ಮುಂಬೈ: ಬಿಜೆಪಿ ಬಳಿ ವಿಶೇಷ ವಾಷಿಂಗ್ ಮಷೀನ್ ಇದೆ, ಭ್ರಷ್ಟಾಚಾರದ ಕೇಸ್ ಇರುವ ಯಾವುದೇ ಪಕ್ಷದ ನಾಯಕರು ಬಿಜೆಪಿ ಸೇರಿದರೆ, ಅವರು ಎಲ್ಲ ಪ್ರಕರಣಗಳಿಂದಲೂ ಮುಕ್ತರಾಗುತ್ತಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಲೇ ಇವೆ. ಇದರ ಮಧ್ಯೆಯೇ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರ ಪತ್ನಿ ಸುನೇತ್ರಾ ಪವಾರ್ (Sunetra Pawar) ಅವರಿಗೆ ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ನಲ್ಲಿ (MSCB) 25 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಕ್ಲೀನ್‌ಚಿಟ್ ಸಿಕ್ಕಿದೆ.
ಹೌದು, 25 ಸಾವಿರ ಕೋಟಿ ರೂ. ಮೊತ್ತದ ಹಗರಣದ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕವು (EOW) ಸುನೇತ್ರಾ ಪವಾರ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. “ಎಂಎಸ್‌ಸಿಬಿ ಬ್ಯಾಂಕ್‌ನ ಸಾಲ ಪ್ರಕರಣದಲ್ಲಿ ಸುನೇತ್ರಾ ಪವಾರ್ ಸೇರಿ ಹಲವರ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ತನಿಖೆ ನಡೆಸಲಾಗಿದೆ. ಆದರೆ, ಯಾವುದೇ ರೀತಿಯ ಅಪರಾಧ, ಹಗರಣ ನಡೆದಿಲ್ಲ. ಇದರಿಂದ ಬ್ಯಾಂಕ್‌ಗೂ ಯಾವುದೇ ರೀತಿಯಲ್ಲಿ ನಷ್ಟವಾಗಿಲ್ಲ” ಎಂಬುದಾಗಿ ಕಳೆದ ಜನವರಿಯಲ್ಲಿಯೇ ಇಒಡಬ್ಲ್ಯೂ ತಯಾರಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಜಿತ್ ಪವಾರ್, ಸುನೇತ್ರಾ ಪವಾರ್ ಸೇರಿ ಹಲವರ ಕಾರ್ಖಾನೆಗಳಿಗೆ ಸಾಲ ನೀಡಿದ್ದು, ಇದರಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.
Maharashtra | Sunetra Pawar, wife of Deputy CM Ajit Pawar and NCP Lok Sabha candidate from Baramati, has got a clean chit from the Economic Offences Wing (EOW) in the Rs 25,000 crore Maharashtra State Cooperative Bank scam case: Mumbai Police
— ANI (@ANI) April 24, 2024
ಉದ್ಧವ್ ಬಣದ ಶಿವಸೇನೆ ಟೀಕೆ
ಸುನೇತ್ರಾ ಪವಾರ್ ಅವರಿಗೆ ಕ್ಲೀನ್ ಚಿಟ್ ನೀಡಿರುವ ಕುರಿತು ಉದ್ಧವ್ ಠಾಕ್ರೆ ಬಣದ ಶಿವಸೇನೆಯು ಟೀಕೆ ಮಾಡಿದೆ. “ಪವಾರ್ ಅವರದ್ದು ಭ್ರಷ್ಟಾಚಾರದ ಕುಟುಂಬ ಎಂದು ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದರು. ಆದರೆ ಈಗ ಸುನೇತ್ರಾ ಪವಾರ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಆರೋಪಿಗಳಾಗಿದ್ದವರು ಬಿಜೆಪಿ ಸೇರಿದರೆ, ಅವರಿಗೆ ಕ್ಲೀನ್‌ಚಿಟ್ ಸಿಗುತ್ತಿದೆ. ಸುನೇತ್ರಾ ಪವಾರ್ ಅವರು ಯಾವುದೇ ಅಪರಾಧ ಮಾಡಿಲ್ಲ ಎಂಬುದಾಗಿ ವರದಿ ತಯಾರಿಸಿ, ಅವರನ್ನು ದೋಷಮುಕ್ತರನ್ನಾಗಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ” ಎಂದು ಶಿವಸೇನೆ ಟೀಕಿಸಿದೆ.
ಬಾರಾಮತಿಯಲ್ಲಿ ಪವಾರ್ ಬಳಗದ ಕಾದಾಟ
ಮಹಾರಾಷ್ಟ್ರದ ಬಾರಾಮತಿ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಪವಾರ್ ಕುಟುಂಬಸ್ಥರ ಮಧ್ಯೆಯೇ ತೀವ್ರ ಪೈಪೋಟಿ ಎದುರಾಗಿದೆ. ಎನ್‌ಸಿಪಿಯಿಂದ (ಶರದ್ ಪವಾರ್ ಬಣ) ಹಾಲಿ ಸಂಸದೆ, ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಸ್ಪರ್ಧಿಸುತ್ತಿದ್ದರೆ, ಇವರ ವಿರುದ್ಧ ಅಜಿತ್ ಪವಾರ್ ಬಣದ ಎನ್‌ಸಿಪಿಯಿಂದ ಸುನೇತ್ರಾ ಪವಾರ್ ಅವರು ಸ್ಪರ್ಧಿಸುತ್ತಿದ್ದಾರೆ. ಎನ್‌ಸಿಪಿ ಇಬ್ಭಾಗವಾದ ಬಳಿಕ ಎರಡೂ ಬಣಗಳ ನಡುವಿನ ಮೊದಲ ಕಾದಾಟ ಇದಾದ ಕಾರಣ ಚುನಾವಣೆ ಫಲಿತಾಂಶವು ತೀವ್ರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: Maoist Links Case: ಮಾವೋವಾದಿಗಳೊಂದಿಗೆ ನಂಟು ಪ್ರಕರಣ; ಸಾಯಿಬಾಬಾ, ಇತರ ಐವರನ್ನು ದೋಷಮುಕ್ತಗೊಳಿಸಿದ ಕೋರ್ಟ್