ನವದೆಹಲಿ: ಕೇಂದ್ರ ಸರ್ಕಾರ (Central Government) ಸೋಮವಾರ ಘೋಷಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನುಷ್ಠಾನವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ (Union home minister) ಅಮಿತ್ ಶಾ (Amit Shah) ಕಿಡಿ ಕಾರಿದ್ದಾರೆ. ಸಿಎಎ ಕಾಯ್ದೆ ವಿರುದ್ಧದ ಕಾಂಗ್ರೆಸ್‌ನ ನಿಲುವು ʼತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯʼದಿಂದ ಹುಟ್ಟಿಕೊಂಡಿವೆ ಎಂದು ಅವರು ಆರೋಪಿಸಿದ್ದಾರೆ.
“ನಾವು ಸಿಎಎ ಜಾರಿಗೆ ತರುತ್ತೇವೆ ಎಂದಾಗಲೇ ಕಾಂಗ್ರೆಸ್ ಇದನ್ನು ವಿರೋಧಿಸಿದೆ. ಸ್ವಾತಂತ್ರ್ಯದ ನಂತರ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಧಾರ್ಮಿಕತೆಯ ಆಧಾರದ ಮೇಲೆ ಕಿರುಕುಳಕ್ಕೊಳಗಾದವರಿಗೆ ಭಾರತದ ಪೌರತ್ವ ನೀಡಲಾಗುವುದು ಎಂದು ಕಾಂಗ್ರೆಸ್ ಮತ್ತು ನಮ್ಮ ಸಂವಿಧಾನದ ನಿರ್ಮಾತೃಗಳು ಭರವಸೆ ನೀಡಿದ್ದರು. ಆದರೆ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ಕಾಂಗ್ರೆಸ್ ಸಿಎಎಯನ್ನು ವಿರೋಧಿಸಿದೆ” ಎಂದು ಅವರು ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿ ನಡೆದ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮೋದಿಯನ್ನು ಹೊಗಳಿದ ಅಮಿತ್ ಶಾ
ಈ ವೇಳೆ ಗೃಹ ಸಚಿವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ʼʼಸಿಎಎ ಮೂಲಕ ಪ್ರಧಾನಿ ಮೋದಿ ಅವರು ಹಿಂದೂ, ಸಿಖ್, ಬೌದ್ಧ ಮತ್ತು ಜೈನ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಭರವಸೆ ನೀಡಿದ್ದಾರೆ. ತಮ್ಮ ನಂಬಿಕೆ ಮತ್ತು ಗೌರವವನ್ನು ಉಳಿಸಿಕೊಳ್ಳಲು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಲಕ್ಷಾಂತರ ಮಂದಿ ಭಾರತಕ್ಕೆ ಬಂದಿದ್ದಾರೆ. ಆದರೆ ಕಾಂಗ್ರೆಸ್ ಅವರಿಗೆ ಪೌರತ್ವ ನೀಡಲಿಲ್ಲ” ಎಂದು ಅವರು ಹೇಳಿದ್ದಾರೆ.
ವಿಪಕ್ಷಗಳಿಂದ ವಿರೋಧ
ಸಿಎಎ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ಈ ಕ್ರಮದ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, “ಸಿಎಎ ನಿಯಮಗಳನ್ನು ಚುನಾವಣೆ ಸಮಯದಲ್ಲಿಯೇ ಘೋಷಿಸಲಾಗಿದೆ. ಇದು ಪ್ರಧಾನಿ ಮಂತ್ರಿಯ ಕಪಟ ಸುಳ್ಳುಗಳ ಮತ್ತೊಂದು ಪ್ರದರ್ಶನ” ಎಂದು ದೂರಿದ್ದಾರೆ.
ಪ್ರತಿಭಟನೆ
ಅಸ್ಸಾಂ ವಿಧಾನಸಭೆಯ ವಿಪಕ್ಷ ನಾಯಕ ದೇಬಬ್ರತಾ ಸೈಕಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಗುವಾಹಟಿಯ ರಾಜ್ಯ ಪ್ರಧಾನ ಕಚೇರಿಯ ಮುಂದೆ ಸಿಎಎ ಅನುಷ್ಠಾನದ ವಿರುದ್ಧ ಪ್ರತಿಭಟನೆ ನಡೆಸಿದರು. ಕೆಲವರು ಅಧಿಸೂಚನೆಯ ಪ್ರತಿಗಳನ್ನು ಸುಟ್ಟು ಹಾಕಿದರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: CAA: ಸಿಎಎ ಜಾರಿ; ಕೇರಳ, ತಮಿಳುನಾಡು ಮುಖ್ಯಮಂತ್ರಿಗಳ ನಿಲುವೇನು?
ಕಾಂಗ್ರೆಸ್ ಜತೆಗೆ ಇತರ ವಿಪಕ್ಷಗಳೂ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಧಿಸೂಚನೆ ಹೊರಡಿಸಿದ ನಿಯಮಗಳು “ಅಸಂವಿಧಾನಿಕ ಮತ್ತು ತಾರತಮ್ಯ” ಎಂದು ಹೇಳಿದ್ದಾರೆ ಮತ್ತು ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಮೊದಲು ʼಹಲವಾರು ಬಾರಿ ಯೋಚಿಸಿʼ ಎಂದೂ ಕರೆ ನೀಡಿದ್ದಾರೆ. ಇನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಿಎಎಯನ್ನು ತಮ್ಮ ರಾಜ್ಯಗಳಲ್ಲಿ ಅನುಷ್ಠಾನಗೊಳಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಕಾಯ್ದೆ ಕಾನೂನುಬಾಹಿರ ಎಂದೂ ಟೀಕಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