ನವದೆಹಲಿ: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಏರ್ ಇಂಡಿಯಾ (Air India) ಕಂಪನಿಗೆ ಬರೋಬ್ಬರಿ 1.10 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (Directorate General of Civil Aviation-DGCA) ತಿಳಿಸಿದೆ. ಬೋಯಿಂಗ್ ಬಿ 777 ವಿಮಾನಗಳ ಕಾರ್ಯಾಚರಣೆ ವೇಳೆ ಆಮ್ಲಜನಕಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಸುರಕ್ಷತಾ ಕೈಪಿಡಿಗಳನ್ನು ಅನುಸರಿಸದ ಕಾರಣ ಈ ದಂಡ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ / ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೋ ಮಧ್ಯೆ ಸಂಚರಿಸುವ ಬೋಯಿಂಗ್ ಬಿ 777 ವಿಮಾನದಲ್ಲಿ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು ಮೇಲೆ ಏರ್ ಇಂಡಿಯಾ ವಿರುದ್ಧ ವಿಮಾನಯಾನ ಸಂಸ್ಥೆಯ ಉದ್ಯೋಗಿಯಿಂದ ದೂರು ಸಲ್ಲಿಕೆಯಾಗಿತ್ತು. ʼʼಮಾನದಂಡಗಳು ಮತ್ತು ವಿಮಾನ ತಯಾರಕರು ಸೂಚಿಸಿದ ಕಾರ್ಯಕ್ಷಮತೆಯ ನಿಯಮಗಳನ್ನು ಅನುಸರಿಸದ ಕಾರಣ ಏರ್ ಇಂಡಿಯಾಕ್ಕೆ 1.10 ಕೋಟಿ ರೂ.ಗಳ ದಂಡವನ್ನು ವಿಧಿಸಲಾಗಿದೆʼʼ ಎಂದು ಡಿಜಿಸಿಎ ತಿಳಿಸಿದೆ. ಕಳೆದ ವಾರವಷ್ಟೇ ಏರ್ ಇಂಡಿಯಾ ಕಂಪೆನಿಗೆ ಸುಮಾರು 30 ಲಕ್ಷ ರೂ. ವಿಧಿಸಲಾಗಿತ್ತು.
ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಯಾಣಿಕರಿಗೆ ಒದಗಿಸಬೇಕಾದ ಸೌಲಭ್ಯಗಳಿಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಏರ್ ಇಂಡಿಯಾಕ್ಕೆ 10 ಲಕ್ಷ ರೂ.ಗಳ ದಂಡವನ್ನೂ ವಿಧಿಸಲಾಗಿತ್ತು. ಡಿಜಿಸಿಎ ದೆಹಲಿ, ಕೊಚ್ಚಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿನ ವಿಮಾನಯಾನ ಸಂಸ್ಥೆಗಳ ತಪಾಸಣೆ ನಡೆಸಿದ್ದ ವೇಳೆ ನಿಯಮಗಳ ಉಲ್ಲಂಘನೆ ಕಂಡು ಬಂದಿತ್ತು.
ಇಂಡಿಗೋ ಏರ್‌ಲೈನ್‌ಗೂ ಭಾರೀ ದಂಡ
ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಏರುವ ಸ್ಥಳಗಳಲ್ಲಿ ಡಾಮರು ರಸ್ತೆಯ ಮೇಲೆ ಪ್ರಯಾಣಿಕರು ಕುಳಿತು ಆಹಾರ ಸೇವಿಸುವಂತಹ ಪರಿಸ್ಥಿತಿ ನಿರ್ಮಿಸಿದ ಆರೋಪದ ಮೇರೆಗೆ ಇಂಡಿಗೋ ವಿಮಾನ ಯಾನ ಕಂಪೆನಿಗೆ ಡಿಸಿಎಎಸ್ 1.2 ಕೋಟಿ ರೂ. ದಂಡ ವಿಧಿಸಿತ್ತು. ಮಾತ್ರವಲ್ಲ ಪ್ರಯಾಣಿಕರಿಗೆ ಅನನುಕೂಲ ಕಲ್ಪಿಸಿದ ಕಾರಣಕ್ಕಾಗಿ ಮುಂಬೈ ವಿಮಾನ ನಿಲ್ದಾಣಕ್ಕೂ 30 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಪ್ರಯಾಣಿಕರು ಡಾಮರು ನೆಲದ ಮೇಲೆ ಕುಳಿತು ಆಹಾರ ತಿನ್ನುತ್ತಿರುವ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಡಿಗೋ ಮತ್ತು ಮುಂಬೈ ವಿಮಾನ ನಿಲ್ದಾಣಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು ಮತ್ತು ಇಂಡಿಗೋಗೆ ದಂಡದ ಮೊತ್ತವನ್ನು 30 ದಿನಗಳ ಒಳಗೆ ಪಾವತಿಸಲು ಸೂಚಿಸಿತ್ತು.
ಇದನ್ನೂ ಓದಿ: IndiGo Flight: ವಿಮಾನ ಹಾರಾಟ ವಿಳಂಬ ಎಂದು ಪೈಲಟ್‌ಗೆ ಹೊಡೆದ ಪ್ರಯಾಣಿಕ; ವಿಡಿಯೊ ಇಲ್ಲಿದೆ
ಪೈಲಟ್‌ಗೆ ಹೊಡೆದ ಪ್ರಯಾಣಿಕ
ವಿಮಾನ ವಿಳಂಬವಾದ ಹಿನ್ನೆಲೆಯಲ್ಲಿ ಪ್ರಯಾಣಿಕನೊಬ್ಬ ಪೈಲಟ್ ಮೇಲೆ ಹಲ್ಲೆ ನಡೆಸಿದ ಘಟನೆ ಜನವರಿ 14ರಂದು ನಡೆದಿತ್ತು. ದಟ್ಟ ಮಂಜಿನಿಂದಾಗಿ ವಿಮಾನದ ಹಾರಾಟ ವಿಳಂಬವಾಗಿತ್ತು. ಸುಮಾರು 13 ತಾಸು ಪ್ರಯಾಣಿಕರು ವಿಮಾನದಲ್ಲಿಯೇ ಕಾದು ಕುಳಿತಿದ್ದರು. ದೆಹಲಿಯಿಂದ ಗೋವಾಗೆ ಹೊರಡುವ ಈ ವಿಮಾನದ ಪೈಲಟ್ ಎಲ್ಲ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವಿಮಾನ ಹಾರಾಟ ವಿಳಂಬವಾಗಿರುವ ಕುರಿತು ಹೇಳುತ್ತಿದ್ದರು. ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪೈಲಟ್ ಮೇಲೆ ಎರಗಿ ಹಲ್ಲೆ ನಡೆಸಿದ್ದ. ಈ ಹಿನ್ನೆಲೆಯಲ್ಲಿ ಹೊಸ ಆದೇಶ ಹೊರಡಿಸಿದ್ದ ಡಿಜಿಸಿಎ ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಅಂತಹ ವಿಮಾನಗಳ ಪ್ರಯಾಣ ರದ್ದುಗೊಳಿಸಬೇಕು ಎಂದು ಸೂಚಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