ನವದೆಹಲಿ: ಚುನಾವಣಾ ಬಾಂಡ್‌ಗಳ (Electoral Bonds) ಕುರಿತು ಸುಪ್ರೀಂ ಕೋರ್ಟ್‌ನ (Supreme Court) ಆದೇಶವನ್ನು ಸಂಪೂರ್ಣವಾಗಿ ಗೌರವಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Home minister Amit Shah) ಹೇಳಿದ್ದಾರೆ. ಇದರ ಜತೆಗೆ ಅವರು ಈ ನಿಯಮವನ್ನು ಇನ್ನಷ್ಟು ಸುಧಾರಿಸಬೇಕಿತ್ತು ಎಂದು ಹೇಳಿದ್ದಾರೆ. ಒಟ್ಟು 20,000 ಕೋಟಿ ರೂ. ಚುನಾವಣಾ ಬಾಂಡ್‌ಗಳಲ್ಲಿ ಬಿಜೆಪಿಗೆ ಅಂದಾಜು 6,000 ಕೋಟಿ ರೂ. ಸಿಕ್ಕಿದೆ. ಉಳಿದ ಬಾಂಡ್‌ಗಳು ಎಲ್ಲಿ ಹೋದವು? ಎಂದು ಅವರು ಪ್ರಶ್ನಿಸಿದ್ದಾರೆ.
ಅಮಿತ್ ಶಾ ಹೇಳಿದ್ದೇನು?
“ಚುನಾವಣಾ ಬಾಂಡ್‌ಗಳು ಬಿಜೆಪಿಗೆ ಲಾಭ ತಂದುಕೊಟ್ಟಿವೆ ಎಂದು ಹೇಳಲಾಗಿದೆ. ರಾಹುಲ್ ಗಾಂಧಿ ಇದು ಅತಿದೊಡ್ಡ ಸುಲಿಗೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ಒಟ್ಟು 20,000 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳಲ್ಲಿ ಬಿಜೆಪಿಗೆ ಅಂದಾಜು 6,000 ಕೋಟಿ ರೂ. ಸಿಕ್ಕಿದೆ. ಉಳಿದ 14,000 ಕೋಟಿ ರೂ.ಗಳ ಪೈಕಿ ಟಿಎಂಸಿಗೆ 1,600 ಕೋಟಿ ರೂ., ಕಾಂಗ್ರೆಸ್‌ಗೆ 1,400 ಕೋಟಿ ರೂ. ಸಿಕ್ಕಿದೆ. ಅಲ್ಲದೆ ಬಿಆರ್‌ಎಸ್‌ಗೆ 1,200 ಕೋಟಿ ರೂ., ಬಿಜೆಡಿಗೆ 750 ಕೋಟಿ ರೂ. ಮತ್ತು ಡಿಎಂಕೆ 639 ಕೋಟಿ ರೂ. ಸಂದಾಯವಾಗಿದೆʼʼ ಎಂದು ಗೃಹ ಸಚಿವರು ವಿವರಿಸಿದ್ದಾರೆ.
ನಾವು 303 ಸಂಸದರನ್ನು ಹೊಂದಿದ್ದು, 6,000 ಕೋಟಿ ರೂ. ಪಡೆದಿದ್ದೇವೆ ಮತ್ತು ಉಳಿದ ಪಕ್ಷಗಳು 242 ಸಂಸದರನ್ನು ಹೊಂದಿ 14,000 ಕೋಟಿ ರೂ. ಪಡೆದುಕೊಂಡಿವೆ. ಹೀಗಿದ್ದೂ ಈಗ ಗದ್ದಲ ಎಬ್ಬಿಸುವುದು ಯಾವುದರ ಬಗ್ಗೆ? ಒಮ್ಮೆ ಖಾತೆಗಳ ವಿವರ ಇತ್ಯರ್ಥಪಡಿಸಿದರೆ ಅವರು ನಿಮ್ಮೆಲ್ಲರ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಿಲ್ಲ” ಎಂದು ಅಮಿತ್ ಶಾ ಹೇಳಿದ್ದಾರೆ.
