ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಇತ್ತೀಚೆಗೆ ಉಗ್ರರ ದಾಳಿಗಳು ಜಾಸ್ತಿಯಾಗಿವೆ. ಅದರಲ್ಲೂ, ಯಾತ್ರೆಗೆ ತೆರಳುವ ಹಿಂದುಗಳು, ನಾಗರಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡುತ್ತಿದ್ದು, ಕಣಿವೆಯಲ್ಲಿ ಭದ್ರತೆ ಕುರಿತು ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಜಮ್ಮು-ಕಾಶ್ಮೀರ ಭದ್ರತೆ ಕುರಿತು ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. “ಜಮ್ಮುವಿನಲ್ಲಿ ಉಗ್ರವಾದವನ್ನು ಸಂಪೂರ್ಣವಾಗಿ ನಿಗ್ರಹಿಸಬೇಕು” ಎಂಬುದು ಸೇರಿ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ಸಂಸ್ಥೆ (IB) ನಿರ್ದೇಶಕ ತಪನ್ ದೇಕಾ, ಸಿಆರ್‌ಪಿಎಫ್ ಮಹಾ ನಿರ್ದೇಶಕ ದಯಾಳ್ ಸಿಂಗ್ ಸೇರಿ ಹಲವು ಅಧಿಕಾರಿಗಳೊಂದಿಗೆ ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆ ನಡೆಸಿದರು. ಜೂನ್ 26ರಿಂದ ಅಮರನಾಥ್ ಯಾತ್ರೆ ಕೈಗೊಳ್ಳಲಾಗುತ್ತದೆ. ಜೂನ್ 21ರಂದು ಶ್ರೀನಗರದಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಹಾಗಾಗಿ, ಕಾಶ್ಮೀರದ ಭದ್ರತೆಯು ಪ್ರಮುಖವಾಗಿದೆ.
#WATCH | Union Home Minister Amit Shah chairs a meeting at the Ministry of Home Affairs in North Block, Delhi to review the security situation in Jammu and Kashmir and preparedness for the Amarnath Yatra. pic.twitter.com/1rnvACJXvA
— ANI (@ANI) June 16, 2024
“ಜಮ್ಮು-ಕಾಶ್ಮೀರದಲ್ಲಿ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಕಾಶ್ಮೀರದಲ್ಲಿ ನಿಗ್ರಹಿಸಿದಂತೆ ಜಮ್ಮುವಿನಲ್ಲೂ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು. ಗಡಿಗಳನ್ನು ಇನ್ನಷ್ಟು ಭದ್ರಗೊಳಿಸಬೇಕು. ಒಳನುಸುಳುಕೋರರ ಮೇಲೆ ಹದ್ದಿನ ಕಣ್ಣಿಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು” ಎಂದು ಭದ್ರತಾ ಪಡೆಗಳಿಗೆ ಅಮಿತ್ ಶಾ ಸೂಚಿಸಿದರು. ಕೆಲ ದಿನಗಳ ಹಿಂದಷ್ಟೇ ನರೇಂದ್ರ ಮೋದಿ ಅವರು ಕೂಡ ಜಮ್ಮು-ಕಾಶ್ಮೀರ ಭದ್ರತೆ ಕುರಿತಂತೆ ಉನ್ನತಮಟ್ಟದ ಸಭೆ ನಡೆಸಿದ್ದರು. ಎಲ್ಲ ಸೈನಿಕರನ್ನು ಗಡಿ ಸೇರಿ ಆಯಕಟ್ಟಿನ ಪ್ರದೇಶಗಳಿಗೆ ನಿಯೋಜಿಸಬೇಕು ಎಂಬುದಾಗಿ ಸೂಚಿಸಿದ್ದರು.
ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದರು. ಜಮ್ಮು-ಕಾಶ್ಮೀರದಲ್ಲಿರುವ ಶಿವ ಖೋರಿ ದೇವಸ್ಥಾನಕ್ಕೆ ಹಿಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಪಾಕಿಸ್ತಾನದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ದಾಳಿ ನಡೆಸಿದ್ದು, ಉಗ್ರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೆ, ಉಗ್ರನ ಕುರಿತು ಸುಳಿವು ನೀಡಿದರೆ 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Terrorist Attack : ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಯೋಧ ಹುತಾತ್ಮ , ಆರು ಯೋಧರಿಗೆ ಗಾಯ