ನವ ದೆಹಲಿ: ಅಗ್ನಿಪಥ್ ಯೋಜನೆಯಡಿ ಸೇನೆಗೆ ಅಗ್ನಿವೀರರನ್ನು ನೇಮಿಸಿಕೊಳ್ಳುವ ಕೇಂದ್ರ ಸರಕಾರದ ಯೋಜನೆಗೆ ಸೇನಾಕಾಂಕ್ಷಿಗಳಿಂದ ವಿರೋಧ ವ್ಯಕ್ತವಾಗಿರುವ ನಡುವೆಯೇ ಭೂಸೇನೆಯಿಂದ ನೇಮಕಾತಿ ರ‍್ಯಾಲಿ ಅಧಿಸೂಚನೆ ಬಿಡುಗಡೆ ಆಗಿದೆ.
ಹೊಸ ಯೋಜನೆಯಡಿ ನೇಮಕಾತಿ ರ‍್ಯಾಲಿ ನಡೆಯಲಿದೆ ಎಂದು ಹೇಳಿರುವ ಸೇನೆ ನೋಂದಣಿ ಪ್ರಕ್ರಿಯೆಗಳು ಮುಂದಿನ ತಿಂಗಳಿನಿಂದ ಆರಂಭವಾಗಲಿದೆ ಎಂದಿದೆ. ಹೊಸ ಮಾದರಿ ನೇಮಕಾತಿ ಅಡಿ ಸೇನೆಗೆ ಸೇರಲು ಬಯಸುವ ಆಕಾಂಕ್ಷಿಗಳು ವೆಬ್ ಸೈಟ್ (https://joinindianarmy.nic.in)ನಲ್ಲಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ.
ಸೇನೆ ಸೇರುವವರು ಕೆಲವೊಂದು ಮೂಲಭೂತ ನಿಯಮಗಳಿಗೆ ಬದ್ಧರಾಗಿರಬೇಕಾಗುತ್ತದೆ ಎಂದು ಸೇನೆ ಭಾನುವಾರ ಸೂಚನೆಗಳನ್ನು ನೀಡಿದ್ದು, ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಪಡೆದಿರುವ ಮಾಹಿತಿಯನ್ನು ಎಲ್ಲೂ ಹೊರಗೆ, ಅನಧಿಕೃತ ವ್ಯಕ್ತಿಗಳ ಬಗ್ಗೆ ಹಂಚಿಕೊಳ್ಳಬಾರದು ಎಂದು ಕಟ್ಟಪ್ಪಣೆ ಮಾಡಲಾಗಿದೆ.
ಒಮ್ಮೆ ಅಗ್ನಿವೀರರಾಗಿ ಸೇನೆಯನ್ನು ಸೇರಿದರೆ ನಂತರ ಮಧ್ಯದಲ್ಲಿ ಯಾವುದೇ ಕಾರಣಕ್ಕೂ ಬಿಟ್ಟು ಹೋಗುವಂತಿಲ್ಲ. ಹಾಗೆ ಹೋಗಲೇಬೇಕು ಅಂತಿದ್ದರೆ ಸಂಬಂಧಿತ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ಸೂಚಿಸಲಾಗಿದೆ.
ಸೇನೆ ಸೇರಲು ಬಯಸುವವರು ನಿಗದಿಪಡಿಸಿದ ಎಲ್ಲ ನಿಯಮಾವಳಿಗಳನ್ನು ಒಪ್ಪಿ ಸಹಿ ಹಾಕಬೇಕು. ೧೮ ವರ್ಷಕ್ಕಿಂತ ಕೆಳಗಿನವರ ಪರವಾಗಿ ಹೆತ್ತವರು ಅಥವಾ ಪಾಲಕರು ಒಪ್ಪಿಗೆ ಪತ್ರ ನೀಡಬೇಕಾಗತ್ತದೆ. ಸಾಮಾನ್ಯವಾಗಿ ಸೈನಿಕರಿಗೆ ವರ್ಷಕ್ಕೆ ೯೦ ದಿನ ರಜೆ ಇದ್ದರೆ ಈ ಸೈನಿಕರಿಗೆ ೩೦ ದಿನ ಮಾತ್ರ ಇರುತ್ತದೆ. ವೈದ್ಯರ ನೀಡುವ ಸರ್ಟಿಫಿಕೆಟ್ ಆಧರಿಸಿ ರಜೆ ಒದಗಿಸುವ ಬಗ್ಗೆ ಚಿಂತಿಸಲಾಗುತ್ತದೆ ಎಂದಿದ್ದಾರೆ.
