Site icon Vistara News

ನಿವೃತ್ತ ಅಗ್ನಿವೀರರಿಗೆ ಬಿಜೆಪಿ ಆಫೀಸಲ್ಲಿ ಸೆಕ್ಯುರಿಟಿ ಕೆಲಸ ಕೊಡ್ತೇನೆ ಎಂದು ಹೇಳಿ ವಿವಾದಕ್ಕೆ ಸಿಲುಕಿದ ಬಿಜೆಪಿ ನಾಯಕ!

Kailash vijay vargeeya

ನವ ದೆಹಲಿ: ಅಗ್ನಿಪಥ್‌ ಯೋಜನೆಯಲ್ಲಿ ಸೇನೆಗೆ ನೇಮಕಗೊಳ್ಳುವ ಅಗ್ನಿವೀರರು ನಾಲ್ಕು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಮುಂದೇನು ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಬಿಜೆಪಿ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿ ವಾಕ್‌ ಪ್ರಹಾರಕ್ಕೆ ಗುರಿಯಾಗಿದ್ದಾರೆ. ಬಿಜೆಪಿ ಆಫೀಸಲ್ಲಿ ಸೆಕ್ಯುರಿಟಿ ನೇಮಕ ಮಾಡುವ ಸಂದರ್ಭ ಬಂದಾಗ ಅಗ್ನಿವೀರರಿಗೆ ಆದ್ಯತೆ ನೀಡುವುದಾಗಿ ಅವರು ಹೇಳಿದ ಮಾತು ಭಾರಿ ಚರ್ಚೆಗೆ ಕಾರಣವಾಗಿದೆ.

ಅಂದ ಹಾಗೆ, ಇಂಥ ಹೇಳಿಕೆ ನೀಡಿ ಪೇಚಿಗೆ ಸಿಲುಕಿದವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯ ವರ್ಗೀಯ.

ಇಂದೋರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದು ಇಷ್ಟು: ಶಿಸ್ತು ಮತ್ತು ಆದೇಶಗಳನ್ನು ಪಾಲಿಸುವುದು ಮಿಲಿಟರಿ ತರಬೇತಿಯ ಅವಿಭಾಜ್ಯ ಅಂಗ. ಒಬ್ಬ ಅಗ್ನಿವೀರ ರಕ್ಷಣಾ ಕ್ಷೇತ್ರದಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ೨೫ನೇ ವಯಸ್ಸಿಗೆ ನಿವೃತ್ತನಾಗಿ ಹೊರಬರುತ್ತಾನೆ ಎಂದಿಟ್ಟುಕೊಳ್ಳಿ, ಆಗ ಅವನ ಕೈಯಲ್ಲಿ ೧೧ ಲಕ್ಷ ರೂಪಾಯಿ ಇರುತ್ತದೆ. ನಾನೊಬ್ಬ ಅಗ್ನಿವೀರ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿರುತ್ತದೆ. ಒಂದು ವೇಳೆ ನನಗೆ ಬಿಜೆಪಿ ಕಚೇರಿಗೆ ಸೆಕ್ಯುರಿಟಿ ನೇಮಕ ಮಾಡಿಕೊಳ್ಳಬೇಕು ಎಂದು ಅನಿಸಿದರೆ ನಾನು ಅಗ್ನಿವೀರರಿಗೇ ಆದ್ಯತೆ ಕೊಡುತ್ತೇನೆ.

