ಮುಂಬಯಿ: ಭಾರತದ ಅತಿದೊಡ್ಡ ಕಂಪನಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ವಿಭಾಗವಾಗಿರುವ ರಿಲಯನ್ಸ್ ಜಿಯೊ ಇನ್ಫೋಕಾಂ ನಿರ್ದೇಶಕ ಸ್ಥಾನಕ್ಕೆ ಮುಕೇಶ್ ಅಂಬಾನಿ ರಾಜೀನಾಮೆ ನೀಡಿದ್ದು, ಪುತ್ರ ಆಕಾಶ್ ಅಂಬಾನಿ ಅವರನ್ನು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಿಸಿದ್ದಾರೆ.
ಮುಕೇಶ್ ಅಂಬಾನಿ ಅವರು ಜೂನ್ ೨೭ರಿಂದ ಜಾರಿಗೆ ಬರುವಂತೆ ರಾ ಜೀನಾಮೆ ನೀಡಿದ್ದು, ಪಂಕಜ್ ಮೋಹನ್ ಪವಾರ್ ಅವರು ಕಂಪನಿಯ ಆಡಳಿತ ನಿರ್ದೇಶಕರಾಗಿ ಸೋಮವಾರದಿಂದಲೇ ಅಧಿಕಾರ ಸ್ವೀಕರಿಸಿದ್ದಾರೆ. ಆಕಾಶ್ ಅಂಬಾನಿ ಅವರು ಇದುವರೆಗೆ ಕಾರ್ಯ ನಿರ್ವಾಹಕೇತರ ನಿರ್ದೇಶಕರಾಗಿದ್ದರು.
ಮುಕೇಶ್ ಅಂಬಾನಿ- ನೀತಾ ಅಂಬಾನಿ ಅವರ ಪುತ್ರನಾಗಿರುವ 30 ವರ್ಷದ ಆಕಾಶ್ ಅಂಬಾನಿ ಹಿಂದಿನಿಂದಲೂ ರಿಲಯನ್ಸ್ ಉದ್ಯಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ರಿಲಯನ್ಸ್ ಡಿಜಿಟಲ್ ಸರ್ವೀಸಸ್ ವಿಭಾಗದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದೀಗ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ರಿಲಯನ್ಸ್ ಡಿಜಿ ಇನ್ಫೋ ವಿಭಾಗವನ್ನು ಉತ್ತುಂಗಕ್ಕೇರಿಸಿದ ಸಾಧನೆಗೆ, ವಹಿಸಿಕೊಂಡ ಜವಾಬ್ದಾರಿಗೆ ನೀಡಿದ ಗೌರವ ಎಂದು ಪರಿಗಣಿಸಲಾಗಿದೆ. ಇದರ ಜತೆಗೆ ಮುಕೇಶ್ ಅಂಬಾನಿ ನಿಧಾನವಾಗಿ ತನ್ನ ಸಾಮ್ರಾಜ್ಯಕ್ಕೆ ಮಕ್ಕಳನ್ನು ತರುತ್ತಿರುವುದರ ಸೂಚನೆಯಾಗಿದೆ.
ಆಕಾಶ್ ಅಂಬಾನಿ ಅವರು ರಿಲಯನ್ಸ್ ಜಿಯೋ ೪ಜಿಗಾಗಿ ಡಿಜಿಟಲ್ ವಾತಾವರಣ ಸೃಷ್ಟಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ೨೦೧೭ರಲ್ಲಿ ಜಿಯೋಫೋನ್ ಲಾಂಚ್ ಮಾಡುವುದಕ್ಕಾಗಿ ಸಿದ್ಧಗೊಳಿಸಲಾದ ಇಂಡಿಯಾ ಸ್ಪೆಕ್ಸ್ ವ್ಯವಸ್ಥೆಯ ಎಂಜಿನಿಯರ್‌ಗಳ ವಿಭಾಗದ ಮಾರ್ಗದರ್ಶಕರಾಗಿದ್ದರು. ಇದು ಕೋಟ್ಯಂತರ ಭಾರತೀಯರನ್ನು ೨ಜಿಯಿಂದ ೪ಜಿಗೆ ಶಿಫ್ಟ್ ಮಾಡಿದ ಮಹಾ ಕ್ರಾಂತಿಯಾಗಿದೆ.
ಕೌಟುಂಬಿಕವಾಗಿ ಆಕಾಶ್ ಅಂಬಾನಿ ಅವರು ಚಿತ್ರ ನಟಿ ಶ್ಲೋಕಾ ಮೆಹ್ತಾ ಅವರನ್ನು ಮದುವೆಯಾಗಿದ್ದು, ಪ್ರಥ್ವಿ ಎಂಬ ಪುಟ್ಟ ಮಗನಿದ್ದಾನೆ.