Site icon Vistara News

Amit Shah: ಇನ್ನು ಮುಂದೆ ಭಾರತ-ಮ್ಯಾನ್ಮಾರ್​ ಮಧ್ಯೆ ಮುಕ್ತ ಸಂಚಾರ ಅಸಾಧ್ಯ; ಅಮಿತ್‌ ಶಾ ಹೇಳಿದ್ದೇನು?

Amit Shah

Centre bans two Jammu and Kashmir-based outfits under UAPA

ನವದೆಹಲಿ: ಭಾರತದ ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಮ್ಯಾನ್ಮಾರ್ ನಡುವಿನ‌ ಮುಕ್ತ ಚಲನೆ ಆಡಳಿತ(Free Movement Regime-FMR)ವನ್ನು ರದ್ದುಗೊಳಿಸಲು ಗೃಹ ಸಚಿವಾಲಯ (MHA) ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah) ಗುರುವಾರ ತಿಳಿಸಿದ್ದಾರೆ. ಇದರಿಂದ ಇದುವರೆಗೆ ಮುಕ್ತವಾಗಿದ್ದ ಭಾರತ ಹಾಗೂ ಮ್ಯಾನ್ಮಾರ್​ ನಡುವಿನ ಗಡಿಯ ಸಂಚಾರ ಕೊನೆಯಾಗಲಿದೆ. ಅಲ್ಲದೆ ಎರಡೂ ದೇಶಗಳ ನಡುವೆ ಬೇಲಿ ಹಾಕಲಾಗುವುದು ಎಂದು ಅವರು ಹೇಳಿದ್ದಾರೆ. 

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅವರು, “ನಮ್ಮ ಗಡಿಗಳನ್ನು ಭದ್ರಪಡಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ” ಎಂದು ಹೇಳಿದ್ದಾರೆ. “ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಈಶಾನ್ಯ ರಾಜ್ಯಗಳ ಜನಸಂಖ್ಯಾ ಸ್ಥಿತಿಗತಿಯನ್ನು ಕಾಪಾಡಿಕೊಳ್ಳಲು ಮುಕ್ತ ಚಲನೆ ಆಡಳಿತವನ್ನು ರದ್ದುಗೊಳಿಸಲು ಗೃಹ ಸಚಿವಾಲಯ ನಿರ್ಧರಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಕಾರ್ಯ ನಿರ್ವಹಸುತ್ತಿರುವುದರಿಂದ ಎಫ್ಎಂಆರ್ ಅನ್ನು ತಕ್ಷಣ ಅಮಾನತುಗೊಳಿಸಲು ಎಂಎಚ್ಎ ಶಿಫಾರಸು ಮಾಡಿದೆʼʼ ಎಂದು ತಿಳಿಸಿದ್ದಾರೆ.

ಮುಕ್ತ ಚಲನೆ ಆಡಳಿತದಿಂದಾಗಿ ಭಾರತ-ಮ್ಯಾನ್ಮಾರ್ ಗಡಿಗೆ ಹತ್ತಿರದಲ್ಲಿ ವಾಸಿಸುವ ಜನರಿಗೆ ವೀಸಾ ಇಲ್ಲದೆ ಪರಸ್ಪರರ ಭೂ ಪ್ರದೇಶದೊಳಗೆ 16 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿತ್ತು. ಇನ್ನು ಮುಂದೆ ಈ ಸೌಲಭ್ಯ ದೊರೆಯುವುದಿಲ್ಲ. ಈ ವಾರದ ಆರಂಭದಲ್ಲಿ ಈ ಬಗ್ಗೆ ಮಾತನಾಡಿದ್ದ ಅಮಿತ್‌ ಶಾ, ʼʼಭಾರತವು ಸಂಪೂರ್ಣ 1,643 ಕಿ.ಮೀ. ಮ್ಯಾನ್ಮಾರ್ ಗಡಿಗೆ ಬೇಲಿ ಹಾಕಲಿದೆ ಮತ್ತು ತಡೆಗೋಡೆಯ ಪಕ್ಕದಲ್ಲಿ ಗಸ್ತು ಟ್ರ್ಯಾಕ್ ನಿರ್ಮಿಸಲಿದೆʼʼ ಎಂದು ಹೇಳಿದ್ದರು.

