Site icon Vistara News

Akshata Murthy: ಸರಳ ಸೀರೆಯಲ್ಲಿ ಜನಮೆಚ್ಚುಗೆ ಪಡೆದ ಬ್ರಿಟನ್‌ ಪ್ರಧಾನಿ ಪತ್ನಿ ಅಕ್ಷತಾ ಮೂರ್ತಿ

Akshata Murthy in pink saree

ಹೊಸದಿಲ್ಲಿ: ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ವಿಶ್ವಮಟ್ಟದ ಜಿ 20 ಶೃಂಗಸಭೆಯಲ್ಲಿ (G20 Summit 2023) ಕೆಲವು ಮುಖ್ಯ ವಿಷಯಗಳ ಜೊತೆಗೆ ಒಂದಿಷ್ಟು ಮಾನವಾಸಕ್ತಿಯ ವಿಷಯಗಳೂ ಗಮನ ಸೆಳೆದಿವೆ. ವಿಶ್ವದ ಹಲವಾರು ನಾಯಕರಂತೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸಹ ತಮ್ಮ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರ ಜೊತೆ ಪಾಲ್ಗೊಂಡಿದ್ದರು. ಉದ್ಯಮಿ ಮತ್ತು ಡಿಸೈನರ್‌ ಸಹ ಆಗಿರುವ ಅಕ್ಷತಾ ಮೂರ್ತಿ, ಶೃಂಗಸಭೆಯ ಆಚೀಚೆ ಎಲ್ಲೇ ಕಾಣಿಸಿಕೊಂಡರೂ ಅವರ ದಿರಸುಗಳು ಆಸಕ್ತರ ಹುಬ್ಬೇರಿಸಿದ್ದವು. ಅದರಲ್ಲೂ ಶೃಂಗದ ಕಡೆಯ ದಿನ ಅವರು ಭಾರತದ ಸಾಂಪ್ರದಾಯಿಕ ಉಡುಪಾದ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಗಮನ ಸೆಳೆಯಿತು.

ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ತೆಳುಗುಲಾಬಿ ಬಣ್ಣದ ಸರಳ, ಸುಂದರ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದು, ತಾಯ್ನಾಡಿಗೆ ಟಾಟಾ ಹೇಳಿ ವಿಮಾನ ಹತ್ತಿದ್ದು ಫ್ಯಾಷನ್‌ ಪ್ರಿಯರು ಮಾತ್ರವಲ್ಲದೆ ಸಾಮಾನ್ಯರ ಮನದಲ್ಲೂ ಅಚ್ಚೊತ್ತಿದೆ. ಭಾರತೀಯ ಸಾಂಪ್ರದಾಯಿಕ ರೇಷ್ಮೆ ಸೀರೆಗಳ ಬ್ರಾಂಡ್‌ ʻರಾ ಮ್ಯಾಂಗೊʼದ ಖಜಾನೆಯಿಂದ ಹೆಕ್ಕಿ ತೆಗೆದ ಈ ಸೀರೆಯು ಬಹಳಷ್ಟು ಮೆಚ್ಚುಗೆಯನ್ನು ಗಳಿಸಿದೆ.

ಭಾರತ ಭೇಟಿಯ ಕಡೆಯ ದಿನಕ್ಕಾಗಿ ಈ ಸೀರೆಯನ್ನು ಅವರು ಆಯ್ದುಕೊಂಡಿದ್ದು ಸೂಕ್ತವಾಗಿತ್ತು ಎಂದು ಜಾಲತಾಣಗಳಲ್ಲೂ ಜನ ಪ್ರತಿಕ್ರಿಯಿಸಿದ್ದಾರೆ. ಫ್ಯಾಷನ್‌ ಹೆಸರಿನಲ್ಲಿ ಆಭಾಸಕ್ಕೆ ಎಡೆಮಾಡದೆ, ಯಾವುದೇ ಆಡಂಬರ, ಹಮ್ಮು-ಬಿಮ್ಮುಗಳ ಪ್ರದರ್ಶನವಿಲ್ಲದೆ ಅಕ್ಷತಾ ಮೂರ್ತಿ ಹೀಗೆ ಸರಳವಾಗಿ ಕಾಣಿಸಿಕೊಂಡಿದ್ದು, ತವರು ನೆಲದಲ್ಲಿ ಅವರ ಬಗ್ಗೆ ಅಭಿಮಾನ ಮೂಡಿಸಿದೆ. ಆಕೆಯ ಹೆತ್ತವರಷ್ಟೇ ಸರಳ, ಸುಶಿಕ್ಷಿತ ವ್ಯಕ್ತಿತ್ವ ಆಕೆಯದು ಎನ್ನಲಾಗುತ್ತಿದೆ.

