Site icon Vistara News

Air Pollution: ಕಲುಷಿತ ನಗರ; ದೆಹಲಿ ಜತೆಗೆ ಭಾರತದ ಇನ್ನೆರಡು ಸ್ಥಳಗಳು!

delhi pollution

delhi pollution

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣವು (Air Pollution) ದಿನೇದಿನೆ ಜಾಸ್ತಿಯಾಗುತ್ತಿದ್ದು, ಮಕ್ಕಳು, ಹಿರಿಯರು ಸೇರಿ ಜನ ಉಸಿರಾಡಲು ಕೂಡ ಪರದಾಡುವಂತಾಗಿದೆ. ಇತ್ತ ಭಾರತದ ಇತರ ಎರಡು ನಗರಗಳು ಕೂಡ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಆತಂಕ ಮೂಡಿಸಿದೆ. ಸ್ವಿಸ್ ಗ್ರೂಪ್ ಐಕ್ಯೂ ಎಐಆರ್ (IQAir)​​ ಪ್ರಕಾರ ಕಲುಷಿತ ನಗರಗಳ ಪೈಕಿ ವಿಶ್ವದಲ್ಲೇ ದೆಹಲಿ ನಂ. 1 ಸ್ಥಾನದಲ್ಲಿದ್ದು, ಕೋಲ್ಕತ್ತಾ ಮತ್ತು ಮುಂಬೈ ಸಹ ಹೆಚ್ಚು ವಾಯುಮಾಲಿನ್ಯ ಎದುರಿಸುತ್ತಿರುವ ಭಾರತೀಯ ನಗರಗಳಾಗಿವೆ. ಈ ಮೂರು ನಗರಗಳು ಟಾಪ್‌ 10ರಲ್ಲಿ ಸ್ಥಾನ ಪಡೆದಿವೆ.

ಭಾನುವಾರ ಬೆಳಗಿನ ಲೆಕ್ಕಾಚಾರದ ಪ್ರಕಾರ ಐಕ್ಯೂ ಎಐಆರ್ ಪಟ್ಟಿಯಲ್ಲಿ ದೆಹಲಿ 483 ಅಂಕ ದಾಖಲಿಸಿ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನದ ಲಾಹೋರ್ 371 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಕೋಲ್ಕತ್ತಾ ಮತ್ತು ಮುಂಬೈ 206 ಮತ್ತು 162 ಅಂಕ ಪಡೆದಿವೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಅಂಕಿಅಂಶಗಳ ಪ್ರಕಾರ, ದೆಹಲಿ-ಎನ್‌ಸಿಆರ್‌ನಲ್ಲಿ ಭಾನುವಾರ ‘ತೀವ್ರ’ ವರ್ಗದ ವಾಯುಮಾಲಿನ್ಯ ಮತ್ತು ವಿಷಕಾರಿ ಮಬ್ಬು, ದಟ್ಟವಾದ ಹೊದಿಕೆ ಆವರಿಸಿಕೊಂಡಿತ್ತು. ಹೆಚ್ಚಿನ ಸ್ಥಳಗಳಲ್ಲಿ ಐಕ್ಯೂ ಎಐಆರ್ 400ಕ್ಕಿಂತ ಹೆಚ್ಚಾಗಿತ್ತು.

ಐಕ್ಯೂ ಎಐಆರ್ ಲೆಕ್ಕಾಚಾರ

ಸಿಪಿಸಿಬಿ ಪ್ರಕಾರ ಐಕ್ಯೂ ಎಐಆರ್ 0-50ರ ಪ್ರಮಾಣದಲ್ಲಿದ್ದರೆ ಕನಿಷ್ಠ ಪರಿಣಾಮದೊಂದಿಗೆ ‘ಉತ್ತಮ’ ಎಂದು ಪರಿಗಣಿಸಲಾಗುತ್ತದೆ. 51-100 ಸೂಕ್ಷ್ಮ ಜನರಿಗೆ ಸಣ್ಣ ಉಸಿರಾಟದ ಅಸ್ವಸ್ಥತೆಯೊಂದಿಗೆ ‘ತೃಪ್ತಿಕರ’ ವರ್ಗವಾಗಿದೆ, 101-200 ಶ್ವಾಸಕೋಶ, ಅಸ್ತಮಾ ಮತ್ತು ಹೃದ್ರೋಗ ಹೊಂದಿರುವ ಜನರಿಗೆ ಉಸಿರಾಟದ ಅಸ್ವಸ್ಥತೆಗೆ ಕಾರಣವಾಗುವ ‘ಮಧ್ಯಮ’ ವರ್ಗ ಎಂದು ಗುರುತಿಸಲಾಗಿದೆ, 201-300 ದೀರ್ಘಕಾಲದವರೆಗೆ ಉಸಿರಾಟದ ತೊಂದರೆ ಅನುಭವಿಸುವ ಸಾಧ್ಯತೆಗಳ ‘ಕಳಪೆ’ ವರ್ಗವಾಗಿದೆ. 301-400 ʼಅತ್ಯಂತ ಕಳಪೆ’ ವರ್ಗವಾಗಿದ್ದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Delhi Air Pollution: ದೆಹಲಿ ವಾಯುಮಾಲಿನ್ಯ; ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ!

ಕಾರಣವೇನು?

ಕಡಿಮೆ ತಾಪಮಾನ, ಗಾಳಿಯ ಕೊರತೆ, ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ, ಕಸ ಸುಡುವುದು ಮುಂತಾದ ಕಾರಣಗಳಿಂದ ಗಾಳಿ ಕಲುಷಿತವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಸದ್ಯದಲ್ಲೇ ದೀಪಾವಳಿ ಹಬ್ಬ ಬರುವುದರಿಂದ ಪಟಾಕಿ ಬಳಕೆ ಹೆಚ್ಚಲಿದ್ದು, ಈ ಬಗ್ಗೆಯೂ ಆತಂಕ ಮೂಡಿದೆ.

ಶಾಲೆಗಳಿಗೆ ರಜೆ ಘೋಷಣೆ

ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ಹೆಚ್ಚಾದ ಕಾರಣ ಸರ್ಕಾರವು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು 5ನೇ ತರಗತಿವರೆಗಿನ ಶಾಲೆಗಳಿಗೆ ನವೆಂಬರ್‌ 10ರವರೆಗೆ ರಜೆ ಘೋಷಿಸಿದೆ. ಹಾಗೆಯೇ, 6ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಿಕ್ಷಕರು ಆನ್‌ಲೈನ್ ಕ್ಲಾಸ್‌ ತೆಗೆದುಕೊಳ್ಳಲು ಸೂಚಿಸಿದೆ. ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ನವೆಂಬರ್‌ 5ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೂ, ಮಾಲಿನ್ಯ ಪ್ರಮಾಣವು ಜಾಸ್ತಿಯೇ ಆಗುತ್ತಿರುವುದರಿಂದ ರಜೆಯನ್ನು ವಿಸ್ತರಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಉಸಿರಾಟದ ಸಮಸ್ಯೆ, ಕಣ್ಣಿನ ಸಮಸ್ಯೆಗಳು ಉಲ್ಬಣಿಸುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ. ವಾಯುಮಾಲಿನ್ಯ ಪ್ರಮಾಣ ಜಾಸ್ತಿಯೇ ಆಗುತ್ತಿರುವುದರಿಂದ ಜನರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version