Site icon Vistara News

Agnipath Scheme: ಸರ್ಕಾರ ರಚನೆಗೂ ಮುನ್ನ ನಿತೀಶ್‌ ಕುಮಾರ್‌ ಬಿಗ್‌ ಡಿಮ್ಯಾಂಡ್‌! ಬಿಜೆಪಿಗೆ ʼಅಗ್ನಿʼ ಪರೀಕ್ಷೆ ಗ್ಯಾರಂಟಿ!

Agnipath scheme

ನವದೆಹಲಿ: ಮೂರನೇ ಬಾರಿ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿ(BJP) ನೇತೃತ್ವದ ಎನ್‌ಡಿಎ(NDA) ಸರ್ಕಾರಕ್ಕೆ ಈ ಬಾರಿ ಸಾಗಲಿರುವ ಹಾದಿ ಹೂವಿನ ಹಾಸಿಗೆಯಂತಿಲ್ಲ. ಈ ಬಾರಿ ಮಿತ್ರಗಳ ನೆರವಿನ ಜೊತೆಗೇ ಹೆಜ್ಜೆ ಹಾಕಬೇಕಾಗಿರುವ ಕಾರಣ ಮಿತ್ರ ಪಕ್ಷಗಳಿಂದ ಭಾರೀ ಅಗ್ನಿ ಪರೀಕ್ಷೆ ಎದುರಿಸಬೇಕಾದ ಸ್ಥಿತಿ ಇದೆ. ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರ ಹಾಕಿಕೊಂಡಿದ್ದ ಕೆಲವೊಂದು ಯೋಜನೆಗಳ ಜಾರಿಗೆ ಮಿತ್ರ ಪಕ್ಷಗಳೇ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಜೆಡಿಯು ಏನು ಬೇಡಿಕೆ ಇಡುತ್ತದೋ ಎಂಬ ಚಿಂತೆ ಬಿಜೆಪಿಗೆ ಇದ್ದೇ ಇದೆ. ಅದಕ್ಕೆ ಪೂರಕ ಎಂಬಂತೆ ಕೇಂದ್ರದ ಮಹತ್ವದ ಅಗ್ನಿಪಥ ಯೋಜನೆ(Agnipath Scheme)ಯನ್ನು ಮರುಪರಿಶೀಲಿಸುವಂತೆ ಜೆಡಿಯು ಬೇಡಿಕೆ ಇಟ್ಟಿದೆ.

ಈ ಬಗ್ಗೆ ಜೆಡಿಯು ನಾಯಕ ಕೆ.ಸಿ. ತ್ಯಾಗಿ ಪ್ರತಿಕ್ರಿಯಿಸಿದ್ದು, ನಿತೀಶ್ ಕುಮಾರ್ ಅವರ ಜೆಡಿಯು ಸೇನೆಗೆ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಮರುಪರಿಶೀಲಿಸುವಂತೆ ಮಿತ್ರ ಪಕ್ಷ ಬಿಜೆಪಿಗೆ ಒತ್ತಾಯಿಸುತ್ತಾರೆ. ಜನರಿಗೆ ಅಗ್ನಿಪಥ ಯೋಜನೆ ವಿರುದ್ಧ ಅಸಮಾಧಾನವಿದ್ದು, ಚುನಾವಣೆ ಸಂದರ್ಭದಲ್ಲಿ ಅದು ಗೋಚರಿಸುತ್ತಿತ್ತು ಎಂದು ಹೇಳಿದ್ದಾರೆ. ನಾವು ಈ ಬಗ್ಗೆ ಮಿತ್ರ ಪಕ್ಷಗಳ ಜೊತೆ ಜಿದ್ದಾಜಿದ್ದಿಗೆ ಬೀಳುವುದಿಲ್ಲ. ಅಗ್ನಿಪಥ್ ಯೋಜನೆ ಪರಿಚಯಿಸಿದಾಗ, ಸಶಸ್ತ್ರ ಪಡೆಗಳ ದೊಡ್ಡ ವರ್ಗದಲ್ಲಿ ಅಸಮಾಧಾನವಿತ್ತು. ಅವರ ಕುಟುಂಬಗಳು ಚುನಾವಣೆಯ ಸಮಯದಲ್ಲಿ ಪ್ರತಿಭಟನೆ ನಡೆಸಿದ್ದರು. ಆದ್ದರಿಂದ, ಈ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಶಸ್ತ್ರ ಪಡೆಗಳ ರಕ್ಷಣಾ ಪಿಂಚಣಿ ಬಿಲ್ ಅನ್ನು ಕಡಿಮೆ ಮಾಡಲು ಕೇಂದ್ರವು 2022 ರಲ್ಲಿ ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿತ್ತು. ಯೋಜನೆಯಡಿಯಲ್ಲಿ, ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಒಟ್ಟು ವಾರ್ಷಿಕ ನೇಮಕಾತಿಗಳಲ್ಲಿ, 25% ಮಾತ್ರ ಶಾಶ್ವತ ಆಯೋಗದ ಅಡಿಯಲ್ಲಿ ಇನ್ನೂ 15 ವರ್ಷಗಳವರೆಗೆ ಮುಂದುವರೆಯಲು ಅನುಮತಿಸಲಾಗಿದೆ. ಈ ಯೋಜನೆಯು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಪ್ರತಿಭಟನೆಗಳನ್ನು ಹುಟ್ಟುಹಾಕಿತು.