೪೫೦೦೦ ಮಂದಿ ನೇಮಕ
ಅಗ್ನಿಪಥ್ ಯೋಜನೆಯಡಿ ಮೊದಲ ವರ್ಷ ೪೫೦೦೦ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಈಗಾಗಲೇ ಪ್ರಕಟಿಸಲಾಗಿದೆ. ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳಿಗೆ ಜತೆಯಾಗಿ ಈ ಪ್ರಮಾಣದ ನೇಮಕಾತಿ ನಡೆಯಲಿದೆ. ಮೂರೂ ಪಡೆಗಳ ಮುಖ್ಯಸ್ಥರು ನೇಮಕಾತಿ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದರು.
ದೊಂಬಿಕೋರರಿಗೆ ಅವಕಾಶವಿಲ್ಲ?
ಮೂರೂ ಪಡೆಗಳ ಮುಖ್ಯಸ್ಥರು ನೇಮಕಾತಿಗೆ ಸಂಬಂಧಿಸಿ ನೀಡಿದ ಸ್ಪಷ್ಟನೆ ಏನೆಂದರೆ, ಯಾವ ಕಾರಣಕ್ಕೂ ದೊಂಬಿಯಲ್ಲಿ ಭಾಗವಹಿಸಿದವರಿಗೆ ಅಗ್ನಿಪಥ್ ಯೋಜನೆಯಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದು. ದೊಂಬಿಯಲ್ಲಿ ಭಾಗವಹಿಸಿದವರ ಸರ್ವ ವಿವರಗಳನ್ನು ಪೊಲೀಸರು ಸಂಗ್ರಹಿಸಿ ಅವರ ವಿರುದ್ಧ ಕೇಸು ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಯಾರ್ಯಾರ ಮೇಲೆ ಪ್ರಕರಣ ದಾಖಲಾಗಿದೆಯೋ ಅವರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಧಿಸೂಚನೆಯಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲವಾದರೂ ಮುಂದಿನ ದಿನಗಳಲ್ಲಿ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಸೇನಾ ನೇಮಕಾತಿಯಲ್ಲಿ ಪೊಲೀಸ್ ವೆರಿಫಿಕೇಶನ್ ಎನ್ನುವುದು ಅತ್ಯಂತ ಪ್ರಮುಖ ಭಾಗವಾಗಿದ್ದು, ಈ ಹಂತದಲ್ಲಿ ಅವರನ್ನು ಗುರುತಿಸಿ ಹೊರಹಾಕುವ ಸಾಧ್ಯತೆ ಇದೆ.
ನೌಕಾಪಡೆ, ವಾಯುಪಡೆ ಯಾವಾಗ?
ಸೋಮವಾರ ಭೂಸೇನೆ ನೇಮಕಾತಿ ರ‍್ಯಾಲಿ ಅಧಿಸೂಚನೆ ಪ್ರಕಟಿಸಿದೆ. ಇನ್ನು ಜೂನ್ ೨೧ರಂದು ನೌಕಾಪಡೆ ಮತ್ತು ಜೂನ್ ೨೪ರಂದು ವಾಯುಪಡೆ ಪ್ರಕಟಣೆಯನ್ನು ಹೊರಡಿಸಲಿದೆ.
ಇದನ್ನೂ ಓದಿ| ಅಗ್ನಿಪಥ್ ಯೋಜನೆ ಬಗ್ಗೆ ವಾಯುಪಡೆ ಬಿಡುಗಡೆಗೊಳಿಸಿದ ವಿವರದಲ್ಲಿ ಏನೇನಿದೆ?