ನವದೆಹಲಿ: ಸಾಲು ಸಾಲು ಸಮಾವೇಶ ಹಾಗೂ ಅಭಿಯಾನಗಳ ಮೂಲಕ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ, ಚುನಾವಣೆ ಚಾಣಕ್ಯ ಅಮಿತ್ ಶಾ ಅವರು ರಣತಂತ್ರದ ಕಣಕ್ಕೆ (BJP Strategy) ಇಳಿದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರದ ಹಲವು ಸಚಿವರೊಂದಿಗೆ ಅಮಿತ್ ಶಾ ಸಭೆ ನಡೆಸಿದ್ದು, 2024ರ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸುವ ಕುರಿತು ಚರ್ಚಿಸಿದ್ದಾರೆ.
ಅದರಲ್ಲೂ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಕಡಿಮೆ ಅಂತರದಲ್ಲಿ ಸೋಲನುಭವಿಸಿದ 144 ಕ್ಷೇತ್ರಗಳ ಬಗ್ಗೆಯೇ ಹೆಚ್ಚಿನ ಗಮನಹರಿಸುವ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಕಡಿಮೆ ಅಂತರದಲ್ಲಿ ಸೋಲನುಭವಿಸಿದ 144 ಕ್ಷೇತ್ರಗಳಲ್ಲಿ ಪ್ರತಿಯೊಬ್ಬ ಸಚಿವರಿಗೆ ಮೂರರಿಂದ ನಾಲ್ಕು ಕ್ಷೇತ್ರಗಳ ಉಸ್ತುವಾರಿ ವಹಿಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಸಚಿವರು 144 ಕ್ಷೇತ್ರಗಳಲ್ಲಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಒಗ್ಗೂಡಿಸಿಕೊಂಡು ಕಾರ್ಯನಿರ್ವಹಿಸಬೇಕು. ಹಾಗೆಯೇ, ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳ ಸಾಧನೆಯನ್ನು ಜನರಿಗೆ ಮನವರಿಕೆ ಮಾಡಬೇಕು. ಆ ಮೂಲಕ ಕಡಿಮೆ ಅಂತರದಲ್ಲಿ ಸೋಲುಂಡ ಕ್ಷೇತ್ರಗಳಲ್ಲಿ ಜನರ ಮನವೊಲಿಸಬೇಕು ಎಂಬುದಾಗಿ ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಅವರು ಸಚಿವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ವರ್ಷಾಂತ್ಯದಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಹಾಗಾಗಿ, ಕಾಂಗ್ರೆಸ್ ಬಿರುಸಿನ ಚಟುವಟಿಕೆಗಳಲ್ಲಿ ತೊಡಗಿದೆ. ಸೆಪ್ಟೆಂಬರ್ 7ರಿಂದ ಭಾರತ್ ಜೋಡೊ ಯಾತ್ರೆ ಕೈಗೊಳ್ಳುತ್ತಿದೆ. ಇದರ ಮಧ್ಯೆಯೇ, ಅಮಿತ್ ಶಾ ಅವರು ಚುನಾವಣೆ ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಇದನ್ನೂ ಓದಿ | ರಾಹುಲ್ ಗಾಂಧಿ ಭೇಟಿ ಮಾಡಿದ ನಿತೀಶ್ ಕುಮಾರ್; ಲೋಕಸಭೆ ಚುನಾವಣೆ ಪೂರ್ವ ಒಗ್ಗಟ್ಟಿನ ಮಂತ್ರ