Site icon Vistara News

Modi Stalin Show: ಕೆಸಿಆರ್‌ಗೆ ಟೀಕೆ, ಸ್ಟಾಲಿನ್‌ ಜತೆ ಕೇಕೆ; ತಮಿಳುನಾಡಿನಲ್ಲಿ ಮೋದಿ-ಸ್ಟಾಲಿನ್‌ ಸ್ನೇಹದ ಮೋಡಿ

Amid a politically supercharged atmosphere in the south, a Modi-Stalin show of camaraderie in Chennai

Amid a politically supercharged atmosphere in the south, a Modi-Stalin show of camaraderie in Chennai

ಚೆನ್ನೈ: ರಾಜಕಾರಣ ಇರುವುದೇ ಹಾಗೆ. ಅಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ದಿನವಿಡೀ ವಾಗ್ವಾದ, ಟೀಕೆ, ಆರೋಪ, ಪ್ರತ್ಯಾರೋಪ ನಡೆಸಿಯೂ ಬೇರೆ ಬೇರೆ ಪಕ್ಷಗಳ ನಾಯಕರು ಆತ್ಮೀಯರಾಗಿರುತ್ತಾರೆ. ಈ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ನಿಜವಾಗಿಸಿದ್ದಾರೆ. ಅದರಲ್ಲೂ, ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಮೋದಿ, ತಮಿಳುನಾಡಿನಲ್ಲಿ ಸ್ಟಾಲಿನ್‌ ಜತೆ ಆತ್ಮೀಯವಾಗಿ (Modi Stalin Show) ಬೆರೆತಿದ್ದು ಚರ್ಚೆಗೆ ಗ್ರಾಸವಾಗಿದೆ.

ತೆಲಂಗಾಣದಲ್ಲಿ ಕೆ.ಚಂದ್ರಶೇಖರ್‌ ರಾವ್‌ ಅವರ ಬಿಆರ್‌ಎಸ್‌ ಪಕ್ಷವು ಬಿಜೆಪಿಗೆ ಹೇಗೆ ಪ್ರಮುಖ ವಿರೋಧ ಪಕ್ಷವೋ, ತಮಿಳುನಾಡಿನಲ್ಲೂ ಬಿಜೆಪಿಗೆ ಎಂ.ಕೆ.ಸ್ಟಾಲಿನ್‌ ಅವರ ಡಿಎಂಕೆ ಪ್ರಮುಖ ವಿರೋಧ ಪಕ್ಷ. ಹೀಗಿದ್ದರೂ, ಶನಿವಾರ (March 8) ತಮಿಳುನಾಡಿನಲ್ಲಿ ಮೋದಿ ಹಾಗೂ ಸ್ಟಾಲಿನ್‌ ಅವರ ನಡುವೆ ಇದ್ದ ಆತ್ಮೀಯತೆ, ಆಗಾಗ ಪ್ರದರ್ಶನವಾಗುತ್ತಿದ್ದ ಕಾಳಜಿ, ಕೊರಳ ಗೆಳೆಯನಂತೆ ಮೋದಿ ನಡೆದುಕೊಂಡ ರೀತಿಯು ಚರ್ಚೆಗೆ ಕಾರಣವಾಗಿವೆ.

ಆತ್ಮೀಯವಾಗಿ ಸ್ವಾಗತಿಸಿದ ಸ್ಟಾಲಿನ್‌

ತಮಿಳುನಾಡಿಗೆ ಆಗಮಿಸುತ್ತಲೇ ವಿಮಾನ ನಿಲ್ದಾಣಕ್ಕೆ ತೆರಳಿದ ಎಂ.ಕೆ.ಸ್ಟಾಲಿನ್‌ ಅವರು ಮೋದಿ ಅವರಿಗೆ ಪುಸ್ತಕ ನೀಡಿ, ಆತ್ಮೀಯವಾಗಿ ಸ್ವಾಗತಿಸಿದರು. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ನೂತನ ಟರ್ಮಿನಲ್‌ಅನ್ನು ಮೋದಿ ಉದ್ಘಾಟಿಸಿದರು.

