Site icon Vistara News

ಟ್ವೀಟ್‌ ಮೂಲಕ ಕೋಮು ಕಿಡಿ ಎಬ್ಬಿಸುತ್ತಿದ್ದ ಜುಬೇರ್‌‌, ಪೊಲೀಸ್‌ ವಿಚಾರಣೆ ತೀವ್ರ

ಮೊಹಮ್ಮದ್‌ ಜುಬೇರ್

ನವ ದೆಹಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ಟ್ವೀಟ್‌ ಮಾಡಿ ಬಂಧನಕ್ಕೊಳಗಾಗಿರುವ ಪತ್ರಕರ್ತ ಮೊಹಮ್ಮದ್ ಜುಬೇರ್‌ನನ್ನು ದೆಹಲಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಆಲ್ಟ್‌ ನ್ಯೂಸ್‌ (alt news) ಮಾಧ್ಯಮದಲ್ಲಿ ಫ್ಯಾಕ್ಟ್‌ ಚೆಕ್‌ ನೆಪದಲ್ಲಿ ಅನೇಕ ವಿವಾದ ಸೃಷ್ಟಿಸಿದ ಆರೋಪ ಜುಬೇರ್‌ ಮೇಲಿದೆ. ಈ ಮಾಧ್ಯಮದಲ್ಲಿ ಸಾಮಾನ್ಯವಾಗಿ ಹಿಂದುತ್ವ ವಿರೋಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನೇಕ ಸುದ್ದಿಗಳನ್ನು ಪೋಸ್ಟ್‌ ಮಾಡಲಾಗುತ್ತಿತ್ತು. ಇದು ವಿವಾದದ ಕಿಡಿ ಎಬ್ಬಿಸುತ್ತಿತ್ತು. ಜುಬೇರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಭಾಗ 153 (ಉದ್ದೇಶಪೂರ್ವಕ ಕೋಮು ಗಲಭೆಗೆ ಪ್ರಚೋದನೆ ನೀಡುವುದು) ಹಾಗೂ ವಿಭಾಗ 295A (ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೆಹಲಿ ಪೊಲೀಸ್‌ ಇಲಾಖೆಯ ಇಂಟಲಿಜೆನ್ಸ್‌ ಫ್ಯೂಷನ್‌ ಹಾಗೂ ಸ್ಟ್ರಾಟಜಿಕ್‌ ಆಪರೇಷನ್ ವಿಭಾಗ ಜುಬೇರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಈತ ದೇಶದಲ್ಲಿ ಸಮುದಾಯಗಳ ನಡುವಿನ ಸೌಹಾರ್ದತೆ ಹಾಳು ಮಾಡುವಂತಹ ಟ್ವೀಟ್‌ ಮಾಡಿದ್ದಾನೆ ಎಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2020ರಲ್ಲೂ ಕೋಮು ಪ್ರಚೋದನಕಾರಿ ಟ್ವೀಟ್‌ ಮಾಡಿದ ಆರೋಪದಲ್ಲಿ ಜುಬೇರ್‌ನನ್ನು ಬಂಧಿಸಲಾಗತ್ತು. ಆ ಪ್ರಕರಣದಲ್ಲಿ ಜುಬೇರ್‌ ವಿರುದ್ಧ ಆಕ್ಷೇಪಾರ್ಹ ಸಂಗತಿ ಕಂಡುಬಂದಿಲ್ಲ ಎಂದು ಹೇಳಲಾಗಿತ್ತು. ಈಗ ಮತ್ತೊಮ್ಮೆ ಅದೇ ಪ್ರಕರಣದಲ್ಲಿ ಬಂಧಿಸಲಾಗಿದೆ.

ಜುಬೇರ್‌ ಮಾಡಿದ ಟ್ವೀಟ್‌ಗೆ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದರು. ಈಗ ಆ ಟ್ವೀಟ್‌ಗಳನ್ನು ಡಿಲೀಟ್‌ ಮಾಡಲಾಗಿದ್ದು, ಪೊಲೀಸರು ಅಂಥವರ ಪತ್ತೆಗೂ ಪ್ರಯತ್ನಿಸುತ್ತಿದ್ದಾರೆ.

