Site icon Vistara News

ಸನಾತನ ಧರ್ಮದ ಬಗ್ಗೆ ಕಲಿಕೆಗೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿರೋಧ

aligarh

ಆಗ್ರಾ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸನಾತನ ಧರ್ಮದ ಬಗ್ಗೆ ಕಲಿಸುವ ಪ್ರಸ್ತಾವನೆಗೆ ತೀವ್ರ ವಿರೋಧ ಎದುರಾಗಿದ್ದು, ವಿವಿ ಆಡಳಿತ ಮಂಡಳಿ ಈಗ ತನ್ನ ಉದ್ದೇಶದಿಂದ ಹಿನ್ನಡೆ ಇಡುವಂತಾಗಿದೆ.

ವಿಶ್ವವಿದ್ಯಾಲಯದ ಇಸ್ಲಾಮಿಕ್ ಅಧ್ಯಯನ ವಿಭಾಗದ ಸ್ನಾತಕೋತ್ತರ ಪದವಿಯ ಪಠ್ಯಕ್ರಮದಲ್ಲಿ ಸನಾತನ ಧರ್ಮ, ಜೈನ, ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳ ಕುರಿತ ವಿಷಯಗಳನ್ನು ಸೇರಿಸಲಾಗುವುದು ಎಂದು ವಿಶ್ವವಿದ್ಯಾನಿಲಯದ ಪತ್ರಿಕಾ ಅಧಿಕಾರಿ ಉಮರ್ ಪಿರ್ಜಾದಾ ಇತ್ತೀಚೆಗೆ ವಿವಿ ವ್ಯವಸ್ಥಾಪಕ ಸಮಿತಿಯ ನಿರ್ಣಯವನ್ನು ತಿಳಿಸಿದ್ದರು. ಇದಾದ ಕೂಡಲೇ ಪ್ರತಿಭಟನೆಗಳು ಪ್ರಾರಂಭವಾಗಿವೆ.

ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮತ್ತು ಕಾರ್ಯಕಾರಿ ಮಂಡಳಿಗಳು ಈ ನಿರ್ಧಾರವನ್ನು ಇನ್ನೂ ಅಂಗೀಕರಿಸಿಲ್ಲ. ಆದರೆ ಇದರ ಕಲ್ಪನೆಯೇ ವಿವಿಯ ಕೆಲವು ಶಿಕ್ಷಣತಜ್ಞರನ್ನು ಕೆರಳಿಸಿದೆ. ವಿಶ್ವವಿದ್ಯಾನಿಲಯದ ಸುನ್ನಿ ಥಿಯಾಲಜಿ ವಿಭಾಗದ ಮಾಜಿ ಮುಖ್ಯಸ್ಥ ಪ್ರೊ.ಮುಫ್ತಿ ಜಾಹಿದ್ ಅಲಿ ಖಾನ್ ಮಾತನಾಡಿ, ಇಸ್ಲಾಮಿಕ್ ಅಧ್ಯಯನ ವಿಭಾಗದಲ್ಲಿ ಇತರ ಧರ್ಮಗಳ ಅಧ್ಯಯನ ಸಾಧ್ಯವಿಲ್ಲ, ಏಕೆಂದರೆ ಈ ವಿಭಾಗ ಇಸ್ಲಾಮಿಕ್ ಆಚರಣೆಗಳನ್ನು ಮಾತ್ರ ಕಲಿಸುತ್ತದೆ ಎಂದಿದ್ದಾರೆ.

ಇತ್ತೀಚೆಗೆ ಇಸ್ಲಾಮಿಕ್ ಸ್ಟಡೀಸ್ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದ ಕೆಲವು ಪಾಕಿಸ್ತಾನಿ ಲೇಖಕರ ಪುಸ್ತಕಗಳನ್ನು ವಿವಿಧ ವಲಯಗಳಿಂದ ಪ್ರಧಾನಿಯವರಿಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಹಿಂತೆಗೆದುಕೊಳ್ಳಲಾಗಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಹೊಸ ವಿವಾದ ತಲೆದೋರಿದೆ. ಪಾಕಿಸ್ತಾನಿ ಲೇಖಕರ ಪುಸ್ತಕಗಳನ್ನು ರದ್ದುಗೊಳಿಸಿರುವುದು ಕೂಡ ಶೈಕ್ಷಣಿಕ ಮತ್ತು ಕಾರ್ಯಕಾರಿ ಮಂಡಳಿಗಳ ಅಂಗೀಕಾರವಿಲ್ಲದೆ ನಡೆದ ಕ್ರಿಯೆಯಾಗಿದೆ ಎಂದಿದ್ದಾರೆ ಮುಫ್ತಿ ಜಾಹೀದ್‌.

ಇದನ್ನೂ ಓದಿ: Hijab Controversy | ಮಂಗಳೂರಿನಲ್ಲಿ ಮುಸ್ಲಿಂ ಕಾಲೇಜುಗಳ ಸ್ಥಾಪನೆಗೆ ಅರ್ಜಿಗಳ ಸುರಿಮಳೆ!

Exit mobile version