ʼʼಮಣಿಪುರದ ಮೋರೆಹ್‌ನಲ್ಲಿ 10 ಕಿ.ಮೀ. ಉದ್ದದ ಪ್ರದೇಶಕ್ಕೆ ಈಗಾಗಲೇ ಬೇಲಿ ಹಾಕಲಾಗಿದೆ ಮತ್ತು ʼಹೈಬ್ರಿಡ್ ಕಣ್ಗಾವಲು ವ್ಯವಸ್ಥೆಯನ್ನು ಒಳಗೊಂಡಿರುವ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ ಮಣಿಪುರದಲ್ಲಿ ಸುಮಾರು 20 ಕಿ.ಮೀ. ಉದ್ದದ ಬೇಲಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆʼʼ ಎಂದು ಅಮಿತ್‌ ಶಾ ತಿಳಿಸಿದ್ದರು.

ಮಿಜೋರಾಂನಿಂದ ವಿರೋಧ

ಆದಾಗ್ಯೂ ಮಣಿಪುರದ ನೆರೆಯ ಮಿಜೋರಾಂ, ಎಫ್ಎಂಆರ್ ತೆಗೆದುಹಾಕುವ ಅಥವಾ ಗಡಿಗೆ ಬೇಲಿ ಹಾಕುವ ಯಾವುದೇ ಕ್ರಮವನ್ನು ವಿರೋಧಿಸುವುದಾಗಿ ತಿಳಿಸಿದೆ. ʼʼಒಂದೇ ಜನಾಂಗೀಯ ಗುಂಪಿನವರನ್ನು (ಗಡಿಯ ಎರಡೂ ಬದಿಯಲ್ಲಿ ವಾಸಿಸುವವರು) ಬೇರ್ಪಡಿಸುವುದು ಸರಿಯಲ್ಲʼʼ ಎಂದು ನವೆಂಬರ್‌ನಲ್ಲಿ ಆಯ್ಕೆಯಾದ ಮುಖ್ಯಮಂತ್ರಿ ಲಾಲ್ದುಹೋಮಾ ಹೇಳಿದ್ದಾರೆ. ಮ್ಯಾನ್ಮಾರ್‌ನೊಂದಿಗೆ ಮಿಜೋರಾಂ 510 ಕಿ.ಮೀ., ಮಣಿಪುರ 390 ಕಿ.ಮೀ., ಅರುಣಾಚಲ ಪ್ರದೇಶ 520 ಕಿ.ಮೀ. ಮತ್ತು ನಾಗಾಲ್ಯಾಂಡ್ 215 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ.

ಇದನ್ನೂ ಓದಿ: Amith Shah : ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ; ಮ್ಯಾನ್ಮಾರ್​ -ಭಾರತ ಗಡಿ ಬಂದ್​

ಏನಿದು ಎಫ್ಎಂಜಿ?

ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದಂತಹ ರಾಜ್ಯಗಳ ಮೂಲಕ ಹಾದುಹೋಗುವ ಮ್ಯಾನ್ಮಾರ್​ನೊಂದಿಗೆ ಭಾರತವು 1,643 ಕಿ.ಮೀ ಉದ್ದದ ಗಡಿ ಹಂಚಿಕೊಂಡಿದೆ. ಈ ಎಲ್ಲ ರಾಜ್ಯಗಳು ಪ್ರಸ್ತುತ ಎಫ್ಎಂಆರ್ ಅನ್ನು ಹೊಂದಿವೆ. ಇದನ್ನು ಭಾರತದ ಆಕ್ಟ್ ಈಸ್ಟ್ ನೀತಿಯ ಭಾಗವಾಗಿ ಜಾರಿಗೆ ತರಲಾಯಿತು. ವೀಸಾ ಮತ್ತು ಪಾಸ್‌ಪೋರ್ಟ್‌ ಇಲ್ಲದೆ ಪರಸ್ಪರ ತೆರಳಲು ಇದು ಅನುಮತಿ ನೀಡುತ್ತದೆ. ಗಡಿಯ ಎರಡೂ ಬದಿಗಳಲ್ಲಿ ಹರಡಿಕೊಂಡಿರುವ ಬುಡಕಟ್ಟು ಜನಾಂಗದವರಿಗೆ ತಮ್ಮ ಕುಟುಂಬಗಳನ್ನು ಭೇಟಿ ಮಾಡಲು ಅವಕಾಶ ನೀಡಲು ಇದನ್ನು ಪ್ರಾರಂಭಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version