Site icon Vistara News

Agnipath protest: ʻಅಗ್ನಿʼಕುಂಡವಾದ ಏಳು ರಾಜ್ಯಗಳು; ಬಿಹಾರ ಡಿಸಿಎಂ ಮನೆಗೆ ಬೆಂಕಿ, ತೆಲಂಗಾಣದಲ್ಲಿ ಫೈರಿಂಗ್‌

protest @ bihar

ಪಟನಾ: ಕೇಂದ್ರ ಸರಕಾರದ ಅಗ್ನಿಪಥ್‌ ಯೋಜನೆಯ ವಿರುದ್ಧ ಭುಗಿಲೆದ್ದಿರುವ ಆಕ್ರೋಶ ತೀವ್ರ ಹಿಂಸಾಪಥದಲ್ಲಿ ಸಾಗುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ದಿಲ್ಲಿ ಮತ್ತು ತೆಲಂಗಾಣಗಳು ವಸ್ತುಶಃ ರಣರಂಗವಾಗಿವೆ. ಅದರಲ್ಲೂ ಬಿಹಾರದಲ್ಲಿ ಹತ್ತಾರು ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ. ಬಿಹಾರದ ಉಪಮುಖ್ಯಮಂತ್ರಿ ರೇಣು ದೇವಿ ಅವರ ಮನೆಗೆ ಪ್ರತಿಭಟನಾಕಾರರು ಲಗ್ಗೆ ಇಟ್ಟಿದ್ದು, ಭಾರಿ ಹಾನಿ ಮಾಡಿದ್ದಾರೆ. ಬೆಟ್ಟಯ್ಯ ಎಂಬ ಊರಿನಲ್ಲಿರುವ ಮನೆ ಮೇಲೆ ಈ ದಾಳಿ ನಡೆದಿದ್ದು, ಈ ಸಂದರ್ಭದಲ್ಲಿ ರೇಣು ದೇವಿ ಅವರು ಪಟನಾದಲ್ಲಿದ್ದರು. ಇತ್ತ ತೆಲಂಗಾಣದಲ್ಲಿ ಪ್ರತಿಭಟನಾಕಾರರ ಅತಿರೇಕಗಳು ಮೇರೆ ಮೀರಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ.

ಅಗ್ನಿ ಪಥ ಯೋಜನೆಯಿಂದ ಸೈನಿಕ ಸೇವೆಗೆ ಸೇರಲು ಬಯಸುವವರ ಜೀವನ ಭದ್ರತೆ ಕಳೆದುಹೋಗಲಿದೆ ಎಂಬ ಭಯವೇ ಪ್ರತಿಭಟನೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಲಕ್ಷಾಂತರ ಯುವಕರು ಬೀದಿಗೆ ಇಳಿದಿದ್ದು, ಹಿಂಸಾ ಕೃತ್ಯಗಳಲ್ಲಿ ತೊಡಗಿದ್ದಾರೆ. ರಕ್ಷಣಾ ಇಲಾಖೆ ಸೇನಾ ಸೇರ್ಪಡೆಯ ವಯೋಮಿತಿಯನ್ನು 21 ವರ್ಷದಿಂದ 23 ವರ್ಷಕ್ಕೆ ಹೆಚ್ಚ್ಸಿಸಿ ಹೊಸ ಪ್ರಕಟಣೆಯನ್ನು ನೀಡಿದೆಯಾದರೂ ಆಕಾಂಕ್ಷಿಗಳ ಬೇಡಿಕೆ ಬೇರೆ ಬೇರೆಯಾಗಿರುವುದರಿಂದ ಅದೊಂದೇ ಅವರ ಸಿಟ್ಟನ್ನು ತಣಿಸುವಂತೆ ಕಾಣುತ್ತಿಲ್ಲ.

ದಿಲ್ಲಿಗೂ ಹರಡಿದ ಕಿಚ್ಚು
ದಿಲ್ಲಿಯ ಐಟಿಒ ಕಚೇರಿಯ ಮುಂದೆ ದೊಡ್ಡ ಮಟ್ಟದ ಪ್ರತಿಭಟನೆ ಆರಂಭಗೊಂಡಿದ್ದು, ಹಲವಾರು ವಿದ್ಯಾರ್ಥಿಗಳು ಜಮಾಯಿಸಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ. ದಿಲ್ಲಿ ಮತ್ತು ಸಮೀಪದ ಗುರುಗ್ರಾಮದಲ್ಲಿ ಭಾರಿ ಬಂದೋಬಸ್ತ್‌ ಮಾಡಲಾಗಿದೆ. ಗುರುಗ್ರಾಮದಲ್ಲಂತೂ ಸೆಕ್ಷನ್‌ 144 ಅಡಿ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ.
ಬಿಹಾರದಲ್ಲಿ ಸಮಸ್ಟಿಪುರ, ಬಲಿಯಾ ಸೇರಿದಂತೆ ಹಲವು ರೈಲು ನಿಲ್ದಾಣಗಳಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಹಲವಾರು ರೈಲುಗಳನ್ನು ಸುಟ್ಟು ಹಾಕಲಾಗಿದೆ. ಇದೀಗ ಹೊಸದಾಗಿ ಲಾಖಿ ಸರಾಯ್‌ ನಿಲ್ದಾಣದಲ್ಲಿ ನಿಂತಿದ್ದ ರೈಲನ್ನು ಸುಟ್ಟು ಹಾಕಲಾಗಿದೆ.

ಬೀದಿ ಕಾಳಗ

ಏಳು ರಾಜ್ಯಗಳಲ್ಲಿ ಯುವಜನರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿರುವುದು ಪೊಲೀಸರಿಗೆ ಭಾರಿ ತಲೆ ನೋವಾಗಿದೆ. ಯುವಕರು ಕೇವಲ ಪ್ರತಿಭಟನೆ ನಡೆಸುತ್ತಿಲ್ಲ. ಬದಲಾಗಿ, ಅಂಗಡಿ ಮುಂಗಟ್ಟುಗಳನ್ನು ಒಡೆದು ಹಾಕುತ್ತಿದ್ದಾರೆ. ಬಸ್‌, ಇತರ ವಾಹನಗಳ ಗಾಜನ್ನು ಒಡೆದು ಹಾಕಿದ್ದಾರೆ. ಒಟ್ಟಾರೆಯಾಗಿ ಹಲವು ಪ್ರದೇಶಗಳು ರಣರಂಗದಂತೆ ಗೋಚರಿಸುತ್ತಿವೆ.

ಇದನ್ನೂ ಓದಿ: ಅಗ್ನಿಪಥ ಪ್ರತಿಭಟನೆ ತೀವ್ರ; ಮುಂಜಾನೆಯಿಂದಲೇ ರೈಲುಗಳಿಗೆ ಬೆಂಕಿ ಹಚ್ಚುತ್ತಿರುವ ಆಕ್ರೋಶಿತರು

Exit mobile version