Site icon Vistara News

Amazon Layoffs: 9 ಸಾವಿರ ಜನರ ಉದ್ಯೋಗಕ್ಕೆ ಅಮೆಜಾನ್‌ ಕತ್ತರಿ, ಯಾರಿಗೆ ಬೇಕು ಎಂಎನ್‌ಸಿ ಸಹವಾಸ?

Amazon planning to lay off from Alexa unit

ನವದೆಹಲಿ: ಜಾಗತಿಕ ಟೆಕ್‌ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು, ಜಗತ್ತಿನಲ್ಲೇ ಬ್ರ್ಯಾಂಡ್‌ ಎನಿಸಿರುವ ಕಂಪನಿಗಳಲ್ಲಿ ಉದ್ಯೋಗ ಪಡೆಯುವುದು ಎಷ್ಟು ಒಳಿತೋ, ಅಷ್ಟೇ ಕೆಡಕು ಎಂಬಂತಾಗಿದೆ ಇತ್ತೀಚಿನ ಪರಿಸ್ಥಿತಿ. ಜಾಗತಿಕ ಸಂಸ್ಥೆಗಳಾದ ಮೆಟಾ, ಟ್ವಿಟರ್‌, ಗೂಗಲ್‌, ಡಿಸ್ನಿ ಸೇರಿ ಹತ್ತಾರು ಕಂಪನಿಗಳು ಸಾವಿರಾರು ಉದ್ಯೋಗಿಳನ್ನು ಮನೆಗೆ ಕಳುಹಿಸುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಎರಡನೇ ಸುತ್ತಿನಲ್ಲಿ ಅಮೆಜಾನ್‌ (Amazon Layoffs) ಕಂಪನಿಯೂ 9 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ತೀರ್ಮಾನಿಸಿದೆ.

ಅಮೆಜಾನ್‌ ಕಂಪನಿಯ ಸಿಇಒ ಆ್ಯಂಡಿ ಜಾಸಿ ಅವರು ಕಂಪನಿ ಉದ್ಯೋಗಿಗಳಿಗೆ ಮೆಮೊ ಕಳುಹಿಸಿದ್ದು, ಮುಂದಿನ ವಾರಗಳಲ್ಲಿ 9 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂಬ ಕಹಿ ಸುದ್ದಿ ನೀಡಿದ್ದಾರೆ. ಜನ ಸಂಪನ್ಮೂಲ, ಅನುಭವಿಗಳು, ತಂತ್ರಜ್ಞಾನ, ಜಾಹೀರಾತು ಸೇರಿ ಹಲವು ವಿಭಾಗಗಳ ನೌಕರರನ್ನು ಮನೆಗೆ ಕಳುಹಿಸಲು ಅಮೆಜಾನ್‌ ತೀರ್ಮಾನಿಸಿದೆ. ಕಂಪನಿಯ ಸುದೀರ್ಘ ಯಶಸ್ಸನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬುದಾಗಿ ಸಿಇಒ ತಿಳಿಸಿದ್ದಾರೆ.

ಕೇವಲ ಎರಡು ತಿಂಗಳ ಹಿಂದಷ್ಟೇ ಅಂದರೆ, ಜನವರಿಯಲ್ಲಿಯೇ ಅಮೆಜಾನ್‌ ಕಂಪನಿಯು 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಸ್ಟೋರ್‌ ಸೇರಿ ಕೆಲವೇ ಕೆಲವು ವಿಭಾಗಗಳ ನೌಕರರನ್ನು ವಜಾಗೊಳಿಸಿತ್ತು. ಆದರೆ, ಈಗ ಹಲವು ವಿಭಾಗಗಳ ಜನರ ಉದ್ಯೋಗಕ್ಕೆ ಕತ್ತರಿ ಹಾಕಿದೆ. ಆ್ಯಂಡಿ ಜಾಸಿ ಮೆಮೊ ನೋಡಿ ಸಾವಿರಾರು ಉದ್ಯೋಗಿಗಳು ಆತಂಕದಲ್ಲಿಯೇ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.

ಲಕ್ಷಾಂತರ ರೂಪಾಯಿ ಸಂಬಳ, ವೃತ್ತಿಪರತೆ, ಹತ್ತಾರು ಸೌಲಭ್ಯಗಳು, ಉತ್ತಮ ಕಾರ್ಯಕ್ಷಮತೆಯ ವಾತಾವರಣ ಸೇರಿ ಹತ್ತಾರು ಕಾರಣಗಳಿಂದಾಗಿ ಜನ ಎಂಎನ್‌ಸಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದಾರೆ. ಆದರೆ, ಇತ್ತೀಚೆಗೆ ಜಾಗತಿಕ ಕಂಪನಿಗಳು ಸಾಲು ಸಾಲಾಗಿ, ಯಾವುದೇ ಮುಲಾಜಿಲ್ಲದೆ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಹಾಗಾಗಿ, ಎಷ್ಟು ಸಂಬಳ ಕೊಟ್ಟರೂ, ಎಷ್ಟೇ ಸೌಲಭ್ಯ ಇದ್ದರೂ ಜನರಿಗೆ ಎಂಎನ್‌ಸಿಗಳ ಸಹವಾಸವೇ ಸಾಕು ಎನಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Meta Layoff : ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾದಲ್ಲಿ ಮತ್ತೆ ಸಾವಿರಾರು ಉದ್ಯೋಗ ಕಡಿತ

ಜಾಗತಿಕ ಆರ್ಥಿಕ ಹಿಂಜರಿತ, ಕೊರೊನಾ ಅವಧಿಯಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸುವುದು ಸೇರಿ ಹಲವು ಕಾರಣಗಳಿಂದಾಗಿ ಜಾಗತಿಕ ದೈತ್ಯ ಕಂಪನಿಗಳು ಈಗಿನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿವೆ. ಈಗಾಗಲೇ, ಗೂಗಲ್‌, ಮೆಟಾ, ಅಲ್ಫಾಬೆಟ್‌, ಮೈಕ್ರೋಸಾಫ್ಟ್‌, ಕ್ರಿಪ್ಟೋ, ಡೆಲ್‌, ಇ-ಬೇ, ಟ್ವಿಟರ್‌, ನೆಟ್‌ಫ್ಲಿಕ್ಸ್‌, ಟೆಸ್ಲಾ, ಜೂಮ್‌ ಸೇರಿ ಹತ್ತಾರು ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ.

Exit mobile version