Site icon Vistara News

Gujarat Summit: ಮೋದಿಯನ್ನು ಶ್ಲಾಘಿಸಿದ ಅಂಬಾನಿ; ಭಾರತದ ಮೊದಲ UAVಗೆ ಚಾಲನೆ

Deep fake Scam

ಅಹಮದಾಬಾದ್:‌ ಇಲ್ಲಿ ನಡೆಯುತ್ತಿರುವ ʼವೈಬ್ರೆಂಟ್ ಗುಜರಾತ್ ಶೃಂಗಸಭೆʼಯಲ್ಲಿ (Vibrant Gujarat summit) ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿ (Mukhesh Ambani) ಅವರು ಪ್ರಧಾನಿ ನರೇಂದ್ರ ಮೋದಿ (pm narendra modi) ಅವರನ್ನು ʼದೂರದೃಷ್ಟಿಯ ಪ್ರಧಾನಿʼ ಎಂದು ಶ್ಲಾಘಿಸಿದ್ದಾರೆ. ಇದೇ ಸಂದರ್ಭದಲ್ಲಿ ದೇಶದ ಮೊದಲ, ಸ್ಥಳೀಯ ತಂತ್ರಜ್ಞಾನದ ಮಾನವರಹಿತ ವೈಮಾನಿಕ ವಾಹನಕ್ಕೆ (Unmanned Aerial Vehicle – UAV) ಚಾಲನೆ ನೀಡಲಾಯಿತು.

ಉದ್ಯಮಿ ಮುಖೇಶ್‌ ಅಂಬಾನಿ, ನರೇಂದ್ರ ಮೋದಿ ಅವರನ್ನು ʼಭಾರತದ ಅತ್ಯಂತ ಯಶಸ್ವಿ ಪ್ರಧಾನಿʼ ಎಂದು ಶ್ಲಾಘಿಸಿದರು. ರಿಲಯನ್ಸ್‌ನ ಗಮನಾರ್ಹ ಹೂಡಿಕೆಗಳನ್ನು ಅಂಬಾನಿ ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದರು. ಭಾರತದಲ್ಲಿ ಕಂಪನಿಯ $150 ಶತಕೋಟಿಯ ಮೂರನೇ ಒಂದು ಭಾಗದಷ್ಟು ಹೂಡಿಕೆಗಳು ಗುಜರಾತ್‌ನಲ್ಲಿಯೇ ಆಗಿವೆ ಎಂದರು.

ವೈಬ್ರೆಂಟ್ ಗುಜರಾತ್ ಶೃಂಗಸಭೆಯು ಜಾಗತಿಕವಾಗಿ ಅತ್ಯಂತ ಪ್ರತಿಷ್ಠಿತ ಹೂಡಿಕೆದಾರರ ಶೃಂಗಸಭೆಯಾಗಿದೆ. ಅದರ ಯಶಸ್ಸಿಗೆ ಪ್ರಧಾನಿ ಮೋದಿಯವರ ದೂರದೃಷ್ಟಿ ಕಾರಣ ಎಂದರು. 2047ರ ವೇಳೆಗೆ ಭಾರತವು $35 ಟ್ರಿಲಿಯನ್ ಆರ್ಥಿಕತೆಯಾಗಲಿದೆ, ಗುಜರಾತ್ $3 ಲಕ್ಷ ಕೋಟಿ ಆರ್ಥಿಕತೆಯನ್ನು ತಲುಪುತ್ತದೆ ಎಂದು ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾನವರಹಿತ ವೈಮಾನಿಕ ವಾಹನಕ್ಕೆ (UAV) ಚಾಲನೆ ನೀಡಲಾಯಿತು. ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್, ಭಾರತೀಯ ನೌಕಾಪಡೆಗಾಗಿ ಸ್ವದೇಶಿ ತಂತ್ರಜ್ಞಾನದ ದೃಷ್ಟಿ 10 ಸ್ಟಾರ್‌ಲೈನರ್ ಮಾನವರಹಿತ ವೈಮಾನಿಕ ವಾಹನ (Drishti 10 Starliner Unmanned Aerial Vehicle) ಅನ್ನು ಅಭಿವೃದ್ಧಿಪಡಿಸಿದೆ. ಇದು ರಕ್ಷಣೆ ಮತ್ತು ಭದ್ರತೆಯಲ್ಲಿ ಸ್ವಾವಲಂಬನೆಗೆ ತನ್ನ ಬದ್ಧತೆಯನ್ನು ಒತ್ತಿಹೇಳಿದೆ.

ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಆರ್. ಹರಿಕುಮಾರ್, ನೌಕಾಪಡೆಯ ಅಗತ್ಯಗಳೊಂದಿಗೆ ಅದಾನಿ ಕಂಪನಿಯ ಸಹಯೋಗದ ಪ್ರಯತ್ನಗಳನ್ನು ಶ್ಲಾಘಿಸಿದರು. ಈ ಹೊಸ UAV 36 ಗಂಟೆಗಳ ಹಾರುವ ಸಮಯ, 450 ಕೆಜಿ ಪೇಲೋಡ್ ಸಾಮರ್ಥ್ಯ ಹೊಂದಿದೆ. ಇದು ನೌಕಾ ಕಾರ್ಯಾಚರಣೆಗಳಲ್ಲಿ ಜೊತೆಯಾಗಿ ಕಡಲ ಕಣ್ಗಾವಲು ಹೆಚ್ಚಿಸಲಿದೆ.

ಅದಾನಿ ಕಂಪನಿಯ ಉಪಾಧ್ಯಕ್ಷ ಜೀತ್ ಅದಾನಿ ಅವರು ಭಾರತೀಯ ಸಶಸ್ತ್ರ ಪಡೆಗಳಿಗೆ ಈ ತಂತ್ರಜ್ಞಾನದ ಮಹತ್ವ ಮತ್ತು ಜಾಗತಿಕ ರಫ್ತು ಸಾಮರ್ಥ್ಯವನ್ನು ಎತ್ತಿ ತೋರಿಸಿದರು. Elbits Hermes 900 MALE ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ದೃಷ್ಟಿ 10, ಎಲ್ಲಾ ಹವಾಮಾನದ ಮಿಲಿಟರಿ ಕಾರ್ಯಾಚರಣೆಗಳು ಮತ್ತು ನಾಗರಿಕ ವಾಯುಪ್ರದೇಶದ ಬಳಕೆಗಾಗಿ ಅಭಿವೃದ್ಧಿಪಡಿಸಲ್ಪಟ್ಟಿದೆ. ಇದು ಭಾರತದ ISR ತಂತ್ರಜ್ಞಾನ ಅನ್ವೇಷಣೆಯಲ್ಲಿ ಒಂದು ಮೈಲಿಗಲ್ಲು ಎನಿಸಲಿದೆ.

ಇದನ್ನೂ ಓದಿ: Mukesh Ambani: ರಿಲಯನ್ಸ್‌ಗೆ ಜಾಗತಿಕ ಟಾಪ್ 10 ಉದ್ಯಮ ಸಮೂಹದಲ್ಲಿ ಸ್ಥಾನ ಪಡೆಯುವ ಗುರಿ; ಮುಕೇಶ್ ಅಂಬಾನಿ

Exit mobile version