Site icon Vistara News

‘ಡ್ರೋನ್‌’ ಮೂಲಕವೇ ಆರೋಗ್ಯ ಕೇಂದ್ರಕ್ಕೆ ರಕ್ತ ರವಾನೆ; ‘ಪ್ರತಾಪ’ ಮೆರೆದ ಏಮ್ಸ್‌ ತಜ್ಞರು!

Drone

AIIMS Bhubaneswar Uses Drone To Transport Blood To Health Centre

ಭುವನೇಶ್ವರ: ಭಾರತ ಸೇರಿ ಜಗತ್ತಿನಾದ್ಯಂತ ಡ್ರೋನ್‌ ತಂತ್ರಜ್ಞಾನವು (Drone Technology) ಮೋಡಿ ಮಾಡಿದೆ. ಡ್ರೋನ್‌ಗಳ ಮೂಲಕ ಅದ್ಭುತ ವಿಡಿಯೊ ಚಿತ್ರೀಕರಣ, ಡ್ರೋನ್‌ಗಳ ಮೂಲಕ ಗಡಿಯಲ್ಲಿ ಭಯೋತ್ಪಾದನೆ ಮೇಲೆ ನಿಗ್ರಹ, ಶತ್ರುಗಳ ಮೇಲೆ ದಾಳಿ, ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ ಭದ್ರತೆ ಸೇರಿ ಹಲವು ಕಾರಣಗಳಿಗಾಗಿ ಡ್ರೋನ್‌ಗಳು (Drones) ಈಗ ಅತ್ಯವಶ್ಯಕವಾಗಿವೆ. ಇಂತಹ ಡ್ರೋನ್‌ಗಳು ಈಗ ಆರೋಗ್ಯ ಕ್ಷೇತ್ರಕ್ಕೂ ಉಪಯುಕ್ತವಾಗಿವೆ. ಒಡಿಶಾದಲ್ಲಿರುವ ಭುವನೇಶ್ವರ ಏಮ್ಸ್‌ ತಜ್ಞರು ಡ್ರೋನ್‌ ಮೂಲಕ ಆರೋಗ್ಯ ಕೇಂದ್ರಗಳಿಗೆ ರಕ್ತವನ್ನು ರವಾನಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲೂ ಡ್ರೋನ್‌ಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂದು ತೋರಿಸಿಕೊಂಡಿದ್ದಾರೆ.

ಏಮ್ಸ್‌ ಭುವನೇಶ್ವರದ ವೈದ್ಯರು, ತಜ್ಞರು ಹಾಗೂ ಅಧಿಕಾರಿಗಳು ಸೇರಿ ಭುವನೇಶ್ವರದಿಂದ ತಾಂಗಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ 2 ಕೆ.ಜಿ ತೂಕದ ರಕ್ತವನ್ನು ಕಳುಹಿಸಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಪ್ರಾಯೋಗಿಕವಾಗಿ ಏಮ್ಸ್‌ ಅಧಿಕಾರಿಗಳು ರಕ್ತವನ್ನು ರವಾನೆ ಮಾಡಿದ್ದಾರೆ. ಕೇವಲ 1 ಗಂಟೆ 10 ನಿಮಿಷದಲ್ಲಿ ಸುಮಾರು 120 ಕಿಲೋಮೀಟರ್‌ ಕ್ರಮಿಸಿದ ಡ್ರೋನ್‌, ನಿಗದಿತ ಕೇಂದ್ರಕ್ಕೆ ರಕ್ತವನ್ನು ರವಾನಿಸಿದೆ. ಏಮ್ಸ್‌ ವೈದ್ಯರು, ತಜ್ಞರು ಹಾಗೂ ಅಧಿಕಾರಿಗಳ ಪ್ರಯೋಗಕ್ಕೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಸ್ಕೈ ಏರ್‌ ಮೊಬಿಲಿಟಿ ಎಂಬ ಸಂಸ್ಥೆಯು ಎಮ್ಸ್‌ ಸಂಸ್ಥೆಗೆ ಡ್ರೋನ್‌ ತಯಾರಿಸಿ ಕೊಟ್ಟಿದೆ. ಈ ಡ್ರೋನ್‌ ಮೂಲಕವೇ ಎಮ್ಸ್‌ ಅಧಿಕಾರಿಗಳು ಯಶಸ್ವಿಯಾಗಿ ಆರೋಗ್ಯ ಕೇಂದ್ರಕ್ಕೆ ರಕ್ತವನ್ನು ಕಳುಹಿಸಿದ್ದಾರೆ. “ಡ್ರೋನ್‌ ಮೂಲಕ ರಕ್ತ ಸೇರಿ ಯಾವುದೇ ತುರ್ತು ವೈದ್ಯಕೀಯ ಪರಿಕರಗಳನ್ನು ಸಾಗಿಸುವುದು ಏಮ್ಸ್‌ ಗುರಿಯಾಗಿದೆ. ಹಾಗಾಗಿ, ಪ್ರಾಯೋಗಿಕವಾಗಿ ಡ್ರೋನ್‌ ಮೂಲಕ ತಾಂಗಿ ಆರೋಗ್ಯ ಕೇಂದ್ರಕ್ಕೆ ಯಶಸ್ವಿಯಾಗಿ ರಕ್ತವನ್ನು ಸಾಗಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಪೂರ್ಣಕಾಲಿಕವಾಗಿ ಜಾರಿಗೆ ತರುವ ಚಿಂತನೆ ಇದೆ” ಎಂದು ಭುವನೇಶ್ವರ ಏಮ್ಸ್‌ ನಿರ್ದೇಶಕ ಆಶುತೋಷ್‌ ವಿಶ್ವಾಸ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅವಧಿಗೂ ಮುನ್ನ ಹೆರಿಗೆ: ಅತೀ ಕಡಿಮೆ ತೂಕದ ಶಿಶು ರಕ್ಷಿಸಿದ ವೈದ್ಯರು

ಸಂಚಾರ ದಟ್ಟಣೆ ಹೆಚ್ಚಿರುವ ನಗರಗಳು, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅನುಕೂಲವಾಗಲು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಕ್ಷಿಪ್ರವಾಗಿ ರಕ್ತ ಸೇರಿ ಯಾವುದೇ ವೈದ್ಯಕೀಯ ಪರಿಕರಗಳನ್ನು ಕ್ಷಿಪ್ರವಾಗಿ ಸಾಗಿಸಲು ಡ್ರೋನ್‌ ತಂತ್ರಜ್ಞಾನವು ಉಪಯುಕ್ತವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆಯೇ ಭುವನೇಶ್ವರ ಏಮ್ಸ್‌ ತಜ್ಞರು ಡ್ರೋನ್‌ ಮೂಲಕ ಯಶಸ್ವಿಯಾಗಿ ರಕ್ತವನ್ನು ರವಾನಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version