ಇದಾದ ಬಳಿಕ ಮೋದಿ ಹಾಗೂ ಸ್ಟಾಲಿನ್‌ ಕೈ ಕೈ ಹಿಡಿದು ಟರ್ಮಿನಲ್‌ ವೀಕ್ಷಣೆ ಮಾಡಿದರು. ಇದೇ ವೇಳೆ ಇಬ್ಬರೂ ಹಾಸ್ಯ ಚಟಾಕಿ ಹಾರಿಸಿದರು, ಮೋದಿ ಅವರ ಕೈ ತಟ್ಟ ಸ್ಟಾಲಿನ್‌ ಸಂತಸ ವ್ಯಕ್ತಪಡಿಸಿದರು. ಮೋದಿ ತಮಿಳುನಾಡು ಭೇಟಿಯ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದ ಸ್ಟಾಲಿನ್‌ ಬಳಿಕ ಮೋದಿ ಅವರನ್ನು ಬೀಳ್ಕೊಟ್ಟರು. ಮೋದಿ ಹಾಗೂ ಸ್ಟಾಲಿನ್‌ ಅವರು ರಾಜಕೀಯ ವಿರೋಧವನ್ನು ಮರೆತು ಸ್ನೇಹದಿಂದ ಇದ್ದಿದ್ದು ನೋಡಿ ಜಾಲತಾಣಗಳಲ್ಲಿ ಕೆಲವರು ಸಂತಸ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಟೀಕಿಸಿದ್ದಾರೆ.

ಹೀಗಿತ್ತು ದೋಸ್ತಿ

ಚೆನ್ನೈ-ಕೊಯಮತ್ತೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ವೇದಿಕೆ ಮೇಲೆ ಜನರತ್ತ ಕೈ ಬೀಸುವಾಗ ಮೋದಿ ಅವರು ಸ್ಟಾಲಿನ್‌ ಅವರನ್ನೂ ಕರೆದರು. ಇಬ್ಬರೂ ಒಂದೇ ಪಕ್ಷದ ನಾಯಕರೇನೋ ಎಂಬಂತೆ ಜನರತ್ತ ಕೈ ಬೀಸಿದರು.

ಕೆಸಿಆರ್‌ಗೆ ಮೋದಿ ಮಾತಿನೇಟು

ಹೈದರಾಬಾದ್‌ನಲ್ಲಿ ರ‍್ಯಾಲಿ ನಡೆಸಿದ ಮೋದಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ತೆಲಂಗಾಣದ ಜನರ ಏಳಿಗೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿರುವುದು, ಉದ್ದೇಶಪೂರ್ವಕವಾಗಿ ಯೋಜನೆಗಳ ಜಾರಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ನನಗೆ ಬೇಸರವಾಗಿದೆ. ಹಾಗಾಗಿ, ರಾಜ್ಯದ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತರುವ ಯೋಜನೆಗಳಿಗೆ ಅಡ್ಡಿಪಡಿಸಬಾರದು ಎಂಬುದಾಗಿ ಮನವಿ ಮಾಡುತ್ತೇನೆ” ಎಂದು ಮೃದು ಮಾತಿನಲ್ಲೇ ಚಾಟಿ ಬೀಸಿದರು.

ಮೋದಿಯ ಸ್ವಾಗತಿಸಲು ತೆರಳದ ಕೆಸಿಆರ್‌

ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಹೋದರೆ, ಶಿಷ್ಟಾಚಾರದಂತೆ ಅವರನ್ನು ಆಹ್ವಾನಿಸಲು ವಿಮಾನ ನಿಲ್ದಾಣಕ್ಕೆ ಹೋಗುವುದರಿಂದ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ಮತ್ತೆ ತಪ್ಪಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಕೆಸಿಆರ್‌ ಈ ಬಾರಿಯೂ ಗೈರಾದರು. ಹಾಗೆಯೇ, ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಕೆ.ಚಂದ್ರಶೇಖರ ರಾವ್‌ ಅವರಿಗೆ ಪ್ರಧಾನಮಂತ್ರಿ ಕಚೇರಿಯಿಂದ ಆಹ್ವಾನ ನೀಡಲಾಗಿತ್ತು. ಹಾಗಿದ್ದರೂ, ಕೆಸಿಆರ್‌ ಅವರು ಕಾರ್ಯಕ್ರಮಗಳಿಗೂ ಗೈರಾದರು.

ಇದನ್ನೂ ಓದಿ: Vande Bharat Express: ದೇಶದ 13ನೇ ವಂದೇ ಭಾರತ್​ ರೈಲು ಸಂಚಾರಕ್ಕೆ ಪ್ರಧಾನಿ ಮೋದಿಯವರಿಂದ ಚಾಲನೆ

Exit mobile version