Site icon Vistara News

Al-jawahiri dead| ಕಾಬೂಲ್‌ನ ಆ ಮನೆಯ ಬಾಲ್ಕನಿಗೇ ಬಡಿದಿತ್ತು ಮಿಸೈಲ್‌, ಹೆಣವಾಗಿ ಬಿದ್ದಿದ್ದ ಜವಾಹಿರಿ

Al jawahiri

ಕಾಬೂಲ್‌: ನೀನು ಎಲ್ಲೇ ಇರು, ಹೇಗೇ ಇರು. ಎಷ್ಟು ಕಾಲವೇ ಆಗಲಿ.. ಎಲ್ಲೇ ಅಡಗಿಕೊಂಡಿರು. ನಮ್ಮ ಜನರಿಗೆ ಬೆದರಿಕೆಯಾಗಿರುವ ನಿನ್ನನ್ನು ಅಮೆರಿಕ ಎಲ್ಲೇ ಇದ್ದರೂ ಹುಡುಕಿಕೊಂಡು ಬಂದು ಹೊಡೆದೇ ಹೊಡೆಯುತ್ತದೆ: ಹೀಗಂತ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಪ್ರತಿಜ್ಞೆ ಮಾಡಿದ್ದರು. ಅದು ಭಾನುವಾರ ಪೂರೈಸಿದೆ.

೨೦೦೧ರ ಸೆಪ್ಟೆಂಬರ್‌ ೧೧ರಂದು ಅವಳಿ ಗೋಪುರಗಳನ್ನು ವಿಮಾನ ನುಗ್ಗಿಸಿ ಒಡೆದು ಹಾಕಿದ್ದ ಅಲ್‌ ಖೈದಾ ದಾಳಿ ಅಮೆರಿಕವನ್ನು ತೀವ್ರವಾಗಿ ಕಾಡಿತ್ತು. ೨೦೧೧ರಲ್ಲಿ ಒಸಾಮಾ ಬಿನ್‌ ಲಾಡೆನ್‌ನ್ನು ಅವನು ಅಡಗಿದ್ದ ಗುಹೆಯಿಂದಲೇ ಹೊರಗೆಳೆದು ತಂದು ಕೊಂದು ಹಾಕಿದ್ದ ಅಮೆರಿಕನ್‌ ಸೇನೆಗೆ ಆವತ್ತಿನ ದಾಳಿಯ ಮಾಸ್ಟರ್‌ ಮೈಂಡ್‌ನನ್ನು ಹಿಡಿಯಲು ಮಾತ್ರ ೨೧ ವರ್ಷಗಳೇ ಬೇಕಾದವು. ಆದರೆ, ಅಮೆರಿಕ ಜವಾಹಿರಿಯ ಈ ಹತ್ಯೆಯ ಮೂಲಕ ತನ್ನ ಶಪಥವನ್ನು ಈಡೇರಿಸಿಕೊಂಡಿದೆ.
ಅವಳಿ ಗೋಪುರಗಳು ಒಡೆದು ತನ್ನ ಪ್ರತಿಷ್ಠೆಯೇ ಚೂರಾಗಿ ಹೋದ ಸಿಟ್ಟಿನಲ್ಲಿ ಕುದಿಯುತ್ತಿದ್ದ ಅಮೆರಿಕ ತಾಲಿಬಾನ್‌ ಮೇಲಿನ ಸಿಟ್ಟಿನಿಂದ ಇಡಿ ಅಫಘಾನಿಸ್ತಾನವನ್ನೇ ಸಾಕಷ್ಟು ನಾಶ ಮಾಡಿದೆ. ಈ ನಡುವೆ ಅಲ್ಲೊಂದು ಸರಕಾರವನ್ನು ರಚಿಸಿಯೂ ಇತ್ತು. ಆದರೆ, ಒಮ್ಮೆ ಅಮೆರಿಕನ್‌ ಸೇನೆ ಮರಳಿದ ಕೂಡಲೇ ಅಲ್ಲಿ ಮತ್ತೆ ತಾಲಿಬಾನ್‌ ಆಡಳಿತ ಶುರುವಾಗಿದೆ.

