ಲಖನೌ: ಭಾರತ ಸೇರಿ ಜಗತ್ತಿನಾದ್ಯಂತ ಗಂಡ-ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಗಳಿಗೆ ಭಿನ್ನಾಭಿಪ್ರಾಯ ಉಂಟಾಗಿ, ವಿಚ್ಛೇದನ (Divorce) ಪಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ಆಗ್ರಾದಲ್ಲಿ ಮಹಿಳೆಯೊಬ್ಬರು ತೂಕ ಇಳಿಸಿಕೊಳ್ಳಲು ನೆರವಾಗಲಿಲ್ಲ, ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಜಿಮ್ ಟ್ರೇನರ್ ಆಗಿರುವ ಪತಿಯಿಂದ ವಿಚ್ಛೇದನ ಬಯಸಿದ್ದಾರೆ. ವಿಚ್ಛೇದನ ಬಯಸಿ ಅವರು ಆಗ್ರಾದಲ್ಲಿರುವ ಕೌಟುಂಬಿಕ ಸಮಾಲೋಚನಾ ಕೇಂದ್ರಕ್ಕೆ (Family Counselling Centre) ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆಯು ಸ್ವಲ್ಪ ದಪ್ಪಗಿದ್ದು, ಅವರು ಜಿಮ್ ಟ್ರೇನರ್‌ನನ್ನೇ ಮದುವೆಯಾಗಿದ್ದರು. ಜಿಮ್ ಟ್ರೇನರ್ ಕಟ್ಟುಮಸ್ತಾದ ದೇಹಕ್ಕೆ ಮರುಳಾಗಿ ಅವರು ಮದುವೆಯಾಗಿದ್ದರು. ಮದುವೆಯಾಗುವ ವೇಳೆ ಜಿಮ್ ಟ್ರೇನರ್‌ಗೆ ಅವರು ಒಂದು ಕಂಡಿಷನ್ ಹಾಕಿದ್ದರು. ಮದುವೆಯಾದ ಬಳಿಕ ನಾನು ತೆಳ್ಳಗಾಗಲು ಸಹಕರಿಸಬೇಕು, ಜಿಮ್‌ನಲ್ಲಿ ತರಬೇತಿ ನೀಡಬೇಕು ಎಂಬುದಾಗಿ ಅವರು ಷರತ್ತು ಹಾಕಿದ್ದರು. ಮದುವೆಗೂ ಮುನ್ನ ಜಿಮ್ ಟ್ರೇನರ್ ಇದೇನ್ ಮಹಾ ಎಂದು ಒಪ್ಪಿಕೊಂಡಿದ್ದರು. ಆದರೆ, ಮದುವೆಯಾದ ಬಳಿಕ ತೂಕ ಇಳಿಸಿಕೊಳ್ಳಲು ಪತಿ ನೆರವು ನೀಡುತ್ತಿಲ್ಲ ಎಂಬುದು ಮಹಿಳೆಯ ಆರೋಪವಾಗಿದೆ.
ಮದುವೆ ಬಳಿಕ ನಡೆದಿದ್ದೇನು?
ಮಹಿಳೆ ಹಾಗೂ ಜಿಮ್ ಟ್ರೇನರ್ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೆಂಡತಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಜಿಮ್ ಟ್ರೇನರ್ ಹರಸಾಹಸ ಪಟ್ಟಿದ್ದಾರೆ. ಪತ್ನಿಯನ್ನು ಜಿಮ್‌ಗೆ ಕರೆಸಿಕೊಂಡು ಟ್ರೇನಿಂಗ್ ಕೊಟ್ಟಿದ್ದಾರೆ. ಜಿಮ್‌ನಲ್ಲಿ ಕಸರತ್ತು ನಡೆಸಿದರೂ ಮಹಿಳೆಯ ತೂಕವು 75 ಕೆ.ಜಿಯೇ ಇದೆ. ಮದುವೆಗೆ ಮುನ್ನ ಎಷ್ಟು ಕೆ.ಜಿ ಇದ್ದರೋ, ಈಗಲೂ ಅಷ್ಟೇ ಇದ್ದಾರೆ. ಇದರಿಂದ ಕುಪಿತಗೊಂಡ ಅವರು ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ನನ್ನ ಆಸೆಯನ್ನು ಈಡೇರಿಸುವಲ್ಲಿ, ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಪತಿ ವಿಫಲನಾಗಿದ್ದಾನೆ. ಹಾಗಾಗಿ ನನಗೆ ವಿಚ್ಛೇದನ ಬೇಕಾಗಿದೆ ಎಂಬುದಾಗಿ ಅವರು ಕೌಟುಂಬಿಕ ಸಮಾಲೋಚನಾ ಕೇಂದ್ರದಲ್ಲಿ ಹೇಳಿಕೆ ನೀಡಿದ್ದಾರೆ.
“ಇದೇನು ದೊಡ್ಡ ವಿಷಯವಲ್ಲ. ಮಾತನಾಡಿ ಬಗೆಹರಿಸಿಕೊಳ್ಳಿ” ಎಂಬುದಾಗಿ ಕೌಟುಂಬಿಕ ಸಮಾಲೋಚನಾ ಕೇಂದ್ರದಲ್ಲಿ ಸಮಾಲೋಚಕರು ಸಲಹೆ ನೀಡಿದರೂ ಮಹಿಳೆಯು ಅದಕ್ಕೆ ಒಪ್ಪಿಲ್ಲ. “ನನಗೆ ಕೊಟ್ಟ ಮಾತನ್ನು ಗಂಡ ಉಳಿಸಿಕೊಂಡಿಲ್ಲ. ಇಂತಹ ಮನಸ್ಥಿತಿ ಇರುವ ಪತಿಯ ಜತೆ ಸಂಸಾರ ಮಾಡಲು ನನಗೆ ಇಷ್ಟವಿಲ್ಲ” ಎಂಬುದಾಗಿ ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಇನ್ನು. ಆಕೆಯ ಪತಿಯು, “ನಾನು ಪತ್ನಿಯ ಜತೆ ಸಂಸಾರ ಮಾಡಲು ಯಾವುದೇ ತೊಂದರೆ ಇಲ್ಲ. ವಿಚ್ಛೇದನ ಕೊಡಲು ಮನಸ್ಸಿಲ್ಲ” ಎಂದಿದ್ದಾರೆ. ಇನ್ನೊಂದು ಸಲ ಸಮಾಲೋಚನೆ ನಡೆಸಲು ಸಮಾಲೋಚಕರು ಮತ್ತೊಂದು ದಿನ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆಗಲಾದರೂ ಪತ್ನಿಯು ಮನಸ್ಸು ಬದಲಿಸಬಹುದೇನೋ ಎಂಬ ನಿರೀಕ್ಷೆಯಲ್ಲಿ ಜಿಮ್ ಟ್ರೇನರ್ ಇದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Niveditha Gowda: ಡಿವೋರ್ಸ್ ಬಳಿಕ ಹೊಸ ರೀಲ್ಸ್ ಹಂಚಿಕೊಂಡ ನಿವೇದಿತಾ: ಲೈಕ್ಸ್ ಸುರಿಮಳೆ!