ಗಾಂಧಿನಗರ: ಗೋವುಗಳ ಹತ್ಯೆ ನಿಲ್ಲಿಸುವ ಕುರಿತು ಗುಜರಾತ್ ಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. “ಗೋವುಗಳ ಹತ್ಯೆಯು ಸಂಪೂರ್ಣವಾಗಿ ಸ್ಥಗಿತಗೊಂಡರೆ ಭೂಮಿಯ ಮೇಲಿನ ಸಮಸ್ಯೆಗಳೆಲ್ಲವೂ ಬಗೆಹರಿಯುತ್ತವೆ” ಎಂದು ಗುಜರಾತ್‌ನ ತಾಪಿ ಜಿಲ್ಲೆಯ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಜಡ್ಜ್ ಸಮೀರ್ ವಿನೋದ್‌ಚಂದ್ರ ಅವರು ಹೇಳಿದ್ದಾರೆ ಎಂಬುದಾಗಿ ಕಾನೂನು ಸುದ್ದಿ ವೆಬ್‌ಸೈಟ್ ಲೈವ್ ಲಾ ವರದಿ ಮಾಡಿದೆ.
ಅಕ್ರಮವಾಗಿ ಗೋವುಗಳ ಸಾಗಣೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ಅವರು, ಗೋವಿನ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. “ಗೋವಿನ ಸಗಣಿಯನ್ನು ಮನೆ ತುಂಬ ಸಾರಿಸಿದರೆ ಪರಮಾಣು ವಿಕಿರಣದ ಪರಿಣಾಮ ಉಂಟಾಗುವುದಿಲ್ಲ. ಗೋಮೂತ್ರದಿಂದ ತುಂಬ ಕಾಯಿಲೆಗಳನ್ನು ವಾಸಿ ಮಾಡಬಹುದಾಗಿದೆ” ಎಂದರು.
“ಗೋವು ಕೇವಲ ಪ್ರಾಣಿ ಅಲ್ಲ, ಅದು ಮಾತೆ. ಗೋವಿಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಗೋವಿನ ಸಗಣಿಯನ್ನು ಮನೆ ತುಂಬ ಸಾರಿಸಿದರೆ ಪರಮಾಣು ವಿಕಿರಣದ ಪರಿಣಾಮ ತಡೆಯಬಹುದು. ಇದರಿಂದ ರೋಗಗಳ ನಿವಾರಣೆಯಾಗುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ” ಎಂಬುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ನ್ಯಾಯಾಧೀಶರು ಯಾವುದೇ ಅಧ್ಯಯನ ವರದಿಗಳನ್ನು ಉಲ್ಲೇಖಿಸಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Cow Slaughter: ಕಾಫಿ ತೋಟದಲ್ಲಿ ಗೋವುಗಳ ಹತ್ಯೆ; ಅನುಮಾನ ಬಾರದಂತೆ ಮಣ್ಣಿನಡಿ ಕಳೇಬರ ಹೂತು ಹಾಕಿದ ಪಾಪಿಗಳು