ನಿಜವೆಂದರೆ, ದೇಶ ಬಿಟ್ಟುಹೋಗುವಾಗ ತಾಲಿಬಾನ್‌ ಸರಕಾರಕ್ಕೆ ಅಮೆರಿಕ ನೀಡಿದ ಅತಿ ದೊಡ್ಡ ಎಚ್ಚರಿಕೆ ಏನೆಂದರೆ, ಯಾವ ಕಾರಣಕ್ಕೂ ಅಲ್‌ ಖೈದಾ ನಾಯಕರಿಗೆ ರಕ್ಷಣೆ ಕೊಡಬಾರದು ಎನ್ನುವುದು. ಆದರೆ, ಅಮೆರಿಕದ ಸೂಚನೆಯನ್ನು ಧಿಕ್ಕರಿಸಿದ ತಾಲಿಬಾನ್‌ ಸರಕಾರ ಅಲ್‌ ಖೈದಾದ ಎರಡನೇ ಸೇನಾ ನಾಯಕ ಅಲ್‌ ಜವಾಹಿರಿಯನ್ನು ರಾಜಧಾನಿ ಕಾಬೂಲಿನಲ್ಲೇ ಸುರಕ್ಷಿತವಾಗಿ ಇಟ್ಟುಕೊಂಡಿತ್ತು. ಆದರೆ, ಯಾವಾಗ ಇದು ಅಮೆರಿಕಕ್ಕೆ ಗೊತ್ತಾಯಿತೋ ಅಲ್ಲಿನ ಸಿಐಎ ಜವಾಹಿರಿಯ ಅಂತ್ಯಕ್ಕೆ ಸಿದ್ಧತೆಗಳನ್ನು ನಡೆಸಿಕೊಂಡಿತು

ನಿಜವೆಂದರೆ, ಜವಾಹಿರಿ ಸತ್ತೇ ಹೋಗಿದ್ದಾನೆ ಎಂಬೆಲ್ಲ ಸುದ್ದಿಗಳು ಹರಡಿಕೊಂಡಿದ್ದವು. ಆದರೆ, ೨೦೨೧ರ ಹೊತ್ತಿಗೆ ಮತ್ತೆ ವಿಡಿಯೊ ಮೂಲಕ ಕಾಣಿಸಿಕೊಂಡಿದ್ದ ಆತ ಇನ್ನೂ ಬದುಕಿದ್ದೇನೆ ಎಂದು ತೋರಿಸಿಕೊಟ್ಟಿದ್ದ. ೨೦೨೨ರ ಮಾರ್ಚ್‌ನಲ್ಲಿ ಕರ್ನಾಟಕದ ಹಿಜಾಬ್‌ ವಿವಾದಕ್ಕೆ ಪ್ರತಿಕ್ರಿಯಿಸುವ ಮೂಲಕ ಆತನ ಇರವು ಮತ್ತಷ್ಟು ಸ್ಪಷ್ಟಗೊಂಡಿತ್ತು. ಬಹುಶಃ ಅಮೆರಿಕ ಆತನನ್ನು ಬೆನ್ನಟ್ಟಲು ಇದೇ ಕಾರಣವಾಗಿರಲೂಬಹುದು.

ಭಾನುವಾರ ನಡೆದಿದ್ದೇನು?
ಮೂಲಗಳ ಪ್ರಕಾರ, ಅಮೆರಿಕದ ಸಿಐಎ ಕಳೆದ ಕೆಲವು ತಿಂಗಳುಗಳಿಂದ ಕಾಬೂಲ್‌ನ ಆ ಮನೆಯ ಮೇಲೆ ಕಣ್ಣಿಟ್ಟಿತ್ತು. ಅಲ್ಲಿದ್ದಾನೆಂದು ಹೇಳಲಾದ ಜವಾಹಿರಿಯ ಚಲನವಲನಗಳ ಮೇಲೆ ಕಣ್ಣಿಟ್ಟಿತ್ತು. ಭಾನುವಾರ ಅದಕ್ಕೊಂದು ಮುಹೂರ್ತ ಸಿಕ್ಕಿತು.

