Site icon Vistara News

India Bloc: ನಿತೀಶ್‌ ವಿದಾಯ ವದಂತಿ ಬೆನ್ನಲ್ಲೇ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟು

INDIA Bloc, Congress and SP to fight on 17 and 63 in Uttar Pradesh

ಲಖನೌ/ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯ ಹೆಡೆಮುರಿ ಕಟ್ಟವ ದಿಸೆಯಲ್ಲಿ ಸುಮಾರು 28 ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟದಲ್ಲಿಯೇ (India Bloc) ಹತ್ತಾರು ಬಿಕ್ಕಟ್ಟುಗಳು ಸೃಷ್ಟಿಯಾಗಿವೆ. ಇಂಡಿಯಾ ಒಕ್ಕೂಟದಿಂದ ಈಗಾಗಲೇ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹೊರಗುಳಿದಿದೆ. ಪಂಜಾಬ್‌ನಲ್ಲಿ ಆಪ್‌ ಏಕಾಂಗಿ ಸ್ಪರ್ಧೆಗೆ ತೀರ್ಮಾನಿಸಿದೆ. ಅತ್ತ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ಬಿಜೆಪಿ ಜತೆಗೂಡುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಉತ್ತರ ಪ್ರದೇಶದಲ್ಲಿ (Uttar Pradesh) ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ಮಧ್ಯೆ ಸೀಟು ಹಂಚಿಕೆ ವಿಚಾರವಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ ಕುರಿತು ಅಖಿಲೇಶ್‌ ಯಾದವ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. “ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಜತೆ ನಮ್ಮ ಮೈತ್ರಿಯು ಉತ್ತಮವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ 11 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಜಯ ಗಳಿಸುವ ಕ್ಷೇತ್ರಗಳ ಲೆಕ್ಕಾಚಾರದಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳಲಾಗಿದೆ. ಇಂಡಿಯಾ ಒಕ್ಕೂಟವು ಇತಿಹಾಸ ಸೃಷ್ಟಿಸಲಿದೆ” ಎಂದು ಪೋಸ್ಟ್‌ ಮಾಡಿದ್ದಾರೆ. ಆದರೆ, ಅಖಿಲೇಶ್‌ ಯಾದವ್‌ ಅವರ ಪ್ರಸ್ತಾಪವನ್ನು ಕಾಂಗ್ರೆಸ್‌ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಇಚ್ಛಿಸುತ್ತಿದೆ. ಇದರಿಂದಾಗಿ ಕೇವಲ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಆದರೆ, 11 ಕ್ಷೇತ್ರಗಳನ್ನು ಬಿಟ್ಟುಕೊಡಲು ಮಾತ್ರ ಅಖಿಲೇಶ್‌ ಯಾದವ್‌ ಮನಸ್ಸು ಮಾಡುತ್ತಿದ್ದಾರೆ. ಇದು ಈಗ ಇಂಡಿಯಾ ಒಕ್ಕೂಟದಲ್ಲಿ ಮತ್ತೊಂದು ಸಮಸ್ಯೆ ತಲೆದೋರುವಂತೆ ಮಾಡಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳ ವೇಳೆಯೂ ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್‌ ಹಾಗೂ ಅಖಿಲೇಶ್‌ ಯಾದವ್‌ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ಮತ್ತೆ ಲೋಕಸಭೆ ಚುನಾವಣೆಯಲ್ಲೂ ಸಮಸ್ಯೆ ತಲೆದೋರಿದೆ.

ಇದನ್ನೂ ಓದಿ: Nitish Kumar:‌ ನಾಳೆ ನಿತೀಶ್‌ ಕುಮಾರ್‌ ಅಂತಿಮ ನಡೆ ಎನ್‌ಡಿಎ ಕಡೆ; ಬಿಹಾರದಲ್ಲಿ ಹಲ್‌ಚಲ್

ಸೀಟು ಹಂಚಿಕೆ ಬಿಕ್ಕಟ್ಟಿನಿಂದಾಗಿಯೇ ಮಮತಾ ಬ್ಯಾನರ್ಜಿ ಅವರ ಟಿಎಂಸಿಯು ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಇದೇ ಕಾರಣಕ್ಕಾಗಿಯೇ ಪಂಜಾಬ್‌ನಲ್ಲಿ ಆಪ್‌ ಕೂಡ ಏಕಾಂಗಿ ಸ್ಪರ್ಧೆಗೆ ಮುಂದಾಗಿದೆ. ರಾಹುಲ್ ಗಾಂಧಿ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ನಿತೀಶ್‌ ಕುಮಾರ್‌ ಅವರು ಬಿಜೆಪಿ ಬಾಗಿಲು ತಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ ಮಧ್ಯೆಯೂ ಬಿಕ್ಕಟ್ಟು ಸೃಷ್ಟಿಯಾಗಿರುವುದು ಇಂಡಿಯಾ ಒಕ್ಕೂಟದಲ್ಲಿ ಒಗ್ಗಟ್ಟಿನ ಪ್ರಶ್ನೆ ಎದ್ದು ಕಾಡುವಂತೆ ಮಾಡಿದೆ. ಇದು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version