ನವ ದೆಹಲಿ: ಕೇಂದ್ರ ಸರಕಾರದ ನೂತನ ಅಗ್ನಿಪಥ್ (Agnipath) ಯೋಜನೆ ವಿರುದ್ಧ ದೇಶದ ಎಂಟು ರಾಜ್ಯಗಳಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿರುವ ನಡುವೆಯೇ ಮುಂದಿನ ಜೂನ್ 24ರಿಂದಲೇ ಹೊಸ ಯೋಜನೆಯಡಿ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಲಿದೆ ಎಂದು ವಾಯುಪಡೆಯ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಶುಕ್ರವಾರ ಹೇಳಿದ್ದಾರೆ.
ಜೂನ್ 24ರಿಂದ ಆರಂಭವಾಗಲಿರುವ ಪ್ರಕ್ರಿಯೆಯ ಬಗ್ಗೆ ಇನ್ನು ಎರಡು ದಿನಗಳ ಒಳಗೆ ಅಧಿಸೂಚನೆ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ. ʻʻನಾನು ಆರು ಮುಂಚೂಣಿ ನೆಲೆಗಳಿಗೆ ಭೇಟಿ ನೀಡಲಿದ್ದು, ಅಗ್ನಿಪಥ್ ಯೋಜನೆಯ ಬಗ್ಗೆ ವಾಯುಪಡೆಯ ಎಲ್ಲ ವಿಭಾಗಕ್ಕೂ ವಿವರಿಸಲಿದ್ದೇನೆ. ನಮ್ಮ ವಾಯುಪಡೆಯ ಕೊನೆಯ ವ್ಯಕ್ತಿಯ ವರೆಗೂ ಈ ಯೋಜನೆಯ ವಿವರಗಳು ತಲುಪಬೇಕು ಎನ್ನುವುದು ನನ್ನ ಉದ್ದೇಶʼʼ ಎಂದಿದ್ದಾರೆ ವಿ.ಆರ್. ಚೌಧರಿ.
ಎರಡು ದಿನದಲ್ಲಿ ಅಧಿಸೂಚನೆ
ಈ ನಡುವೆ, ಭೂಸೇನೆಯ ಮುಖ್ಯಸ್ಥರಾಗಿರುವ ಮನೋಜ್ ಪಾಂಡೆ ಅವರು ಕೂಡಾ ಎರಡು ದಿನದಲ್ಲಿ ನೇಮಕಾತಿ ಅಧಿಸೂಚನೆ http://joinindianarmy.nic.in ವೆಬ್ ಸೈಟ್‌ನಲ್ಲಿ ಪ್ರಕಟವಾಗಲಿದೆ ಎಂದಿದ್ದಾರೆ.
ಡಿಸೆಂಬರ್‌ನಿಂದ ತರಬೇತಿ
ನೂತನವಾಗಿ ನೇಮಕವಾಗಲಿರುವ ಅಗ್ನಿವೀರರಿಗೆ 2022ರ ಡಿಸೆಂಬರ್‌ನಿಂದ ತರಬೇತಿ ಆರಂಭವಾಗಲಿದೆ ಎಂದು ಪಾಂಡೆ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ʻʻಅಗ್ನಿಪಥ್ ಯೋಜನೆಯ ಬಗ್ಗೆ ಯುವಜನರಿಗೆ ಸರಿಯಾದ ಮಾಹಿತಿ ಇಲ್ಲ ಅನಿಸುತ್ತದೆ. ಅವರು ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಯೋಜನೆ ವಿಷಯದಲ್ಲಿ ನಂಬಿಕೆ ಬರುತ್ತದೆ ಎಂದರು.
ಸಿದ್ಧರಾಗಿ ಎಂದ ರಾಜನಾಥ್ ಸಿಂಗ್
ಇದೇವೇಳೆ, ಯುವಜನರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ತಕ್ಷಣವೇ ಸೇನಾ ಸೇರ್ಪಡೆಗೆ ಸಿದ್ಧರಾಗಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ. ಅಗ್ನಿಪಥ್ ಯೋಜನೆಯನ್ನು ಸಮರ್ಥಿಸಿದ ಅವರು, ಇದು ಒಂದು ಐತಿಹಾಸಿಕ ಯೋಜನೆಯಾಗಿದ್ದು, ರಕ್ಷಣಾ ವ್ಯವಸ್ಥೆಗೆ ಬಲ ನೀಡಲಿದೆ ಎಂದರು.
ಸೇನೆಗೆ ಯೋಗ್ಯರಲ್ಲ ಎಂದ ವಿ.ಕೆ ಸಿಂಗ್
ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿರುವ ಯುವಕರು ಯಾರೂ ಸೇನೆಗೆ ಸೇರ್ಪಡೆಯಾಗುವ ಯೋಗ್ಯತೆ ಹೊಂದಿಲ್ಲ ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ. ದೇಶ ಸೇವೆ ಮಾಡುವ ಯಾರೂ ಈ ರೀತಿಯಲ್ಲಿ ಗೂಂಡಾಗಳಂತೆ ಹಿಂಸಾಚಾರಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ| Agnipath ಗೆ ರಾಜಕೀಯ ತಿರುವು: ಮಿತ್ರಪಕ್ಷಗಳಿಂದಲೇ ಮರುಪರಿಶೀಲನೆ ಬೇಡಿಕೆ, ಕಾಂಗ್ರೆಸ್‌ನಿಂದಲೂ ಪಟ್ಟು