Site icon Vistara News

Air India: ಹಮಾಸ್‌ ಉಗ್ರರ ದಾಳಿ; ಇಸ್ರೇಲ್‌ಗೆ ವಿಮಾನ ಸಂಚಾರ ರದ್ದುಗೊಳಿಸಿದ ಏರ್‌ ಇಂಡಿಯಾ!

Air India Flight

Air India cancels flights to and from Tel Aviv after Hamas attacks Israel

ನವದೆಹಲಿ: ಇಸ್ರೇಲ್‌ ಮೇಲೆ ಸುಮಾರು 5 ಸಾವಿರ ರಾಕೆಟ್‌ಗಳೊಂದಿಗೆ ಪ್ಯಾಲೆಸ್ತೀನ್‌ನ ಗಾಜಾಪಟ್ಟಿಯಲ್ಲಿರುವ ಹಮಾಸ್‌ ಉಗ್ರರು ಭೀಕರ ದಾಳಿ (Israel Palestine War) ನಡೆಸಿದ್ದಾರೆ. ಹಾಗೆಯೇ, ಇಸ್ರೇಲ್‌ನ ಬೀದಿ ಬೀದಿಗಳಲ್ಲಿ ಹಮಾಸ್‌ ಉಗ್ರರು ಗುಂಡಿನ ಸುರಿಮಳೆಗೈಯ್ಯುತ್ತಿದ್ದಾರೆ. ಇದರಿಂದಾಗಿ 100ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಹಾಗೆಯೇ, ಸಾವಿರಾರು ಜನ ಗಾಯಗೊಂಡಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ. ಇಂತಹ ಪರಿಸ್ಥಿತಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯು (Air India) ಇಸ್ರೇಲ್‌ನ ಟೆಲ್‌ ಅವಿವ್‌ಗೆ ತೆರಳುವ ಹಾಗೂ ಅಲ್ಲಿಂದ ದೆಹಲಿಗೆ ಆಗಮಿಸುವ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ.

“ಟೆಲ್‌ ಅವಿವ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಶನಿವಾರ (ಅಕ್ಟೋಬರ್‌ 7) ದೆಹಲಿಯಿಂದ ಟೆಲ್‌ಅವಿವ್‌ಗೆ ತೆರಳಬೇಕಿದ್ದ ಎಐ 139 ವಿಮಾನ ಹಾಗೂ ಟೆಲ್‌ಅವಿವ್‌ನಿಂದ ದೆಹಲಿಗೆ ಆಗಮಿಸಬೇಕಿದ್ದ ಎಐ 140 ವಿಮಾನದ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಮಾನಗಳ ಹಾರಾಟ ರದ್ದುಗೊಳಿಸಿದ ಕಾರಣ ಪ್ರಯಾಣಿಕರಿಗೆ ಕಲ್ಪಿಸಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರು, ವಿಮಾನದ ಸಿಬ್ಬಂದಿಯ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ವಿಮಾನಯಾನ ಸಂಸ್ಥೆ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

100ಕ್ಕೂ ಅಧಿಕ ಇಸ್ರೇಲಿಯರ ಸಾವು

ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನಲ್ಲಿರುವ ಗಾಜಾಪಟ್ಟಿಯ ಹಮಾಸ್‌ ಉಗ್ರರು ಮುಗಿಬಿದ್ದಿದ್ದಾರೆ. ಸುಮಾರು 5 ಸಾವಿರ ರಾಕೆಟ್‌ಗಳಿಂದ ಇಸ್ರೇಲ್‌ ಮೇಲೆ ದಾಳಿ ನಡೆಸಲಾಗಿದೆ. ಹಮಾಸ್‌ ಉಗ್ರರು ಇಸ್ರೇಲ್‌ನ ಬೀದಿ ಬೀದಿಗಳಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನ 100 ಜನ ಮೃತಪಟ್ಟಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್‌ ಮೇಲೆ ಉಗ್ರರು ದಾಳಿ ನಡೆಸಿದ ಕಾರಣ, ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ ಪೋಸ್ಟ್‌ ಮೂಲಕ ಸಾಂತ್ವನ ಹೇಳಿದ್ದಾರೆ. ಇಸ್ರೇಲ್‌ ಜತೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.

ಗಾಜಾಪಟ್ಟಿ ಮೇಲೆ ಇಸ್ರೇಲ್‌ ವಾಯುದಾಳಿ

ಇದನ್ನೂ ಓದಿ: Air India: ಒಬ್ಬಂಟಿ ಮಹಿಳಾ ಪ್ರಯಾಣಿಕರಿಗೆ ಏರ್‌ ಇಂಡಿಯಾ ವಿಮಾನದಲ್ಲಿ ಪರ್ಯಾಯ ಆಸನ ವ್ಯವಸ್ಥೆ!

ಮತ್ತೊಂದೆಡೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ಕೂಡ ವಾಯುದಾಳಿ ನಡೆಸಿದೆ. ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟರೆ, 1,600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಇಸ್ರೇಲ್‌ ದಾಳಿಗೆ ಹಮಾಸ್‌ ಉಗ್ರರ ಮೂರು ನೆಲೆಗಳು ಧ್ವಂಸಗೊಂಡಿವೆ. ಅವರ ಬೃಹತ್‌ ಕಟ್ಟಡಗಳು ಧರೆಗುರುಳಿವೆ. ಪ್ಯಾಲೆಸ್ತೀನ್‌ ಉಗ್ರರ ಮೇಲೆ ಯುದ್ಧ ಸಾರಿರುವ ಇಸ್ರೇಲ್‌, ಇನ್ನೂ ಭೀಕರ ದಾಳಿಯ ಮೂಲಕ ವೈರಿಗಳಿಗೆ ತಕ್ಕ ಪಾಠ ಕಲಿಸಲಿದೆ ಎಂದು ತಿಳಿದುಬಂದಿದೆ.

Exit mobile version