ಏನಿದು ಪ್ರಕರಣ?‌

ಜುಬೇರ್‌ 2018ರಲ್ಲಿ ಹಾಗೂ 2020ರಲ್ಲಿ ಮಾಡಿದ ಎರಡು ಟ್ವೀಟ್‌ಗಳು ವಿವಾದ ಸೃಷ್ಟಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ 2020ರಲ್ಲಿ ಈತನನ್ನು ಬಂಧಿಸಲಾಗಿತ್ತು.

ಮಾರ್ಚ್‌ 24, 2018ರಂದು ಜುಬೇರ್‌, ಮೊದಲು: ಹನಿಮೂನ್‌ ಹೋಟೆಲ್‌, 2014ರ ನಂತರ: ಹನುಮಾನ್‌ ಹೋಟೆಲ್‌ ಎಂದು ಮಾರ್ಪಾಟು ಮಾಡಿದ ಚಿತ್ರ ಪೋಸ್ಟ್‌ ಮಾಡಿದ್ದ. ಇದಕ್ಕೆ ಪರ-ವಿರೋಧವಾಗಿ ಅನೇಕ ಮಂದಿ ಪ್ರತಿಕ್ರಿಯಿಸಿದ್ದರು. ಇದು ಪ್ರಚೋದನಾಕಾರಿ ಟ್ವೀಟ್‌ ಎಂದು ಪೊಲೀಸರು ಪರಿಗಣಿಸಿದ್ದರು. ಈ ರೀತಿಯ ಅನೇಕ ವಿವಾದಾತ್ಮಕ ಟ್ವೀಟ್‌ಗಳನ್ನು ಜುಬೇರ್‌ ಮಾಡಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜುಬೇರ್‌ನನ್ನು ಹೆಚ್ಚಿನ ವಿಚಾರಣೆಗೆ ಅವಕಾಶ ನೀಡಲು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಪ್ರಕರಣದ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯವು ಒಂದು ದಿನ ಪೊಲೀಸ್‌ ಕಸ್ಟಡಿಗೆ ಒಳಪಡಿಸಲು ಅನುಮತಿ ನೀಡಿತ್ತು.

2020ರಲ್ಲಿ ಜುಬೇರ್‌ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ವೇಳೆ ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳ ರಕ್ಷಣೆಯ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಆ ತನಿಖೆಯಲ್ಲಿ ಜುಬೇರ್‌ ವಿರುದ್ಧ ಯಾವುದೇ ಆಕ್ಷೇಪಾರ್ಹ ಸಂಗತಿ ಕಂಡಿಲ್ಲ ಎಂದು ಬಿಡುಗಡೆ ಮಾಡಲಾಗಿತ್ತು. ಆದರೆ ಆ ಟ್ವೀಟ್‌ ಇನ್ನಷ್ಟು ಹೊಸ ಟ್ವೀಟ್‌ಗಳಿಗೆ ಕಾರಣವಾಗಿದ್ದು, ಕೋಮು ಪ್ರಚೋದನಕಾರಿಯಾಗಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಜುಬೇರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಮೀನು ನಿರಾಕರಿಸಿದ ನ್ಯಾಯಾಲಯ

ಜುಬೇರ್‌ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದಿರುವ ಪೊಲೀಸರು, ವಿಚಾರಣೆ ಮುಂದುವರಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ದಿನಕ್ಕೆ ಅರ್ಧಗಂಟೆಯ ಮಟ್ಟಿಗೆ ತಮ್ಮ ವಕೀಲರನ್ನು ಭೇಟಿ ಮಾಡಲು ನ್ಯಾಯಾಲಯ ಅನುಮತಿ ನೀಡಿದ್ದರೂ, ವಿಚಾರಣೆಗೆ ಆತ ಸಹಕರಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಒಂದು ದಿನದ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ಮನವಿ ಮಾಡಿದ್ದು, ನ್ಯಾಯಾಲಯ ಇದಕ್ಕೆ ಸಮ್ಮತಿಸಿದೆ.