ಕಪ್ಪುಹಣವನ್ನು ಕೊನೆಗೊಳಿಸಲು ಪ್ರಯತ್ನ
ಚುನಾವಣಾ ಬಾಂಡ್ ಅನ್ನು ಸಮರ್ಥಿಸಿದ ಅಮಿತ್ ಶಾ, ʼʼಭಾರತೀಯ ರಾಜಕೀಯದಲ್ಲಿ ಕಪ್ಪುಹಣದ ಪ್ರಭಾವವನ್ನು ಕೊನೆಗೊಳಿಸಲು ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಲಾಗಿತ್ತು. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ ಚುನಾವಣಾ ಬಾಂಡ್‌ಗಳನ್ನು ಸಂಪೂರ್ಣವಾಗಿ ರದ್ದುಪಡಿಸುವ ಬದಲು ಸುಧಾರಿಸುವ ಕೆಲಸ ಮಾಡಬೇಕು ಎನ್ನಿವುದು ನನ್ನ ಅಭಿಪ್ರಾಯʼʼ ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ರಾಜಕೀಯ ದೇಣಿಗೆಯನ್ನು ನಗದು ರೂಪದಲ್ಲಿ ತೆಗೆದುಕೊಳ್ಳುತ್ತಿದ್ದರು. ಅವರು 1,100 ರೂ. ದೇಣಿಗೆಯಲ್ಲಿ 100 ರೂ. ಅನ್ನು ಪಕ್ಷದ ಹೆಸರಿನಲ್ಲಿ ಠೇವಣಿ ಇಡುತ್ತಿದ್ದರು ಮತ್ತು 1,000 ರೂ. ಅನ್ನು ತಮ್ಮಲ್ಲಿ ಇಟ್ಟುಕೊಳ್ಳುತ್ತಿದ್ದರು. ಕಾಂಗ್ರೆಸ್ ಈ ವ್ಯವಸ್ಥೆಯನ್ನು ವರ್ಷಗಳಿಂದ ನಡೆಸುತ್ತಿದೆ ಎಂದು ಶಾ ಟೀಕಿಸಿದ್ದಾರೆ.
ಇದನ್ನೂ ಓದಿ: Electoral Bond: ಚುನಾವಣಾ ಬಾಂಡ್‌ಗಳ ವಿವರ ಬಹಿರಂಗಪಡಿಸಿದ ಆಯೋಗ; ಡೇಟಾದಲ್ಲಿ ಏನೇನಿದೆ?
ಫೆಬ್ರವರಿ 15ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಅನಾಮಧೇಯ ರಾಜಕೀಯ ಧನಸಹಾಯವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಇದನ್ನು “ಅಸಂವಿಧಾನಿಕ” ಎಂದು ಕರೆದಿತ್ತು ಮತ್ತು ದಾನಿಗಳು ಮತ್ತು ಸ್ವೀಕರಿಸುವವರ ಮೊತ್ತವನ್ನು ಮಾರ್ಚ್ 13ರೊಳಗೆ ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. ಎರಡು ವಿಭಾಗಗಳಲ್ಲಿ ಎಸ್‌ಬಿಐ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಒಂದು ವಿಭಾಗದಲ್ಲಿ, ಚುನಾವಣೆ ಬಾಂಡ್‌ಗಳನ್ನು ಖರೀದಿಸಿ ದೇಣಿಗೆ ನೀಡಿದವರ ಮಾಹಿತಿ, ಹೆಸರು, ಅವರು ನೀಡಿದ ಮೊತ್ತದ ದಾಖಲೆ ಇರಬೇಕು. ಇನ್ನು, ಎರಡನೇ ಭಾಗದಲ್ಲಿ ರಾಜಕೀಯ ಪಕ್ಷಗಳು ಬಾಂಡ್‌ಗಳ ಮೂಲಕ ದೇಣಿಗೆಯನ್ನು ನಗದೀಕರಣ ಮಾಡಿಕೊಂಡಿರುವ ಕುರಿತು ಮಾಹಿತಿ ಇರಬೇಕು ಎಂದು ಸೂಚಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