ಎಲ್ಲ ಕಡೆಯಿಂದ ದಾಳಿ
ವಿಜಯ ವರ್ಗೀಯ ಅವರು ಮಾತನಾಡಿದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಪ್ರತ್ಯಕ್ಷವಾಗುತ್ತಿದ್ದಂತೆಯೇ ಎಲ್ಲ ಕಡೆಯಿಂದ ದಾಳಿಗಳು ಶುರುವಾದವು. ಬಿಜೆಪಿಯ ಶಾಸಕರೇ ಆಗಿರುವ ವರುಣ್‌ ಗಾಂಧಿಯಿಂದ ಶುರುವಾಗಿ ಕಾಂಗ್ರೆಸ್‌ ನಾಯಕರವರೆಗೆ ಹಲವರು ತರಾಟೆಗೆ ತೆಗೆದುಕೊಂಡರು.
ʻʻಯಾವ ಭಾರತೀಯ ಸೈನಿಕರ ಶೌರ್ಯ ಸಾಹಸಗಳನ್ನು ಜಗತ್ತೇ ಕೊಂಡಾಡುತ್ತದೋ ಅಂಥ ಸೇನಾನಿಗಳನ್ನು ರಾಜಕೀಯ ಪಕ್ಷವೊಂದರ ಕಚೇರಿ ಕಾಯುವ ಕೆಲಸಕ್ಕೆ ಆಹ್ವಾನಿಸುತ್ತಾರೆ ಎಂದರೆ ನಾಚಿಕೆಗೇಡು. ಅಂಥ ಆಫರ್‌ಗಳನ್ನು ಅವರೇ ಇಟ್ಟುಕೊಳ್ಳಲಿ ಎಂದು ವರುಣ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ʻʻಸೇನೆ ಎನ್ನುವುದು ತಾಯಿ ಭಾರತಿಯ ಸೇವೆ ಮಾಡಲು ಸಿಗುವ ಒಂದು ಅವಕಾಶ, ಅದು ಬರೀ ಉದ್ಯೋಗವಲ್ಲʼ ಎಂದಿದ್ದಾರೆ.

ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ವಿಜಯ ವರ್ಗೀಯ ಅವರ ಹೇಳಿಕೆಯನ್ನು ಗೇಲಿ ಮಾಡಿದ್ದು, ʻʻ೨೦೧೯ರಲ್ಲಿ ಮೈ ಭಿ ಚೌಕಿದಾರ್‌ ಎನ್ನುವ ಆಂದೋಲನ ಶುರು ಮಾಡಿದಾಗಲೇ ಬಿಜೆಪಿ ಏನು ಮಾಡುವುದಕ್ಕೆ ಹೊರಟಿದೆ ಎನ್ನುವುದು ಅರ್ಥವಾಗಿತ್ತುʼʼ ಎಂದಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ, ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರಂತೂ ಭಾವುಕರಾಗಿ ಬೈದಿದ್ದಾರೆ. ʻʻಈ ದೇಶದ ಯುವಕರು ಸೇನೆಯನ್ನು ಸೇರುವುದು ರಾಷ್ಟ್ರ ಸೇವೆ ಮಾಡುವುದಕ್ಕಾಗಿ. ಬಿಜೆಪಿ ಕಚೇರಿಯ ಹೊರಗೆ ಬಾಗಿಲು ಕಾಯುವುದಕ್ಕಾಗಿ ಅಲ್ಲ. ಈ ದೇಶದ ಯುವಕರನ್ನು, ಸೈನಿಕರನ್ನು ಅಪಮಾನ ಮಾಡಬೇಡಿʼʼ ಎಂದಿದ್ದಾರೆ ಕೇಜ್ರಿವಾಲ್‌.

ಟೂಲ್‌ ಕಿಟ್‌ ಗ್ಯಾಂಗ್‌ ಕಿತಾಪತಿ ಎಂದ ಕೈಲಾಶ್‌
ಈ ನಡುವೆ ಎಲ್ಲ ಕಡೆಯಿಂದ ದಾಳಿಗೆ ಒಳಗಾದ ಕೈಲಾಶ್‌ ವಿಜಯ ವರ್ಗೀಯ ಅವರು ಸ್ಪಷ್ಟೀಕರಣ ನೀಡಿದ್ದಾರೆ. ʻʻನಾನು ಹೇಳಿದ್ದನ್ನು ಟೂಲ್‌ ಕಿಟ್‌ ಗ್ಯಾಂಗ್‌ ತಿರುಚಿದೆʼ ಎಂದು ಹರಿಹಾಯ್ದಿದ್ದಾರೆ. ʻʻನಾಲ್ಕು ವರ್ಷಗಳ ಸೇವೆ ಸಲ್ಲಿಸಿ ಹೊರ ಬರುವ ಅಗ್ನಿವೀರರು ಸಶಕ್ತರಾಗಿರುತ್ತಾರೆ. ಅವರನ್ನು ಯಾವ ಕ್ಷೇತ್ರದಲ್ಲಿ ಬೇಕಾದರೂ ಬಳಸಿಕೊಳ್ಳಬಹುದುʼʼ ಎಂಬರ್ಥದಲ್ಲಿ ತಾನು ಮಾತನಾಡಿದ್ದಾಗಿ ಹೇಳಿದರು.

