ನವ ದೆಹಲಿ: ಭಾರತೀಯ ಸೇನೆಯಲ್ಲಿನ ಸೈನಿಕ ಹುದ್ದೆಗಳ ನೇಮಕಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆ ಅಗ್ನಿಪಥ್ (Agnipath) ವಿರುದ್ಧ ದೇಶದ ಕೆಲವೆಡೆ ಭಾರಿ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಕಾಂಗ್ರೆಸ್‌ನ ಹಿರಿಯ ನಾಯಕ, ಖ್ಯಾತ ವಕೀಲ, ಸಂಸದ ಮನೀಶ್ ತಿವಾರಿ ಈ ಯೋಜನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ರಾಹುಲ್ ಗಾಂಧಿಯವರನ್ನು ಇಡಿಯು ವಿಚಾರಣೆಗೊಳಪಡಿಸುತ್ತಿರುವುದನ್ನು ಖಂಡಿಸಿ, ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಸಂಸದರನ್ನು ಬಂಧಿಸುತ್ತಿರುವುದನ್ನು ಖಂಡಿಸಿ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ತಿವಾರಿ ಸಂಜೆಯ ವೇಳೆಗೆ ಕೇಂದ್ರ ಸರ್ಕಾರ ಯೋಜನೆಯೊಂದನ್ನು ಬೆಂಬಲಿಸಿ, ಟ್ವೀಟ್ ಮಾಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ.
ಅಗ್ನಿಪಥ್ ನೇಮಕಾತಿ ಯೋಜನೆ ಜಾರಿಯನ್ನು ಸರಿಯಾದ ದಿಕ್ಕಿನಲ್ಲಿಟ್ಟ ಹೆಜ್ಜೆ ಎಂದು ಬಣ್ಣಿಸಿರುವ ತಿವಾರಿ, ಸೇನೆಗೆ ತಾರುಣ್ಯ ನೀಡಲು ಈ ರೀತಿಯ ಕ್ರಮದ ಅವಶ್ಯಕತೆ ಇತ್ತು. ಇದರಿಂದ ತಂತ್ರಜ್ಞಾನ ಬಲ್ಲ ಯುವಕರು ಸೇನೆ ಸೇರಲು ಅವಕಾಶ ದೊರೆಯಲಿದೆ, ಸೇನೆಯು ಉದ್ಯೋಗ ಖಾತ್ರಿಯನ್ನು ನೀಡುವ ವ್ಯವಸ್ಥೆಯಾಗಬಾರದು ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪಕ್ಷದ ನಾಯಕ ರಾಹುಲ್ ಗಾಂಧಿ ಈಗಾಗಲೇ ಈ ಯೋಜನೆಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದು, ʼಕೇಂದ್ರ ಸರ್ಕಾರಕ್ಕೆ ಸೇನೆಯ ಬಗ್ಗೆ ಗೌರವವಿಲ್ಲ ಎಂಬುದು ಇದರಿಂದ ಸಾಬೀತಾಗಿದೆʼ ಎಂದಿದ್ದರು. ʼದೇಶದ ಗೌರವ, ಸಂಪ್ರದಾಯ, ಪಡೆಗಳ ಶಿಸ್ತಿನೊಂದಿಗೆ ಸರ್ಕಾರವು ರಾಜಿ ಮಾಡಿಕೊಳ್ಳುವುದನ್ನು ಬಿಡಬೇಕು’ ಎಂದು ಕಿಡಿ ಕಾರಿದ್ದರು. ಅಲ್ಲದೆ ಪ್ರಿಯಾಂಕಾ ಗಾಂಧಿ ಕೂಡ ಈ ಯೋಜನೆ ವಿರೋಧಿಸಿ ಟ್ವೀಟ್ ಮಾಡಿದ್ದರು. ಹೀಗಿರುವಾಗ ಪಂಜಾಬ್‌ನಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಸಂಸದರಾದ ಮನೀಶ್ ತಿವಾರಿ ಈ ಯೋಜನೆಯ ಪರವಾಗಿ ಏಕೆ ಮಾತನಾಡಿದ್ದಾರೆ ಎಂಬುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್‌ನ ಹಿರಿಯ ನಾಯಕರು ಒಬ್ಬರ ಹಿಂದೆ ಒಬ್ಬರು ಪಕ್ಷ ಬಿಡುತ್ತಿರುವ ಹೊತ್ತಿನಲ್ಲಿ ಮನೀಶ್ ತಿವಾರಿಯ ಈ ಹೇಳಿಕೆಯ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಕಳೆದ ಐದು ತಿಂಗಳಲ್ಲಿ ಕಾಂಗ್ರೆಸ್‌ನ ಏಳು ಪ್ರಮುಖ ನಾಯಕರು ಪಕ್ಷವನ್ನು ತೊರೆದಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಬಲರಾಂ ಜಾಖಡ್, ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್ ಪಟೇಲ್, ಮಾಜಿ ಕೇಂದ್ರ ಮಂತ್ರಿಗಳಾದ ಅಶ್ವಿನ್ ಕುಮಾರ್, ಆರ್‌ಪಿಎನ್ ಸಿಂಗ್, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಹಿರಿಯ ನಾಯಕರಾದ ಕಪಿಲ್ ಸಿಬಲ್, ಎಐಸಿಸಿ ವಕ್ತಾರ, ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಇದೇ ಹಾದಿಯಲ್ಲಿ ಮನೀಶ್ ತಿವಾರಿಯು ಇದ್ದಾರೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಕೆಲವೆಡೆ ಹಿಂಸಾಚಾರ ಕೂಡ ನಡೆದಿದೆ. ಎಲ್ಲ ವಿರೋಧ ಪಕ್ಷಗಳು ಸರ್ಕಾರದ ಈ ನಡೆಯನ್ನು ವಿರೋಧಿಸಿದ್ದು, ಅಭ್ಯರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.
ಇನ್ನೂ ಓದಿ |Agneepath | ನೀವೂ ʼಅಗ್ನಿಪಥ್ʼನಲ್ಲಿ ಸಾಗಿ ಸೇನೆ ಸೇರಬೇಕೇ? ನೇಮಕ ಹೇಗೆ ನಡೆಯುತ್ತದೆ ಗೊತ್ತೆ?