Site icon Vistara News

Ayodhya Airport: ಅಯೋಧ್ಯೆ ಮಹರ್ಷಿ ವಾಲ್ಮೀಕಿ ಏರ್‌ಪೋರ್ಟ್‌ಗೆ ಹಲವು ಹೊಸತನದ ಹಿರಿಮೆ

ayodhye airport

ayodhye airport

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ (Ayodhya Rama Janmabhumi) ಶ್ರೀರಾಮ ಮಂದಿರದ (Rama Mandir) ಲೋಕಾರ್ಪಣೆ 2024ರ ಜನವರಿ 22ರಂದು ನಡೆಯಲಿದ್ದು, ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ಡಿಸೆಂಬರ್‌ 30) ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನು (Maharishi Valmiki International Airport Ayodhya Dham)  ಲೋಕಾರ್ಪಣೆ ಮಾಡಲಿದ್ದಾರೆ. ಸದ್ಯ ದೇಗುಲದಂತೆ ಕಂಗೊಳಿಸುತ್ತಿರುವ ಅಯೋಧ್ಯಾ ವಿಮಾನ ನಿಲ್ದಾಣದ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ (Ayodhya Airport).

ವಿಮಾನ ನಿಲ್ದಾಣದ ಮೊದಲ ಹಂತದ ನಿರ್ಮಾಣದ ವೆಚ್ಚ ಸುಮಾರು 1,450 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಡಿಸೆಂಬರ್ 30ರಂದು ಇಂಡಿಗೊ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಹೊಸದಾಗಿ ತೆರೆಯಲಾದ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಲಿವೆ. ಎರಡೂ ವಿಮಾನಯಾನ ಸಂಸ್ಥೆಗಳು ಈಗಾಗಲೇ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ನಿಂದ ಅಯೋಧ್ಯೆಗೆ 2024ರ ಜನವರಿಯಲ್ಲಿ ವಿಮಾನಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿವೆ.

ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಹೊಸ ವಿಮಾನ ನಿಲ್ದಾಣವನ್ನು ರಾಮ ಮಂದಿರದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಇದು ರಾವಣನ ವಿರುದ್ಧದ ವಿಜಯದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಸಂತೋಷದಿಂದ ಮರಳುವುದನ್ನು ಪ್ರತಿನಿಧಿಸುತ್ತದೆ.

ಟರ್ಮಿನಲ್ ಕಟ್ಟಡದ ಚಾವಣಿಯನ್ನು ವಿವಿಧ ಶಿಖರಗಳಂತಹ ರಚನೆಗಳಿಂದ ಅಲಂಕರಿಸಲಾಗಿದೆ. ಈ ವೈವಿಧ್ಯಮಯ ಶಿಖರಗಳ ಜತೆಗೆ ರಾಮಾಯಣ ಮಹಾಕಾವ್ಯದ ಪ್ರಮುಖ ಘಟನೆಗಳನ್ನು ವಿವರಿಸುವ ಅಲಂಕಾರಗಳನ್ನೂ ಜೋಡಿಸಲಾಗಿದೆ.

ಭಗವಾನ್ ರಾಮನ ಕಥೆಯನ್ನು ದೃಶ್ಯಾತ್ಮಕವಾಗಿ ನಿರೂಪಿಸುವುದರಿಂದ ಪ್ರಯಾಣಿಕರಿಗೆ ಇದೊಂದು ಅದ್ಭುತ ಅನುಭವವನ್ನು ನೀಡಲಿದೆ. ಹೆಚ್ಚುವರಿಯಾಗಿ ಟರ್ಮಿನಲ್‌ ಮುಂಭಾಗ ಅಯೋಧ್ಯೆಯ ಅರಮನೆಯ ವಾತಾವರಣವನ್ನು ಮರುಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

6,500 ಚದರ ಮೀಟರ್ ವಿಸ್ತೀರ್ಣದ ಹೊಸ ಟರ್ಮಿನಲ್ ಕಟ್ಟಡ ವಾರ್ಷಿಕ 10 ಲಕ್ಷ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಹಂತದ ಕಾಮಗಾರಿಯು 50,000 ಚದರ ಮೀಟರ್ ವಿಸ್ತೀರ್ಣದ ಹೊಸ ಟರ್ಮಿನಲ್ ಕಟ್ಟಡವನ್ನು ಒಳಗೊಂಡಿರುತ್ತದೆ. ಇದು ಏಕಕಾಲದಲ್ಲಿ 3,000 ಪ್ರಯಾಣಿಕರನ್ನು ಮತ್ತು ವಾರ್ಷಿಕವಾಗಿ 60 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ. ಈ ಹಂತದಲ್ಲಿ ಕೋಡ್ ಇ ಬಿ-777 ಮಾದರಿಯ ವಿಮಾನಗಳಿಗೆ ಸ್ಥಳಾವಕಾಶ ಕಲ್ಪಿಸಲು 3,750 ಮೀಟರ್‌ವರೆಗೆ ರನ್ ವೇ ವಿಸ್ತರಣೆ, ಪ್ಯಾರಲಲ್ ಟ್ಯಾಕ್ಸಿ ಟ್ರ್ಯಾಕ್ ಮತ್ತು ಹೆಚ್ಚುವರಿ 18 ವಿಮಾನ ಪಾರ್ಕಿಂಗ್ ಸ್ಟ್ಯಾಂಡ್‌ಗಳಿಗೆ ಸ್ಥಳಾವಕಾಸ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Ayodhya Airport: ದೇಗುಲದಂತೆ ಕಂಗೊಳಿಸುತ್ತಿರುವ ಅಯೋಧ್ಯಾ ವಿಮಾನ ನಿಲ್ದಾಣ!

Exit mobile version