ಆ ಮನೆಯಲ್ಲಿ ಕುಟುಂಬದ ಕೆಲವು ಸದಸ್ಯರೊಂದಿಗೆ ಇದ್ದ ಅಲ್‌ ಜವಾಹಿರಿ ಮನೆಯ ಬಾಲ್ಕನಿಗೆ ಬರುವುದನ್ನೇ ಕಾದು ಕುಳಿತಿದ್ದ ಅಮೆರಿಕನ್‌ ಡ್ರೋನ್‌ ಒಂದು ಎರಡು ಮಿಸೈಲ್‌ಗಳನ್ನು ನೇರವಾಗಿ ಬಾಲ್ಕನಿಯನ್ನೇ ಗುರಿಯಾಗಿಟ್ಟು ಸಿಡಿಸಿದೆ. ಅದು ನೇರವಾಗಿ ಬಾಲ್ಕನಿಗೇ ಬಡಿದು ಜವಾಹಿರಿ ಉರುಳಿದ್ದಾನೆ.

ಹಾಗಂತ ಅಮೆರಿಕ ಎರಡು ದಿನ ಕಳೆದರೂ ತನ್ನ ದಾಳಿಯ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ. ಯಾಕೆಂದರೆ, ದಾಳಿಗೆ ಒಳಗಾದವನು ನಿಜಕ್ಕೂ ಸತ್ತಿದ್ದಾನೋ ಎನ್ನುವುದಾಗಲಿ, ಸತ್ತವನು ಜವಾಹಿರಿಯೇ ಎನ್ನುವುದಾಗಲಿ ಅಮೆರಿಕಕ್ಕೆ ಸ್ಪಷ್ಟವಿರಲಿಲ್ಲ. ಹಾಗಾಗಿ, ಅಫಘಾನಿಸ್ತಾನದ ತಾಲಿಬಾನ್‌ ಸರಕಾರವೇ ಇದನ್ನು ದೃಢಪಡಿಸಲಿ ಎಂದು ಅದು ಕಾದು ಕುಳಿತಿತ್ತು. ಯಾವಾಗ ಸರಕಾರ ಜವಾಹಿರಿ ಸತ್ತಿದ್ದಾನೆ ಎಂದು ಘೋಷಿಸಿತೋ ಆಗ, ಸೋಮವಾರ ರಾತ್ರಿ ಅಮೆರಿಕ ದಾಳಿಯ ಮಾಹಿತಿ ಹೊರಹಾಕಿದೆ.

ಈ ಮನೆಯಲ್ಲಿ ಜವಾಹಿರಿಯ ಕೆಲವು ಬಂಧುಗಳು ಇದ್ದರಾದರೂ ಅವರಿಗೆ ಯಾರಿಗೂ ಅಪಾಯವಾಗಿಲ್ಲ. ಅಷ್ಟು ನಿಖರವಾಗಿ ಅಮೆರಿಕದ ಡ್ರೋನ್‌ಗಳು ತಮ್ಮ ಕೆಲಸವನ್ನು ಮುಗಿಸಿವೆ.
ಜವಾಹಿರಿಯ ಅಂತ್ಯ ೨೦೦೧ರ ದಾಳಿಯಲ್ಲಿ ಪ್ರಾಣ ಕಳೆದುಕೊಂಡರ ಕುಟುಂಬಿಕರಿಗೆ ನ್ಯಾಯವನ್ನು ನೀಡಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಅದರ ಜತೆಗೆ ೨೦೦೦ನೇ ಇಸವಿಯ ಅಕ್ಟೋಬರ್‌ನಲ್ಲಿ ಅಡೆನ್‌ನಲ್ಲಿ ಅಮೆರಿಕದ ಕೋವೆಲ್‌ ನೇವಲ್‌ ಮೇಲೆ ಆತ್ಮಹತ್ಯಾ ದಾಳಿ ನಡೆಸಿ ೧೭ ಅಮೆರಿಕನ್‌ ನಾವಿಕರನ್ನು ಕೊಂದು ಹಾಕಿದ ಕೃತ್ಯಕ್ಕೂ ಪ್ರತಿಕಾರ ತೀರಿಸಿಕೊಂಡಂತಾಗಿದೆ ಎಂದು ಬೈಡನ್‌ ಹೇಳಿದ್ದಾರೆ.

ಇದನ್ನೂ ಓದಿ| Al-Jawahiri Dead | ಲಾಡೆನ್‌ ಉತ್ತರಾಧಿಕಾರಿ, 9/11 ದಾಳಿಯ ಸಂಚುಕೋರ ಜವಾಹಿರಿ ಫಿನಿಶ್

Exit mobile version