ಮುಂಬೈ: ಭಾರತದ ಅಗ್ಗದ ವಿಮಾನಯಾನ ಸಂಸ್ಥೆ ಎಂದೇ ಗುರುತಿಸ್ಪಡುವ ಆಕಾಸ ಏರ್‌ಲೈನ್ಸ್ (Akasa Air) 150 ಬೋಯಿಂಗ್ 737 ಮ್ಯಾಕ್ಸ್ (Boeing 737 MAX) ವಿಮಾನಗಳಿಗೆ ಆರ್ಡರ್ ನೀಡಿದೆ. ಭಾರತೀಯ ವಾಯುಯಾನ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಆಕಾಸ ಏರ್‌ಲೈನ್ಸ್ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೈದರಾಬಾದ್‌ನಲ್ಲಿ ನಡೆದ ವಿಂಗ್ಸ್ ಇಂಡಿಯಾ ಏರ್ ಶೋನಲ್ಲಿ ಈ ಆದೇಶವನ್ನು ಪ್ರಕಟಿಸಲಾಗಿದೆ.
ಆಕಾಸ ಏರ್ ಎನ್ನುವ ವಿಮಾನಯಾನ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಎಸ್‌ಎನ್‌ವಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಎನ್ನುವ ಸಂಸ್ಥೆ. ಮುಂಬಯಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆಕಾಸ ಏರ್ ಸಂಸ್ಥೆಯನ್ನು ಆರಂಭ ಮಾಡಿದ್ದು ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹೆಸರಾಗಿದ್ದು, ಕಳೆದ ವರ್ಷ ನಿಧನರಾದ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) (46% ಪಾಲುದಾರಿಕೆ) ಮತ್ತು ವಿನಯ್ ದುಬೆ. ಇದು 2022ರಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತ್ತು.
ಹೊಸ ಆದೇಶವು ಅಕಾಸ ಏರ್‌ಲೈನ್ಸ್ ತನ್ನ ಸೇವೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುವ ಯೋಜನೆಯ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ. ಆರ್ಡರ್ ಮಾಡಲಾದ ಕಿರಿದಾದ ಬೋಯಿಂಗ್ ವಿಮಾನಗಳು ಭಾರತದಿಂದ ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಹತ್ತಿರದ ವಿದೇಶಿ ಸ್ಥಳಗಳಿಗೆ ಹಾರಾಟ ನಡೆಸಲಿವೆ.
“ಈ ದೊಡ್ಡ ಮತ್ತು ಐತಿಹಾಸಿಕ ತೀರ್ಮಾನವು ಈ ದಶಕದ ಅಂತ್ಯದ ವೇಳೆಗೆ ಅಕಾಸ ಏರ್‌ಲೈನ್ಸ್ ಅನ್ನು ವಿಶ್ವದ ಅಗ್ರ 30 ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿಸುವ ವಿಶ್ವಾಸವಿದೆ. ಇದು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಕ್ಷೇತ್ರದಲ್ಲಿ ನಮ್ಮ ಬಲವನ್ನು ಹೆಚ್ಚಿಸಲು ಸಹಾಯ ಮಾಡಲಿದೆ” ಎಂದು ಅಕಾಸ ಏರ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ವಿನಯ್ ದುಬೆ ಅಭಿಪ್ರಾಯಪಟ್ಟಿದ್ದಾರೆ.
2021ರಲ್ಲಿ ಅಕಾಸ ಏರ್ 72 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಆರಂಭಿಕ ಆರ್ಡರ್ ನೀಡಿತ್ತು. ನಂತರ 2023ರ ಜೂನ್‌ನಲ್ಲಿ ಇನ್ನೂ ನಾಲ್ಕು ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳಿಗೆ ಆರ್ಡರ್ ನೀಡಿತ್ತು. ಇದೀಗ 2024ರ ಈ ಒಪ್ಪಂದದ ಮೂಲಕ ಒಟ್ಟು 226 ವಿಮಾನಗಳಿಗೆ ಆರ್ಡರ್ ಕೊಟ್ಟಂತಾಗುತ್ತದೆ. ಅಕಾಸ ಏರ್ ಪ್ರಸ್ತುತ 22 ವಿಮಾನಗಳ ಸೇವೆಯನ್ನು ನಿರ್ವಹಿಸುತ್ತಿದೆ ಮತ್ತು ಎಂಟು ವರ್ಷಗಳ ಅವಧಿಯಲ್ಲಿ ಒಟ್ಟು 204 ವಿಮಾನಗಳನ್ನು ಸ್ವೀಕರಿಸಲಿದೆ.
ಅಕಾಸ ಏರ್‌ಲೈನ್ಸ್ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ. ಕತಾರ್, ಒಮಾನ್, ಸಿಂಗಾಪುರ, ಮಧ್ಯಪ್ರಾಚ್ಯ ಮತ್ತು ಗಲ್ಫ್ ಮಾರುಕಟ್ಟೆಯತ್ತ ತನ್ನ ಚಿತ್ತ ನೆಟ್ಟಿದೆ. ಸುಮಾರು 2 ವರ್ಷಗಳಲ್ಲಿ ಅಕಾಸ ಏರ್‌ಲೈನ್ ಅನ್ನು ಸುಮಾರು 63 ಲಕ್ಷ ಮಂದಿ ಪ್ರಯಾಣಿಕರಿಗೆ ಬಳಸಿದ್ದಾರೆ. ಇದು ಮುಂಬೈ, ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಚ್ಚಿ, ದೆಹಲಿ, ಗುವಾಹಟಿ, ಅಗರ್ತಲಾ, ಪುಣೆ, ಲಕ್ನೋ, ಗೋವಾ, ಹೈದರಾಬಾದ್, ವಾರಣಾಸಿ, ಬಾಗ್ಡೋಗ್ರಾ, ಭುವನೇಶ್ವರ, ಕೋಲ್ಕತಾ, ಪೋರ್ಟ್ ಬ್ಲೇರ್ ಮತ್ತು ಅಯೋಧ್ಯೆ ಸೇರಿದಂತೆ ಭಾರತದ 18 ನಗರಗಳನ್ನು ಸಂಪರ್ಕಿಸುತ್ತದೆ.
ಇದನ್ನೂ ಓದಿ: Akasa Air: ವಿದೇಶಕ್ಕೂ ರೆಕ್ಕೆ ಚಾಚಲಿದೆ ಆಕಾಸ ವಿಮಾನ, ಶೀಘ್ರವೇ ಸಾವಿರ ಉದ್ಯೋಗಿಗಳ ನೇಮಕ
ಭಾರತದ ಹೆಜ್ಜೆ ಗುರುತು
ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ಪ್ಯಾರಿಸ್ ಏರ್ ಶೋನಲ್ಲಿ 500 ವಿಮಾನಗಳಿಗೆ ಆರ್ಡರ್ ನೀಡಿತ್ತು ಮತ್ತು ಏರ್ ಇಂಡಿಯಾ 2023ರ ಫೆಬ್ರವರಿಯಲ್ಲಿ 470 ವಿಮಾನಗಳಿಗೆ ಆರ್ಡರ್ ನೀಡಿತ್ತು. ಆ ಮೂಲಕ ವಿಮಾನಯಾನ ಕ್ಷೇತ್ರದಲ್ಲಿ ಭಾರತ ಗಣನೀಯ ಪ್ರಭಾವ ಬೀರುವುದು ಸ್ಪಷ್ಟವಾದಂತಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