Site icon Vistara News

Air pollution: ದಿಲ್ಲಿ ಮಾತ್ರವಲ್ಲ, ಭಾರತದ ಇನ್ನೂ ಎರಡು ನಗರಗಳ ವಾಯು ವಿಶ್ವದಲ್ಲೇ ಅತಿ ಕಳಪೆ

Air Pollution

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ (Supreme court) ಆದೇಶದ ಹೊರತಾಗಿಯೂ ಹೊಸದಿಲ್ಲಿ ಸೇರಿದಂತೆ ರಾಜಧಾನಿ ಪ್ರದೇಶದಲ್ಲಿ (NCR) ದೀಪಾವಳಿ ಹಬ್ಬದ (Deepavali 2023) ಪ್ರಯುಕ್ತ ಭಾರಿ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಲಾಗಿದ್ದು, ಮೊದಲೇ ತೀವ್ರ ಹಂತಕ್ಕೆ ಹೋಗಿರುವ ವಾಯುಮಾಲಿನ್ಯ (Air pollution) ಇನ್ನಷ್ಟು ಹೆಚ್ಚಾಗಿದೆ.

ರಾಷ್ಟ್ರ ರಾಜಧಾನಿ ಪ್ರದೇಶದ ಎಲ್ಲ ಕಡೆಗಳಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ನಿಷೇಧವನ್ನು ಉಲ್ಲಂಘಿಸಿ ಪಟಾಕಿ ಸಿಡಿಸಲಾಗಿದೆ. ದೆಹಲಿಯ ಜನರು ಇದೀಗ ವಾತಾವರಣವನ್ನು ಆವರಿಸಿದ ದಟ್ಟವಾದ ಹೊಗೆಮಂಜಿನಿಂದ (Delhi Air pollution)  ಆವೃತಗೊಂಡಿದ್ದಾರೆ. ಸ್ವಿಡ್ಜರ್‌ಲ್ಯಾಂಡಿನ IQAir ಸಂಸ್ಥೆಯ ವಿಶ್ವದ ಅತ್ಯಂತ ವಾಯು ಕಲುಷಿತ ನಗರಗಳ ಟಾಪ್ 10 ಪಟ್ಟಿಯಲ್ಲಿ ದಿಲ್ಲಿ ಮೊದಲ ಸ್ಥಾನದಲ್ಲಿದೆ. ದೆಹಲಿಯು ವಾಯು ಗುಣಮಟ್ಟ ಸೂಚ್ಯಂಕ (AQI) 420 ಮೀರಿದ್ದು, ʼಅಪಾಯಕಾರಿʼ ಹಂತವನ್ನೂ ದಾಟಿ ಹೋಗಿದೆ.

ದಿಲ್ಲಿಯ ಜತೆಗೆ ದೇಶದ ಇನ್ನಿತರ ಎರಡು ಮೆಟ್ರೋ ನಗರಗಳಲ್ಲಿಯೂ- ಕೋಲ್ಕತ್ತಾ ಮತ್ತು ಮುಂಬಯಿ- ವಾಯು ಪರಿಸ್ಥಿತಿ ಇಷ್ಟೇ ತೀವ್ರವಾಗಿ ಹದಗೆಟ್ಟಿದೆ. ಚಳಿಗಾಲದ ಮಂಜು ಹಾಗೂ ದೀಪಾವಳಿ ಆಚರಣೆಯ ಪಟಾಕಿ ಸ್ಫೋಟಗಳಿಂದಾಗಿ ಹದಗೆಟ್ಟಿರುವ ಸನ್ನಿವೇಶವಿದಾಗಿದೆ. ವಾಯುಮಾಲಿನ್ಯ ಪಟ್ಟಿಯಲ್ಲಿ ಕೋಲ್ಕತ್ತಾ ಮತ್ತು ಮುಂಬಯಿ ಕ್ರಮವಾಗಿ ನಾಲ್ಕು ಮತ್ತು ಎಂಟನೇ ಸ್ಥಾನಗಳಲ್ಲಿ ಇವೆ.

ಪಶ್ಚಿಮ ಬಂಗಾಳದ ಮಾಲಿನ್ಯ ನಿಯಂತ್ರಣ ಮಂಡಳಿ (WBPCB) ಪ್ರಕಾರ, ಕೋಲ್ಕತ್ತಾದ ಹೆಚ್ಚಿನ ಭಾಗಗಳಲ್ಲಿ AQI 250 ಅಂಕವನ್ನು ಮೀರಿದೆ. ಮುಂಬಯಿಯಲ್ಲಿ, ಏರ್ ಕ್ವಾಲಿಟಿ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR- India) ಪ್ರಕಾರ, AQI 234ರ ʼಕಳಪೆʼ ವರ್ಗಕ್ಕೆ ಇಳಿದಿದೆ.

