ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Home minister Amit Shah) ಅವರ ವಿಡಿಯೋವನ್ನು ತಿರುಚಿ (doctored video case) ಪ್ರಸಾರ ಮಾಡುತ್ತಿರುವ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷ (Aam Admi Party- AAP) ಮತ್ತು ಕಾಂಗ್ರೆಸ್ (congress) ಪಕ್ಷಕ್ಕೆ ಸಂಬಂಧಿಸಿದ ಮೂವರನ್ನು ಬಂಧಿಸಲಾಗಿದೆ.
ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡಗಊ ಮತ್ತು ಇತರೆ ಹಿಂದುಳಿದ ವರ್ಗಗಳ (OBC) ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಎಂದು ಅಮಿತ್ ಶಾ ಈ ವಿಡಿಯೋದಲ್ಲಿ ಕರೆ ನೀಡಿದ್ದಾರೆ ಎಂದು ಹೇಳಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿತ್ತು. ಪ್ರಕರಣದಲ್ಲಿ ಅಹಮದಾಬಾದ್ ಸೈಬರ್ ಕ್ರೈಂ ವಿಭಾಗದ ಪೊಲೀಸರು ಇಬ್ಬರನ್ನು ಬಂಧಿಸಿದ್ದರೆ, ಮತ್ತೊಬ್ಬ ವ್ಯಕ್ತಿಯನ್ನು ಅಸ್ಸಾಂನಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ನಕಲಿ ವೀಡಿಯೊವನ್ನು ಕಾಂಗ್ರೆಸ್ ಹರಡುತ್ತಿದೆ ಎಂದು ಅಮಿತ್ ಶಾ, ದೂಷಿಸಿದ್ದಾರೆ. ಇದು ಆ ಪಕ್ಷದ ಹತಾಶೆ ಮತ್ತು ನಿರಾಶೆಯ ಫಲಿತಾಂಶವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವರ ಈ ತಿರುಚಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿಯು ಮೀಸಲಾತಿಯನ್ನು ರದ್ದುಗೊಳಿಸಲು ತಯಾರಿ ನಡೆಸುತ್ತಿದೆ ಎಂದು ಹೇಳಿಕೊಂಡು ಹಲವಾರು ಕಾಂಗ್ರೆಸ್ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಮಂಗಳವಾರ ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, “ಬಿಜೆಪಿ 400 ಸ್ಥಾನಗಳನ್ನು ದಾಟಿದ ನಂತರ ಮೀಸಲಾತಿಯನ್ನು ಕೊನೆಗೊಳಿಸುತ್ತದೆ ಎಂದು ಕಾಂಗ್ರೆಸ್ ತಪ್ಪು ಮಾಹಿತಿಯನ್ನು ಹರಡುತ್ತಿದೆ” ಎಂದು ಹೇಳಿದರು. “ಈ ಆರೋಪ ಸುಳ್ಳು ಮತ್ತು ಆಧಾರರಹಿತವಾಗಿವೆ. ಬಿಜೆಪಿಯು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯನ್ನು ಬೆಂಬಲಿಸುತ್ತದೆ ಮತ್ತು ಯಾವಾಗಲೂ ರಕ್ಷಕನಾಗಿ ತನ್ನ ಪಾತ್ರವನ್ನು ನಿರ್ವಹಿಸುತ್ತದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಾಗಿನಿಂದ ರಾಜಕೀಯವನ್ನು ಇನ್ನಷ್ಟು ತಳಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು. “ನಕಲಿ ವೀಡಿಯೊಗಳನ್ನು ಪ್ರಸಾರ ಮಾಡುವ ಮೂಲಕ ಸಾರ್ವಜನಿಕ ಬೆಂಬಲವನ್ನು ಪಡೆಯುವ ಅವರ ಪ್ರಯತ್ನವು ಖಂಡನೀಯ. ಭಾರತೀಯ ರಾಜಕೀಯದಲ್ಲಿ ಯಾವುದೇ ಪಕ್ಷವು ಎಂದಿಗೂ ಹೀಗೆ ಮಾಡಬಾರದು ಎಂದು ನಾನು ನಂಬುತ್ತೇನೆ” ಎಂದಿದ್ದಾರೆ.
ಏತನ್ಮಧ್ಯೆ, ನಕಲಿ ವೀಡಿಯೋವನ್ನು ಹಂಚಿಕೊಂಡ ಆರೋಪದ ಮೇಲೆ ಮಹಾರಾಷ್ಟ್ರ ಯೂತ್ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮತ್ತು ಇತರ 16 ಜನರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಗೊತ್ತಾಗಿದೆ. ಮುಂಬೈ ಬಿಜೆಪಿ ಕಾರ್ಯಾಧ್ಯಕ್ಷ ಪ್ರತೀಕ್ ಕರ್ಪೆ ಅವರು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸೈಬರ್ ಪೊಲೀಸ್ ಠಾಣೆಯಲ್ಲಿ ಸೋಮವಾರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.