ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಕೆನಡಾ ಪೌರತ್ವ ಹೊಂದಿದ ಕಾರಣ ದೇಶದಲ್ಲಿ ಅವರನ್ನು ಕೆನಡಾ ಕುಮಾರ್ (Canadian Kumar) ಎಂದೆಲ್ಲ ಟೀಕಿಸುತ್ತಾರೆ. ಹಾಗೆಯೇ, ಭಾರತದ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಮೂರು ವರ್ಷದ ಹಿಂದೆ ಹೇಳಿದ್ದ ಅಕ್ಷಯ್, ಅರ್ಜಿ ಹಾಕದ ಕುರಿತು ಸಹ ಟೀಕೆಗಳು ವ್ಯಕ್ತವಾಗಿದ್ದವು. ಈಗ ಎಲ್ಲ ಟೀಕೆಗಳಿಗೂ ಬಾಲಿವುಡ್ ನಟ ಸ್ಪಷ್ಟನೆ ನೀಡಿದ್ದಾರೆ.
“ಕೆನಡಾ ಪಾಸ್‌ಪೋರ್ಟ್ ಹೊಂದಿದ್ದೇನೆ ಎಂಬ ಮಾತ್ರಕ್ಕೆ ನಾನು ಯಾವುದೇ ಭಾರತೀಯನಿಗಿಂತ ಕಡಿಮೆ ಇಲ್ಲ. ನಾನು ಎಲ್ಲರಂತೆ ಭಾರತೀಯನಾಗಿದ್ದೇನೆ. ಕೆನಡಾ ಪಾಸ್‌ಪೋರ್ಟ್ ಪಡೆದು 9 ವರ್ಷವಾದರೂ ನಾನು ಇಲ್ಲೇ ಇದ್ದೇನೆ. ಶೀಘ್ರದಲ್ಲಿಯೇ ಭಾರತದ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇನೆ” ಎಂದು ಮಾಧ್ಯಮ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ್ದಾರೆ.
“ಹೌದು, ಭಾರತದ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕುವುದಾಗಿ 2019ರಲ್ಲಿಯೇ ಹೇಳಿದೆ. ಆದರೆ, ಇದಾದ ಬಳಿಕ ಕೊರೊನಾದಿಂದಾಗಿ ಎರಡು ವರ್ಷ ಲಾಕ್‌ಡೌನ್, ನಿರ್ಬಂಧಗಳನ್ನು ಜಾರಿಗೊಳಿಸಲಾಯಿತು. ಹಾಗಾಗಿ ಅರ್ಜಿ ಸಲ್ಲಿಸಲು ವಿಳಂಬವಾಯಿತು” ಎಂದು ಸ್ಪಷ್ಟಪಡಿಸಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆದ ಕಾರಣ ಅವರು ಕೆನಡಾಗೆ ತೆರಳಿ, ಅಲ್ಲಿಯೇ ವಾಸಿಸಲು ತೀರ್ಮಾನಿಸಿದ್ದರು. ಕೆನಡಾ ಸರ್ಕಾರವೂ ಪೌರತ್ವ ನೀಡಿತ್ತು. ಭಾರತದಲ್ಲಿ ಏಕ ಪೌರತ್ವ ನಿಯಮ ಜಾರಿಯಲ್ಲಿರುವ ಕಾರಣ ಅಕ್ಷಯ್ ಕುಮಾರ್ ಅವರು ಇಲ್ಲಿಯ ಪೌರತ್ವ ಪಡೆಯಲು, ಕೆನಡಾ ಪೌರತ್ವವನ್ನು ತ್ಯಜಿಸಬೇಕಾಗುತ್ತದೆ.
ಇದನ್ನೂ ಓದಿ | Akshay Kumar | ಆಫೀಸ್‌ನಲ್ಲಿ ಆರತಿ ಎತ್ತಿ ಪೂಜೆ ಮಾಡಿದ ನಟ ಅಕ್ಷಯ್ ಕುಮಾರ್: ವಿಡಿಯೊ ವೈರಲ್!