0ಯಿಂದ 100ರವರೆಗಿನ AQI ಅನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. 100ರಿಂದ 200ರವರೆಗೆ ಮಧ್ಯಮ. 200ರಿಂದ 300ರವರೆಗೆ ಕಳಪೆ ಮತ್ತು 300ರಿಂದ 400ರವರೆಗೆ ಅತ್ಯಂತ ಕಳಪೆ. 400ರಿಂದ 500 ಅಥವಾ ಅದಕ್ಕಿಂತ ಹೆಚ್ಚಿನದನ್ನು ತೀವ್ರ ಕಳಪೆ ಎಂದು ಪರಿಗಣಿಸಲಾಗುತ್ತದೆ.

ಬೇರಿಯಂ ಮತ್ತು ಇತರ ನಿಷೇಧಿತ ರಾಸಾಯನಿಕಗಳಿಂದ ತಯಾರಿಸಿದ ಪಟಾಕಿಗಳನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ನವೆಂಬರ್ 7ರಂದು ಆದೇಶ ನೀಡಿತ್ತು. ಈ ನಿಷೇಧವನ್ನು ಎಲ್ಲ ರಾಜ್ಯಗಳಿಗೂ ಕಡ್ಡಾಯಗೊಳಿಸಲಾಗಿದೆ. ತೀವ್ರ ವಾಯುಮಾಲಿನ್ಯದಿಂದ ತತ್ತರಿಸುತ್ತಿರುವ ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ.

“ನಿಮ್ಮಲ್ಲಿರುವದನ್ನು ಹಂಚಿಕೊಂಡರೆ ಮಾತ್ರ ಸಂಭ್ರಮಾಚರಣೆ ಮಾಡಬಹುದು. ಪರಿಸರವನ್ನು ಕಲುಷಿತಗೊಳಿಸುವುದರಿಂದ ಅಲ್ಲ. ನೀವು ಹಾಗೆ ಮಾಡಿದರೆ ಸ್ವಾರ್ಥಿಗಳಾಗಿರುತ್ತೀರಿ. ಈ ದಿನಗಳಲ್ಲಿ ಮಕ್ಕಳಲ್ಲ, ಹಿರಿಯರೇ ಹೆಚ್ಚು ಪಟಾಕಿಗಳನ್ನು ಸುಡುತ್ತಿದ್ದಾರೆ” ಎಂದು ಪೀಠ ಹೇಳಿತ್ತು. ಎಸ್‌ಸಿ ಆದೇಶದ ನಡುವೆಯೂ ಪಟಾಕಿ ಸಿಡಿಸಲಾಗಿದೆ. ರಾತ್ರಿಯಾಗುತ್ತಿದ್ದಂತೆ ಅದರ ತೀವ್ರತೆ ಹೆಚ್ಚಾಯಿತು.

ಪಟಾಕಿಗಳ ಮೇಲೆ ನಿಷೇಧವನ್ನು ಒಂದಲ್ಲ ಒಂದು ರೀತಿಯಲ್ಲಿ ಹೇರಲಾಗುತ್ತಿದೆ. ಆದರೆ ಇವು ಜಾರಿಯಾಗುತ್ತಿಲ್ಲ. ʼʼಇದು ಅತ್ಯಂತ ಗಂಭೀರವಾದ ವಿಚಾರ. ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳನ್ನು ಕರೆದು ಈ ಆದೇಶವನ್ನು ಏಕೆ ಜಾರಿಗೊಳಿಸಲಿಲ್ಲ ಎಂದು ಕೇಳಬೇಕು” ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಹೇಳಿದ್ದಾರೆ.

ಪಟಾಕಿ ಸುಡುವುದರ ಹೊರತಾಗಿ ಕೃಷಿ ತ್ಯಾಜ್ಯದ ಬೆಂಕಿ, ವಾಹನಗಳಿಂದ ಹೊಗೆ ಹೊರಸೂಸುವಿಕೆ ಮತ್ತು ಕೈಗಾರಿಕಾ ಹೊರಸೂಸುವಿಕೆಗಳು ರಾಷ್ಟ್ರ ರಾಜಧಾನಿ ಮತ್ತು ಇತರ ಸ್ಥಳಗಳಲ್ಲಿ ವಾಯು ಮಾಲಿನ್ಯದ ಇತರ ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿ: Delhi Air Pollution: ತಕ್ಷಣ ತ್ಯಾಜ್ಯ ಸುಡುವಿಕೆ ನಿಲ್ಲಿಸಿ: ಪಂಜಾಬ್‌ ಸೇರಿ 5 ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ತಾಕೀತು

Exit mobile version