Site icon Vistara News

Ajay Banga: ಭಾರತ ಮೂಲದ ಅಜಯ್‌ ಬಂಗಾ ಮುಂದಿನ ವಿಶ್ವಬ್ಯಾಂಕ್ ಅಧ್ಯಕ್ಷ; ಬಂಗಾ ಬಗ್ಗೆ ಇವು ನಿಮಗೆ ತಿಳಿದಿರಲಿ

World Bank president ajay banga

ನ್ಯೂಯಾರ್ಕ್:‌ ಭಾರತ ಮೂಲದ ಅಮೆರಿಕ ಪ್ರಜೆ, ಮಾಸ್ಟರ್‌ಕಾರ್ಡ್ ಸಂಸ್ಥೆಯ ಮಾಜಿ ಸಿಇಒ ಅಜಯ್ ಬಂಗಾ ಅವರನ್ನು ವಿಶ್ವ ಬ್ಯಾಂಕ್‌ನ (World Bank) 14ನೇ ಅಧ್ಯಕ್ಷರಾಗಿ ಬುಧವಾರ ನೇಮಿಸಲಾಗಿದೆ.

63 ವರ್ಷದ ಅಜಯ್ ಬಂಗಾ ಅವರನ್ನು ಫೆಬ್ರವರಿ ಕೊನೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಈ ಹುದ್ದೆಗೆ ನಾಮನಿರ್ದೇಶನ ಮಾಡಿದ್ದರು. ಜೂನ್ 2ರಿಂದ ಆರಂಭವಾಗಲಿರುವ ಬಂಗಾ ಅವರ ಅಧಿಕಾರಾವಧಿ ಮುಂದಿನ ಐದು ವರ್ಷ ಇರುತ್ತದೆ. 25 ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯು ಬಂಗಾ ಅವರ ನೇಮಕವನ್ನು ಅನುಮೋದಿಸಿತು.

ಎರಡನೇ ವಿಶ್ವ ಯುದ್ಧದ ಕೊನೆಯ ವೇಳೆಗೆ ಸ್ಥಾಪನೆಯಾದ ವಿಶ್ವ ಬ್ಯಾಂಕ್ ಅನ್ನು ಅಮೆರಿಕನ್ನರು ಮುನ್ನಡೆಸುತ್ತಿದ್ದಾರೆ. ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಾಯ ಮಾಡಲು ಸಾಲವನ್ನು ಹೆಚ್ಚಿಸುವ ಒತ್ತಡದಲ್ಲಿ ಸದ್ಯ ವಿಶ್ವ ಬ್ಯಾಂಕ್‌ ಇದೆ. ಇಂಥ ಸುಧಾರಣೆಗಳ ವೇಗವರ್ಧಕರಾಗಿ ಬಂಗಾ ಕೆಲಸ ಮಾಡಲಿದ್ದಾರೆ ಎಂದು ನಂಬಲಾಗಿದೆ.

ಅಜಯ್ ಬಂಗಾ ಬಗ್ಗೆ 5 ವಿಚಾರ ನಿಮಗೆ ತಿಳಿದಿರಲಿ

  1. ಅಜಯ್ ಬಂಗಾ (63) ಭಾರತದಲ್ಲಿ ಜನಿಸಿದವರು. ಅವರ ವೃತ್ತಿಜೀವನ ಇಲ್ಲಿಯೇ ಆರಂಭವಾಯಿತು. 2007ರಿಂದ ಅಮೆರಿಕ ಪ್ರಜೆಯಾಗಿದ್ದಾರೆ. ಅಜಯ್‌ ಬಂಗಾ ಇತ್ತೀಚೆಗೆ ಜನರಲ್ ಅಟ್ಲಾಂಟಿಕ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
  2. ಅಜಯ್ ಬಂಗಾ ಅವರು ಹಣಕಾಸು ಮತ್ತು ಅಭಿವೃದ್ಧಿ ಪರಿಣಿತರು. 2020-2022ರಲ್ಲಿ ಇಂಟರ್‌ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್‌ನ ಗೌರವ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಟ್ರಂಪ್ ಆಡಳಿತದ ಅವಧಿಯಲ್ಲಿ ಅರ್ಥಶಾಸ್ತ್ರಜ್ಞ ಮತ್ತು ದೇಶದ ಖಜಾನೆ ಅಧಿಕಾರಿಯಾಗಿದ್ದ ಡೇವಿಡ್ ಮಾಲ್ಪಾಸ್ ಅವರು ವಿಶ್ವಬ್ಯಾಂಕ್ ಮುಖ್ಯಸ್ಥರ ಸ್ಥಾನದಿಂದ ನಿರ್ಗಮಿಸುತ್ತಿರುವ ಬಳಿಕ ಆ ಸ್ಥಾನಕ್ಕೆ ಅಜಯ್‌ ಏಕೈಕ ಸ್ಪರ್ಧಿಯಾಗಿದ್ದಾರೆ.
  3. ಬಂಗಾ ಅವರು 2016ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಫೆಬ್ರವರಿ ಅಂತ್ಯದಲ್ಲಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಹುದ್ದೆಗೆ ನಾಮನಿರ್ದೇಶನ ಮಾಡಿದರು.
  4. ಬಂಗಾ ಅವರು ನಾಮನಿರ್ದೇಶನಗೊಂಡಾಗಿನಿಂದ 96 ಸರ್ಕಾರಗಳ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಮೂರು ವಾರಗಳ ವಿಶ್ವ ಪ್ರವಾಸದಲ್ಲಿ ಸರ್ಕಾರಿ ಅಧಿಕಾರಿಗಳು, ವ್ಯಾಪಾರ ಮುಖಂಡರು ಮತ್ತು ಸಾಮುದಾಯಿಕ ಸಂಸ್ಥೆಗಳನ್ನು ಭೇಟಿ ಮಾಡಲು ಎಂಟು ದೇಶಗಳಿಗೆ ಭೇಟಿ ನೀಡಿದ್ದಾರೆ. ಒಟ್ಟು 39,546 ಮೈಲುಗಳಷ್ಟು ಪ್ರವಾಸ ಮಾಡಿದ್ದಾರೆ.
  5. ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷರಾಗಿ ಬಂಗಾ ಅವರು ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ಸ್ಟ್ರಕ್ಷನ್ ಆಂಡ್ ಡೆವಲಪ್ಮೆಂಟ್ (IBRD) ನ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿಯ ಅಧ್ಯಕ್ಷರೂ ಆಗಿರುತ್ತಾರೆ. ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್ ​​(IDA) ಮತ್ತು ಇತರ ಕೆಲವು ಅಂತಾರಾಷ್ಟ್ರೀಯ ಮಂಡಳಿಗಳ ನಿರ್ದೇಶಕರ ಮಂಡಳಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ.

ಇದನ್ನೂ ಓದಿ: Female Ownership : ಕರ್ನಾಟಕದ ಶೇ.68 ಆಸ್ತಿಗಳಿಗೆ ಮಹಿಳೆಯರು ಮಾಲೀಕರು : ವಿಶ್ವ ಬ್ಯಾಂಕ್‌ ಅಧ್ಯಯನ

Exit mobile version