Site icon Vistara News

Air India Express: 30 ಸಿಬ್ಬಂದಿಯನ್ನು ವಜಾಗೊಳಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌; ಇಂದು 74 ವಿಮಾನಗಳ ಹಾರಾಟ ರದ್ದು

Air India Express

Air India Express

ನವದೆಹಲಿ: ಸಾಮೂಹಿಕ ಅನಾರೋಗ್ಯದ ರಜೆ (Sick Leave) ಹಾಕಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ವಿಮಾನದ 30 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆಯಲ್ಲಿ ಹಲವು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಹಾರಾಟ ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಅನೇಕ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ. ಇಂದು ಸಂಜೆ 4 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಒಂದು ವೇಳೆ ಈ ಅವಧಿಯೊಳಗೆ ಆಗಮಿಸದಿದ್ದರೆ ಶಿಸ್ತು ಕ್ರಮ ನಡೆಸಲಾಗುವುದು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಕೊರತೆಯಿಂದ ಗುರುವಾರ ಸುಮಾರು 74 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಬುಧವಾರ ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಸುಮಾರು 86 ವಿಮಾನಗಳ ಹಾರಾಟ ರದ್ದಾಗಿತ್ತು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದರು.

30ಕ್ಕೂ ಹೆಚ್ಚು ಸಿಬ್ಬಂದಿಗೆ ನೀಡಲಾದ ವಜಾ ಪತ್ರದಲ್ಲಿ, ಸಾಮೂಹಿಕ ರಜೆಯು ʼಯಾವುದೇ ಸಮರ್ಥನೀಯ ಕಾರಣವಿಲ್ಲದೆ ಪೂರ್ವ ನಿಯೋಜಿತ ಮತ್ತು ಸಂಘಟಿತ ಕೆಲಸದಿಂದ ದೂರವಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆʼ ಎಂದು ಉಲ್ಲೇಖಿಸಲಾಗಿದೆ. “ನಿಮ್ಮ ಪ್ರತಿಭಟನೆ ಕಾರಣದಿಂದ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ರದ್ದುಗೊಳಿಸಬೇಕಾಯಿತು. ಇದು ಕಂಪನಿಯ ಪ್ರಯಾಣಿಕರಿಗೆ ಭಾರಿ ಅನಾನುಕೂಲತೆಯನ್ನು ಉಂಟು ಮಾಡಿದೆ. ನಿಮ್ಮ ಕೃತ್ಯವು ಸಾರ್ವಜನಿಕ ಹಿತಾಸಕ್ತಿಯನ್ನು ವಿರುದ್ಧವಾಗಿದೆ. ಜತೆಗೆ ಕಂಪನಿಗೆ ಗಂಭೀರ ವಿತ್ತೀಯ ನಷ್ಟವನ್ನು ಉಂಟು ಮಾಡಿದೆʼʼ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಚೆನ್ನೈಯಿಂದ ಕೋಲ್ಕತ್ತಾ, ಚೆನ್ನೈಯಿಂದ ಸಿಂಗಾಪುರ, ತಿರುಚ್ಚಿಯಿಂದ ಸಿಂಗಾಪುರ ಮತ್ತು ಜೈಪುರದಿಂದ ಮುಂಬೈಗೆ ತೆರಳು ವಿಮಾನಗಳು ರದ್ದಾಗಿವೆ ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನೆಗೆ ಕಾರಣವೇನು?

ಟಾಟಾ ಗ್ರೂಪ್‌ ಜತೆಗೆ ಏರ್‌ ಇಂಡಿಯಾ ವಿಲೀನಗೊಂಡ ಬಳಿಕ ಸಿಬ್ಬಂದಿ ನಡುವೆ ತಾರತಮ್ಯ ಸಮಸ್ಯೆ ಉಂಟಾಗಿತ್ತು. ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೆಲವೊಂದು ಸಿಬ್ಬಂದಿಗೆ ಕೆಲದರ್ಜೆಯ ನೌಕರಿಯನ್ನು ನೀಡಲಾಗುತ್ತಿದೆ. ಪರಿಹಾರ ಪ್ಯಾಕೇಜ್‌ನ ಪ್ರಮುಖ ಭಾಗಗಳನ್ನು ಮಾರ್ಪಡಿಸಲಾಗಿದೆ ಅಥವಾ ತೆಗೆದು ಹಾಕಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಬಲವಂತವಾಗಿ ಬಾಯಿಮುಚ್ಚಿಸಲಾಗುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ವಿಮಾನಯಾನ ಸಂಸ್ಥೆಯು ಪ್ರಸ್ತುತ ಎಐಎಕ್ಸ್ ಕನೆಕ್ಟ್ (ಹಿಂದಿನ ಏರ್ ಏಷ್ಯಾ ಇಂಡಿಯಾ) ಅನ್ನು ತನ್ನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿದೆ. ಪೈಲಟ್ ಸಮಸ್ಯೆಗಳಿಂದಾಗಿ ಟಾಟಾ ಗ್ರೂಪ್ ಪೂರ್ಣ-ಸೇವಾ ವಾಹಕ ವಿಸ್ತಾರಾ ರದ್ದಾಗಿರುವ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಈ ಬಿಕ್ಕಟ್ಟು ಆರಂಭವಾಗಿದೆ. ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆ ಬಗ್ಗೆ ವಿಸ್ತಾರಾದಲ್ಲಿದ್ದ ಪೈಲಟ್‌ಗಳಲ್ಲೂ ಅಸಮಾಧಾನವು ಭುಗಿಲೆದ್ದಿತ್ತು. ಹೊಸ ಒಪ್ಪಂದಗಳನ್ನು ಅನುಸರಿಸಿ, ಪೈಲಟ್‌ಗಳು ವಿಮಾನಗಳನ್ನು ನಿರ್ವಹಿಸುವ ರೋಸ್ಟರ್‌ಗಳು ಮತ್ತು ಅವರ ವೇತನ ಪ್ಯಾಕೇಜ್‌ಗಳ ಅಂಶಗಳ ಬಗ್ಗೆ ಕಳವಳಗಳಿವೆ. ಈ ಎಲ್ಲ ಕಾರಣಗಳಿಂದ ಏರ್‌ ಇಂಡಿಯಾ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Air India | ಏರ್‌ ಇಂಡಿಯಾದಲ್ಲಿ ವಿಸ್ತಾರ, ಏರ್‌ ಏಷ್ಯಾ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಲೀನ ಶೀಘ್ರ

Exit mobile version