Site icon Vistara News

Amit Shah: ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧ ಇನ್ನೂ ಐದು ವರ್ಷ ವಿಸ್ತರಣೆ: ಅಮಿತ್‌ ಶಾ

PM Modi Created Sudarshan Chakra For Maritime security Of India Says Amit Shah

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪ್ರತ್ಯೇಕತಾವಾದಿ ಸಂಘಟನೆ (separatist outfit) ಜಮಾತ್-ಎ-ಇಸ್ಲಾಮಿ (Jamaat-e-Islami) ಮೇಲಿನ ನಿಷೇಧವನ್ನು ನರೇಂದ್ರ ಮೋದಿ (Narendra Modi) ಸರ್ಕಾರ ಮಂಗಳವಾರ ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Home minister Amit Shah) ತಿಳಿಸಿದ್ದಾರೆ.

“ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಜಿ ಅವರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುವ ಸರ್ಕಾರವು ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧವನ್ನು ಐದು ವರ್ಷಗಳವರೆಗೆ ವಿಸ್ತರಿಸಿದೆ. ಈ ಸಂಘಟನೆಯು ರಾಷ್ಟ್ರದ ಭದ್ರತೆ, ಸಮಗ್ರತೆ ಮತ್ತು ಸಾರ್ವಭೌಮತ್ವದ ವಿರುದ್ಧ ತನ್ನ ಚಟುವಟಿಕೆಗಳನ್ನು ಮುಂದುವರೆಸುತ್ತಿದೆ. ಈ ಸಂಸ್ಥೆಯನ್ನು ಮೊದಲು 2019ರ ಫೆಬ್ರವರಿ 28ರಂದು ʼಕಾನೂನುಬಾಹಿರ ಸಂಘಟನೆ’ ಎಂದು ಘೋಷಿಸಲಾಯಿತು” ಎಂದು ಷಾ ʼಎಕ್ಸ್‌ʼನಲ್ಲಿ ಪೋಸ್ಟ್ ಮಾಡಿದ್ದಾರೆ.

“ರಾಷ್ಟ್ರದ ಭದ್ರತೆಗೆ ಬೆದರಿಕೆ ಹಾಕುವ ಯಾರೇ ಆದರೂ ನಿರ್ದಯ ಕ್ರಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ. “2019ರಲ್ಲಿ ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆಯಾಗಿರುವ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ಸರ್ಕಾರವು ಐದು ವರ್ಷಗಳ ಅವಧಿಗೆ ಜಮಾತೆ ಇಸ್ಲಾಮಿಯನ್ನು ನಿಷೇಧಿಸಿತ್ತು. ಈ ಗುಂಪು ದೇಶದ ಏಕತೆ ಮತ್ತು ಸಮಗ್ರತೆಗೆ ಅಡ್ಡಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.

ಭಯೋತ್ಪಾದನೆಗೆ ಹಣಕಾಸು ಪೂರೈಸುತ್ತಿರುವ ಪ್ರಕರಣದಲ್ಲಿ ಜಮಾತ್-ಎ-ಇಸ್ಲಾಮಿಯ ಕಾಶ್ಮೀರ ವಿಭಾಗದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸಿದ ಕೆಲ ದಿನಗಳ ನಂತರ ಸರ್ಕಾರದ ಈ ನಿರ್ಧಾರ ಬಂದಿದೆ. ಶ್ರೀನಗರ, ಜಮ್ಮು, ಬುದ್ಗಾಮ್, ಕುಲ್ಗಾಮ್ ಮತ್ತು ಅನಂತನಾಗ್‌ನಲ್ಲಿ ನಡೆಸಿದ ದಾಳಿಯಲ್ಲಿ ಜಮಾತೆ ಮತ್ತು ಅದರ ಸಂಬಂಧಿತ ಟ್ರಸ್ಟ್‌ಗಳ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.

“2021ರ ಫೆಬ್ರವರಿ 5ರಂದು ದಾಖಲಾದ ಪ್ರಕರಣದ ತನಿಖೆಗಳು, ಫೆಬ್ರವರಿ 2019ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ನಿಷೇಧಿಸಲ್ಪಟ್ಟ ನಂತರವೂ ಜಮಾತೆ ಮತ್ತು ಅದರ ಸದಸ್ಯರು J&Kನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವುದನ್ನು ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ” ಎಂದು ಎನ್ಐಎ ವಕ್ತಾರರು ಹೇಳಿದ್ದಾರೆ. 2022ರ ಡಿಸೆಂಬರ್‌ನಲ್ಲಿ, J&K ರಾಜ್ಯ ತನಿಖಾ ಸಂಸ್ಥೆ (SIA) ಕಾಶ್ಮೀರ ಕಣಿವೆಯ ನಾಲ್ಕು ಜಿಲ್ಲೆಗಳಲ್ಲಿ ಜಮಾತೆಗೆ ಸೇರಿದ ₹100 ಕೋಟಿ ಮೌಲ್ಯದ ಹಲವಾರು ಆಸ್ತಿಗಳನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ: Muslim League: ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮ್ ಲೀಗ್ ಬ್ಯಾನ್! ಏನು ಕಾರಣ?

Exit mobile version