ಪ್ರತೀಕ್‌ ಸಿನ್ಹಾ ಪ್ರತಿಕ್ರಿಯೆ

ಈ ಪ್ರಕರಣದ ಹಿನ್ನೆಲೆಯಲ್ಲಿ ಆಲ್ಟ್‌ ನ್ಯೂಸ್‌ನ ಸಂಸ್ಥಾಪಕ ಪ್ರತೀಕ್‌ ಸಿನ್ಹಾ ಪೊಲೀಸರ ವಿರುದ್ಧ ಟ್ವೀಟ್‌ ಮಾಡಿದ್ದಾರೆ. ಜುಬೇರ್‌ ಅವರ ವಿರುದ್ಧ ಪೊಲೀಸರು 202ರಲ್ಲಿ ಮಾಡಿದ ಟ್ವೀಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸುವುದಾಗಿ ತಿಳಿಸಿದ್ದಾರೆ. ಆದರೆ, ಆ ಪ್ರಕರಣದಲ್ಲಿ ಬಂಧಿಸದಂತೆ ನ್ಯಾಯಾಲಯದ ಆದೇಶವಿದೆ. ಈಗ ಪೊಲೀಸರು ಜುಬೇರ್‌ ಅವರನ್ನು ಬೇರೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ. ಇದಕ್ಕೆ ಯಾವುದೇ ನೋಟಿಸ್‌ ಅಥವಾ ಎಫ್‌ಐಆರ್‌ ಪ್ರತಿ ನೀಡಿಲ್ಲ ಎಂದು ಪ್ರತೀಕ್‌ ಸಿನ್ಹಾ ಆರೋಪಿಸಿದ್ದಾರೆ.

ಜುಬೇರ್‌ ಬಂಧನಕ್ಕೆ ಪ್ರತಿಪಕ್ಷ ಮುಖಂಡರ ವಿರೋಧ

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ, ಬಿಜೆಪಿ ನಡೆಸುವ ಅಪರಾಧಗಳನ್ನು ಬಹಿರಂಗ ಪಡಿಸಿದವರಿಗೆ ಆಪತ್ತು ಕಾಡುತ್ತದೆ. ಸತ್ಯದ ಒಂದು ಬಾಯಿ ಮುಚ್ಚಿಸಿದರೆ, ಸತ್ಯದ ಸಾವಿರ ಬಾಯಿ ತೆರೆದುಕೊಳ್ಳುತ್ತವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡ ಶಶಿ ತರೂರ್‌, ಡೆರೆಕ್‌ ಒಬ್ರೈನ್‌ ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಅಸಾದುದ್ದೀನ್‌ ಮತ್ತು ಅನೇಕರು ಜುಬೇರ್‌ ಬಂಧನದ ವಿರುದ್ಧ ಟ್ವೀಟ್‌ ಮಾಡಿದರು.

ಜುಬೇರ್‌ ವಿರುದ್ಧ ಮತ್ತಿತರ ಪ್ರಕರಣಗಳು

ಇತ್ತೀಚೆಗೆ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರು ಪ್ರವಾದಿ ಮೊಹಮ್ಮದ್‌ ವಿರುದ್ಧ ನೀಡಿದ ವಿಡಿಯೋವನ್ನು ಮೊದಲು ಪ್ರಚಾರಕ್ಕೆ ತಂದಿದ್ದು ಜುಬೇರ್.‌ ನೂಪುರ್‌ ಶರ್ಮಾ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ದೇಶದ ಅನೇಕ ಭಾಗದಲ್ಲಿ ಭಾರಿ ಪ್ರಮಾಣದ ಗಲಭೆ ಉಂಟಾಗಿತ್ತು. ನಂತರ, ನೂಪುರ್‌ ಶರ್ಮಾ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು.

ಈ ವರ್ಷದ ಆರಂಭದಲ್ಲಿ ಹರಿದ್ವಾರದಲ್ಲಿ ಮುಸ್ಲಿಂ, ಕ್ರಿಶ್ಚಿಯನ್‌ ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯಗಳ ನಡುವೆ ಹಿಂಸಾಚಾರ ನಡೆಸುವ ಸಭೆ ನಡೆಸಲಾಗುತ್ತಿದೆ ಎಂಬ ವಿವಾದಾತ್ಮಕ ವಿಡಿಯೋವನ್ನು ಪ್ರಸಾರ ಮಾಡಲಾಗಿತ್ತು ಎಂಬ ಆರೋಪ ಜುಬೇರ್‌ ಮೇಲಿದೆ.

ಇದನ್ನೂ ಓದಿ: Varanasi serial Bomb blast case: ಪ್ರಧಾನ ಆರೋಪಿ ವಲಿಯುಲ್ಲಾಗೆ ಮರಣದಂಡನೆ ಶಿಕ್ಷೆ

Exit mobile version