ಜಾತಿ ಆಧಾರಿತ ಜನಗಣತಿ ಕುರಿತು ಮಾತನಾಡಿದ ಕೆ.ಸಿ.ತ್ಯಾಗಿ, ದೇಶದ ಯಾವ ಪಕ್ಷವೂ ಜಾತಿ ಆಧಾರಿತ ಜನಗಣತಿಯನ್ನು ತಿರಸ್ಕರಿಸಿಲ್ಲ. ಜಾತಿ ಆಧಾರಿತ ಜನಗಣತಿ ಇಂದಿನ ಅಗತ್ಯವಾಗಿದೆ. ನಾವು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಯಾವುದೇ ಪೂರ್ವ ಷರತ್ತುಗಳಿಲ್ಲ. ಬೇಷರತ್ ಬೆಂಬಲವಿದೆ. ಆದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು ಎಂಬುದು ನಮ್ಮ ಮನಸ್ಸಲ್ಲಿದೆ ಎಂದರು.

ಒನ್ ನೇಷನ್ ಒನ್ ಪೋಲ್, ಏಕರೂಪ ಕಾನೂನು

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ, ಬಿಹಾರ ಮುಖ್ಯಮಂತ್ರಿಗಳು ಕಾನೂನು ಆಯೋಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ನಾವು ಅದನ್ನು ವಿರೋಧಿಸುವುದಿಲ್ಲ ಆದರೆ ಎಲ್ಲಾ ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಪಕ್ಷವು ಬಿಜೆಪಿಯ ‘ಒಂದು ರಾಷ್ಟ್ರ ಒಂದು ಚುನಾವಣೆ’ ನೀತಿಯ ಪರವಾಗಿದೆ ಎಂದು ತ್ಯಾಗಿ ಹೇಳಿದ್ದಾರೆ.

ಇದನ್ನೂ ಓದಿ: Love jihad : ಬಿಹಾರದ ಹಿಂದೂ ಯುವತಿಯನ್ನು ಉತ್ತರಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಆರಿಫ್; ಲವ್​ ಜಿಹಾದ್ ಆರೋಪ

“ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ನಮ್ಮ ನಿಲುವು ಇಂದಿಗೂ ಒಂದೇ ಆಗಿರುತ್ತದೆ. ಈ ವಿಷಯದ ಬಗ್ಗೆ ಎಲ್ಲಾ ಪಾಲುದಾರರನ್ನು ಕರೆದೊಯ್ದು ಅವರ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ನಿತೀಶ್ ಕುಮಾರ್ ಯುಸಿಸಿ ಕುರಿತು ಕಾನೂನು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ಹೇಳಿದರು. ನಾವು ಅದನ್ನು ವಿರೋಧಿಸುವುದಿಲ್ಲ, ಆದರೆ ಅದರ ಬಗ್ಗೆ ವ್ಯಾಪಕವಾದ ಚರ್ಚೆಯ ಅಗತ್ಯವಿದೆ, ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಏಕೀಕೃತ ನಿರ್ಧಾರವನ್ನು ತೆಗೆದುಕೊಳ್ಳಬೇಕು, ”ಎಂದು ತ್ಯಾಗಿ ಹೇಳಿದರು.

Exit mobile version