ಆರಿ ಕಸೂತಿಯಲ್ಲಿ ಸಣ್ಣ ನವಿಲುಗಳನ್ನು ಹೊಂದಿದ್ದ ಶುದ್ಧ ಸಾಂಪ್ರದಾಯಿಕ ಬೆಡಗಿನ ಆ ರೇಷ್ಮೆ ಸೀರೆ, ಸರಳವಾಗಿದ್ದರೂ ತೀರಾ ಸುಂದರವಾಗಿತ್ತು. ತೆಳು ಗುಲಾಬಿಯ ಒಡಲಿಗೆ ಬಂಗಾರದ ಜರಿಯ ಮೆರುಗು ಅಚ್ಚುಕಟ್ಟಾಗಿತ್ತು. ಭಾರತೀಯ ಕಸೂತಿ ಕಲೆ ಮತ್ತು ಕೈಮಗ್ಗಗಳ ಬಗ್ಗೆ ಆಕೆಗಿದ್ದ ಪ್ರೀತಿಯ ದ್ಯೋತಕವಿದು ಎಂದೆಲ್ಲಾ ಜನ ಕೊಂಡಾಡುತ್ತಿದ್ದಾರೆ. ಅಂದ ಹಾಗೆ, ಅಕ್ಷತಾ ಮೂರ್ತಿ ಅವರು ಇನ್ಪೋಸಿಸ್‌ ದಿಗ್ಗಜರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮಗಳು.

ಸಿರಿ ಧಾನ್ಯ ಖಾದ್ಯ ಮೆಚ್ಚಿದ್ದ ಅಕ್ಷತಾ

ಜಿ 20 ಶೃಂಗಸಭೆಯಲ್ಲಿ (G20 Summit 2023) ಪಾಲ್ಗೊಂಡ ವಿಶ್ವನಾಯಕರಿಗೆ (World Leader) ಬಡಿಸಲಾದ ಆಹಾರ ಬಗ್ಗೆ ಸಾಕಷ್ಟು ಮೆಚ್ಚುಗೆ ಕೇಳಿಬಂದಿತ್ತು. ಅದರಲ್ಲೂ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ (Britain PM Rishi Sunak) ಅವರ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರು ಭಾರೀ ಇಷ್ಟಪಟ್ಟಿದ್ದರು. ಆವಕಾಡೊ ಮತ್ತು ಸಜ್ಜೆ ಸಿರಿಧಾನ್ಯ(ಪರ್ಲ್ ಮಿಲೆಟ್ ಸಲಾಡ್) ಹಾಗೂ ಜೋಳ ಮತ್ತು ಹಲಸು ಹಲೀಮ್‌ ಭಕ್ಷ್ಯಗಳಿಗೆ ಅವರು ಫಿದಾ ಆಗಿದ್ದಾರೆ ಎಂದು ಐಟಿಸಿ ಹೊಟೇಲ್ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿತ್ತು. ಜಿ20 ಶೃಂಗಸಭೆಯ ವೇಳೆ ಐಟಿಸಿ ಹೊಟೇಲ್‌ ಸಿರಿಧಾನ್ಯಗಳ ಆಧಾರಿತ ಭಕ್ಷ್ಯಗಳನ್ನು ಒದಗಿಸಿತ್ತು. ಅತ್ಯುತ್ತಮ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷ್ಯಗಳಿಗೆ ಭಾರೀ ಮೆಚ್ಚುಗೆ ಕೂಡ ದೊರೆಯಿತು.
ಐಟಿಸಿ ಶೆರಾಟನ್ ನವದೆಹಲಿಯ ಇಬ್ಬರು ಪ್ರತಿಭಾವಂತ ಮಹಿಳಾ ಬಾಣಸಿಗರು 20 ರಾಗಿ ಆಧಾರಿತ ಭಕ್ಷ್ಯಗಳ ಮೆನು ರೂಪಿಸಿದ್ದರು. ಈ ಪಾಕಶಾಲೆಯ ಪ್ರಯತ್ನವು ಐಟಿಸಿ ಹೋಟೆಲ್ ಸರಪಳಿಗಳ “ಮಿಷನ್ ಮಿಲೆಟ್ಸ್” ಉಪಕ್ರಮದಿಂದ ಸ್ಫೂರ್ತಿ ಪಡೆದುಕೊಂಡಿದೆ. 2023ರ ವಿಶ್ವಸಂಸ್ಥೆಯ ಘೋಷಣೆಯೊಂದಿಗೆ ಸಿರಿಧಾನ್ಯಗಳ ಕೃಷಿಯ ಜಾಗತಿಕ ಕೇಂದ್ರವಾಗಿ ಸ್ಥಾಪಿಸಲು ಭಾರತವು ಪ್ರಸ್ತಾಪಿಸಿದ ಪ್ರಸ್ತಾವನೆಯನ್ನು ಅಂತಾರಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ.

ಇದನ್ನೂ ಓದಿ: Britain PM Rishi Sunak | 2024ರ ಚುನಾವಣೆಯಲ್ಲಿ ಬ್ರಿಟನ್ ಪಿಎಂ ರಿಷಿ ಸುನಕ್ ಸೇರಿ 15 ಸಚಿವರ ಸೋಲು ಖಚಿತ!

Exit mobile version