ನವದೆಹಲಿ: ಭಯೋತ್ಪಾದಕ ಸಂಘಟನೆ ಆಲ್-ಖೈದಾ ದೇಶದ ನಾನಾ ನಗರಗಳಲ್ಲಿ ಆತ್ಮಾಹುತಿ ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ.
ಬಿಜೆಪಿ ನಾಯಕರು ಪ್ರವಾದಿ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಗುಜರಾತ್, ಉತ್ತರಪ್ರದೇಶ, ಮುಂಬಯಿ ಮತ್ತು ದಿಲ್ಲಿಯಲ್ಲಿ ದಾಳಿ ನಡೆಸಲಾಗುವುದು. ನಮ್ಮ ಪ್ರವಾದಿಯ ಗೌರವವನ್ನು ರಕ್ಷಿಸಲು ಹೋರಾಟ ಮಾಡಲಾಗುವುದು ಎಂದು ಆಲ್-ಖೈದಾ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.
” ದಿಲ್ಲಿ, ಮುಂಬಯಿ, ಉತ್ತರಪ್ರದೇಶ ಮತ್ತು ಗುಜರಾತ್‌ನಲ್ಲಿ ಕೇಸರಿ ಭಯೋತ್ಪಾದಕರು ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆʼ ಎಂದು ಆಲ್-ಖೈದಾ ಬೆದರಿಸಿದೆ.
ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪಕ್ಷ ಅವರನ್ನು ಅಮಾನತುಗೊಳಿಸಿದ್ದರೂ, ವಿವಾದ ಇನ್ನೂ ತಣ್ಣಗಾಗಿಲ್ಲ. ಇದೀಗ ಅಲ್-ಖೈದಾ ಬೆದರಿಕೆ ಒಡ್ಡಿದೆ. ” ವಿಶ್ವಾದ್ಯಂತ ಮುಸ್ಲಿಮರು ಆಕ್ರೋಶದಲ್ಲಿ ಕುದಿಯುತ್ತಿದ್ದು, ಸೂಕ್ತ ಪ್ರತೀಕಾರದ ಅಗತ್ಯವನ್ನು ನಿರೀಕ್ಷಿಸುತ್ತಿದ್ದಾರೆʼ ಎಂದು ಅಲ್-ಖೈದಾ ಹೇಳಿಕೊಂಡಿದೆ.
ಅಸಾದುದ್ದೀನ್ ಓವೈಸಿ ಕಿಡಿ:
ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ರಾಷ್ಟ್ರಗಳ ಮಾತನ್ನು ಕೇಳುತ್ತಾರೆ. ಆದರೆ ಭಾರತೀಯ ಮುಸ್ಲಿಮರ ಮನವಿಗೆ ಸ್ಪಂದಿಸುವುದೇ ಇಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.
” ಪ್ರಧಾನಿ ನರೇಂದ್ರ ಮೋದಿಯವರು ಇದೇ ದೇಶದ ನಿವಾಸಿಗಳಾದ ಮುಸ್ಲಿಮರ ಅಹವಾಲುಗಳಿಗೆ ಸ್ಪಂದಿಸುವುದಿಲ್ಲ. ಆದರೆ ವಿದೇಶಗಳು ಆಕ್ರೋಶ ವ್ಯಕ್ತಪಡಿಸಿದಾಗ ಕ್ರಮ ಕೈಗೊಳ್ಳುತ್ತಾರೆʼʼ ಎಂದು ಓವೈಸಿ ನೂಪುರ್ ಶರ್ಮಾ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಹೇಳಿದರು.
ವಿವಾದಾತ್ಮಕ ಹೇಳಿಕೆ ನೀಡಿರುವ ನಾಯಕರಿಗೆ ಐದಾರು ತಿಂಗಳಿನ ಬಳಿಕ ಪುನರ್ವಸತಿ ಕಲ್ಪಿಸಬಾರದು. ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಓವೈಸಿ ಒತ್ತಾಯಿಸಿದರು.