ಸಚಿವ ಕಿಶನ್‌ ರೆಡ್ಡಿ ಅಡ್ಡಮಾತು
ವಿಜಯ ವರ್ಗೀಯ ಅವರಷ್ಟೇ ಅಲ್ಲ, ಕೇಂದ್ರ ಸಚಿವ ಕಿಶನ್‌ ರೆಡ್ಡಿ ಇಂಥಹುದೇ ಅಡ್ಡ ಮಾತು ಆಡಿ ಎಡವಟ್ಟು ಮಾಡಿಕೊಂಡಿದ್ದಾರೆ. ʻʻಅಗ್ನಿಪಥ್‌ ಯೋಜನೆಯಡಿ ಸಶಸ್ತ್ರ ಪಡೆಗಳು ಚಾಲಕರು, ಎಲೆಕ್ಟ್ರಿಷಿಯನ್‌ ಮೊದಲಾದ ಕಾರ್ಮಿಕ ಶಕ್ತಿಯನ್ನು ರೂಪಿಸುವ ತರಬೇತಿ ಕೇಂದ್ರಗಳಾಗಿ ಕೆಲಸ ಮಾಡಲಿವೆʼʼ ಎಂಬ ಅವರ ಮಾತು ಹಲವರ ಬಾಯಿಗೆ ಆಹಾರವಾಗಿದೆ.
ʻʻಸೇನೆಯಲ್ಲಿ ಸೇವೆ ಮಾಡುವುದು ಎನ್ನುವುದು ಯಾವುದಕ್ಕೂ ಹೋಲಿಕೆ ಮಾಡಲಾಗದ ಒಂದು ಪ್ರತಿಷ್ಠಿತ ವೃತ್ತಿ. ಅಲ್ಲಿ ಹೋದವರು ಒಂದೋ ದೇಶಕ್ಕಾಗಿ ಪ್ರಾಣಹರಣಕ್ಕೂ ಸಿದ್ಧರಾಗಿರುತ್ತಾರೆ. ಪ್ರಾಣ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಅಂಥ ಅಗ್ನಿವೀರರನ್ನು ಧೋಬಿಯಾಗಲು, ಚಾಲಕರಾಗಲು ತರಬೇತಿ ಕೊಡುತ್ತೇವೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಅವರಿಗೆ ಧೋಬಿಗಳು, ಚಾಲಕರು ಬೇಕು ಎಂದಾದರೆ ಸೇನೆಯಲ್ಲಿ ನಾಲ್ಕು ವರ್ಷ ಕಳೆಯುವಂತೆ ಮಾಡಬೇಕಾ? ಅಗ್ನಿವೀರರು ಎಂದರೆ ಬಿಜೆಪಿಗೆ ಬೇರೇನೂ ಅಲ್ಲ, ಬಾಡಿಗೆ ಚೌಕೀದಾರರುʼʼ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್‌ ಓವೈಸಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ| Agnipath: ಅಗ್ನಿವೀರರು ಕರ್ತವ್ಯದಲ್ಲಿದ್ದಾಗ ಹುತಾತ್ಮರಾದರೆ ಸಿಗಲಿದೆ ಒಂದು ಕೋಟಿ ರೂ. ಪರಿಹಾರ

Exit mobile version