ್ ತಲುಪಬಲ್ಲ ಪರಮಾಣು ಸಾಮರ್ಥ್ಯದ ಅಗ್ನಿ v ಕ್ಷಿಪಣಿ ಪರೀಕ್ಷೆ ಯಶಸ್ವಿ

Exit mobile version