Site icon Vistara News

Allahabad High Court: ಮಥುರಾ ಕೃಷ್ಣ ಜನ್ಮ ಭೂಮಿ ಸರ್ವೇಗೆ ಹೈಕೋರ್ಟ್‌ ಅನುಮತಿ

mathura

mathura

ಅಲಹಾಬಾದ್‌: ಕೃಷ್ಣಜನ್ಮಭೂಮಿ ಮಂದಿರದ ಆವರಣದಲ್ಲಿರುವ ಶಾಹಿ ಈದ್ಗಾ ಮಸೀದಿ ಸಂಕೀರ್ಣದ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ (Allahabad HC) ಅನುಮತಿ ನೀಡಿದೆ (Sri Krishna Janmabhoomi-Shahi Idgah Masjid dispute). ಈ ಮೂಲಕ ಬಹು ವರ್ಷದ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಜಸ್ಟೀಸ್ ಮಯಾಂಕ್ ಕುಮಾರ್ ಜೈನ್ ಮಹತ್ವದ ಆದೇಶ ನೀಡಿ, ಸಮೀಕ್ಷೆ ನಡೆಸಲು ಕಮಿಷನರ್ ತಂಡ ರಚನೆ ಮಾಡಲು ಸೂಚಿಸಿದ್ದಾರೆ. ಭಗವಾನ್ ಕೃಷ್ಣ ಜನಿಸಿದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎನ್ನುವುದು ಹಿಂದೂ ಅರ್ಜಿದಾರರ ವಾದವಾಗಿದೆ.

ಮಥುರಾದಲ್ಲಿನ ಶಾಹಿ ಈದ್ಗಾ ಮಸೀದಿಯನ್ನು ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಸ್ಥಳದ ಪಕ್ಕದಲ್ಲಿ ನಿರ್ಮಿಸಲಾಗಿತ್ತು. ಸಮೀಕ್ಷೆಯ ವಿಧಾನಗಳನ್ನು ಡಿಸೆಂಬರ್ 18ರಂದು ನಡೆಯುವ ಮುಂದಿನ ವಿಚಾರಣೆಯಲ್ಲಿ ಚರ್ಚಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಏನಿದು ವಿವಾದ?

ಭಗವಾನ್ ಶ್ರೀಕೃಷ್ಣ ವಿರಾಜಮಾನ ಸಮಿತಿ ಹಾಗೂ ಇತರ 7 ಮಂದಿ ಮಸೀದಿಯ ಸರ್ವೇ ನಡೆಸುವಂತೆ ಅರ್ಜಿ ಸಲ್ಲಿಸಿದ್ದರು. ಹಿಂದೂ ದೇವಸ್ಥಾನವನ್ನು ಬೀಳಿಸಿ ಶಾಹಿ ಈದ್ಗಾ ಮಸೀದಿ ಕಟ್ಟಲಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹುಗಳಿವೆ. ಕಮಲದಳದ ಆಕಾರದಲ್ಲಿ ಕಂಬಗಳನ್ನು ನೋಡಿದರೆ ಹಿಂದೂ ದೇವಸ್ಥಾನ ಶೈಲಿ ಎನ್ನುವುದು ಸ್ಪಷ್ಟವಾಗುತ್ತದೆ. ಅಲ್ಲದೆ ಇದೇ ಕಂಬದಲ್ಲಿ ಹಿಂದೂ ದೇವಸ್ಥಾನ ಚಿಹ್ನೆಗಳು ಕಾಣುತ್ತಿದೆ. ಹೀಗಾಗಿ ಈದ್ಗಾ ಮಸೀದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಭೂಮಿಯನ್ನು ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡವನ್ನು ತೆಗೆದುಹಾಕುವಂತೆ ಹೈಕೋರ್ಟ್ ಆದೇಶ ಹೊರಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. 1968ರ ಅಕ್ಟೋಬರ್ 12ರಂದು ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥಾನ ಮತ್ತು ಟ್ರಸ್ಟ್ ಶಾಹಿ ಮಸೀದಿ ಈದ್ಗಾ ನಡುವೆ ನಡೆದ ರಾಜಿ ಒಪ್ಪಂದವು ಕಾನೂನುಬಾಹಿರ ಎಂದೂ ಮನವಿಯಲ್ಲಿ ಹೇಳಲಾಗಿದೆ.

ಇತಿಹಾಸ

ವಿವಿಧ ಅರ್ಜಿದಾರರು ಮಥುರಾದ ನ್ಯಾಯಾಲಯಗಳಲ್ಲಿ ಕನಿಷ್ಠ ಒಂದು ಡಜನ್ ಪ್ರಕರಣಗಳನ್ನು ದಾಖಲಿಸಿದ್ದಾರೆ. 13.77 ಎಕರೆ ಸಂಕೀರ್ಣದಿಂದ ಮಸೀದಿಯನ್ನು ತೆಗೆದುಹಾಕಬೇಕೆಂಬ ಎಲ್ಲ ಅರ್ಜಿಗಳಲ್ಲಿ ಮನವಿ ಸಲ್ಲಿಸಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಅಲಹಾಬಾದ್ ಹೈಕೋರ್ಟ್ ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಎಲ್ಲ ಮೊಕದ್ದಮೆಗಳನ್ನು ತನಗೆ ವರ್ಗಾಯಿಸಿಕೊಂಡಿತ್ತು.

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದದ ಆದೇಶವು ದೇವಾಲಯ-ಮಸೀದಿ ವಿವಾದದ ಎರಡನೇ ಪ್ರಕರಣವಾಗಿ ಗುರುತಿಸಿಕೊಂಡಿದೆ. ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ಇತ್ತೀಚೆಗೆ ಕೋರ್ಟ್‌ ಆದೇಶದ ಮೇರೆಗೆ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಪಕ್ಕದ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಪೂರ್ಣಗೊಳಿಸಿತ್ತು. ಇದೀಗ -ಶಾಹಿ ಈದ್ಗಾ ಸರ್ವೆಗೆ ಸೂಚಿಸಲಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ಕುರಿತ ಅರ್ಜಿಯನ್ನು ವಜಾಗೊಳಿಸಿತ್ತು. ದೇವಸ್ಥಾನದ ಮೇಲೆ ಮಸೀದಿ ಕಟ್ಟಲಾಗಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಸರ್ವೆಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಸದ್ಯ ಹೈಕೋರ್ಟ್‌ನಲ್ಲಿ ಕೃಷ್ಣ ಜನ್ಮಭೂಮಿ ಟ್ರಸ್ಟ್‌ಗೆ ಜಯ ಸಿಕ್ಕಿದೆ.

ಇದನ್ನೂ ಓದಿ: Pandit Ganapati Bhat: ಪಂಡಿತ ಗಣಪತಿ ಭಟ್ ಹಾಸಣಗಿಗೆ ಪ್ರತಿಷ್ಠಿತ ತಾನ್‌ಸೇನ್ ಸಮ್ಮಾನ್ ಪುರಸ್ಕಾರ

Exit mobile version