ಅಮರಾವತಿ: ತಮಿಳುನಾಡಿನಲ್ಲಿ ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಅದರಲ್ಲೂ, ತೆಲಂಗಾಣ ಮಾಜಿ ರಾಜ್ಯಪಾಲೆ, ಪಕ್ಷದ ನಾಯಕಿ ತಮಿಳ್‌ಸಾಯಿ ಸೌಂದರರಾಜನ್ (Tamilisai Soundararajan) ಹಾಗೂ ಅಣ್ಣಾಮಲೈ ಬೆಂಬಲಿಗರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಾದ-ವಿವಾದಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ವೇದಿಕೆ ಮೇಲೆಯೇ ತಮಿಳ್‌ಸಾಯಿ ಸೌಂದರರಾಜನ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎನ್.ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಪವನ್ ಕಲ್ಯಾಣ್ ಅವರು ಉಪ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದರು. ವೇದಿಕೆ ಮೇಲೆ ನರೇಂದ್ರ ಮೋದಿ ಅವರ ಜತೆಗೆ ಅಮಿತ್ ಶಾ, ನಿತಿನ್ ಗಡ್ಕರಿ, ಮಾಜಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ತಮಿಳ್‌ಸಾಯಿ ಸೌಂದರರಾಜನ್ ಅವರು ವೇದಿಕೆ ಮೇಲೆ ಬಂದು ಎಲ್ಲ ನಾಯಕರಿಗೂ ನಮಸ್ಕಾರ ಮಾಡಿದರು. ಆಗ ಅಮಿತ್ ಶಾ ಅವರು ತಮಿಳ್‌ಸಾಯಿ ಅವರ ಜತೆ ಸಿಟ್ಟಿನಿಂದ ಮಾತನಾಡಿದ್ದಾರೆ.
Amit Shah was seen confronting former governor of Telangana Tamilisai Soundararajan on stage of Naidu’s oath ceremony.
— Shantanu (@shaandelhite) June 12, 2024
They don’t even respect women of their own party, how can they protect country’s women and daughters? pic.twitter.com/EeSfaCbHFd
ವೇದಿಕೆ ಮೇಲಿದ್ದ ನಾಯಕರಿಗೆ ಕೈ ಮುಗಿದು ನಮಸ್ಕಾರ ಮಾಡಿದ ತಮಿಳ್‌ಸಾಯಿ ಅವರು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅವರನ್ನು ಅಮಿತ್ ಶಾ ಅವರು ಕರೆದರು. ಕರೆದು ಹಾಗೆಲ್ಲ ಮಾಡುವುದು ಸರಿ ಅಲ್ಲ ಎನ್ನುವ ರೀತಿಯಲ್ಲಿ ಸನ್ನೆ ಮಾಡಿದರು. ಇದರಿಂದ ತುಸು ವಿಚಲಿತರಾದಂತಾದ ತಮಿಳ್‌ಸಾಯಿ ಸೌಂದರರಾಜನ್ ಅವರು, ಅಮಿತ್ ಶಾ ಅವರು ಸೂಚಿಸಿದ್ದಕ್ಕೆಲ್ಲ ಸರಿ ಎಂಬಂತೆ ತಲೆ ಅಲ್ಲಾಡಿಸಿದರು. ಆದರೆ, ಅಮಿತ್ ಶಾ ಅವರು ಯಾವ ವಿಷಯಕ್ಕೆ ಕೋಪ ಮಾಡಿಕೊಂಡಿದ್ದರು ಎಂಬುದು ನಿಖರವಾಗಿ ಗೊತ್ತಾಗಿಲ್ಲ.
ಏನಿದು ಭಿನ್ನಮತ?
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆ. ಅಣ್ಣಾಮಲೈ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿಯೇ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸಲಾಗಿದೆ. ಒಳ್ಳೆಯ ಪ್ರಯತ್ನದ ಫಲವಾಗಿಯೂ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲೂ ಆಗದಿರುವುದು ಪಕ್ಷದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. “ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ 35 ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು. ಇದಕ್ಕೂ ಮೊದಲು ತಮಿಳುನಾಡಿನಲ್ಲಿ ಎಲ್.ಮುರುಗನ್ ಹಾಗೂ ತಮಿಳ್‌ಸಾಯಿ ಸೌಂದರರಾಜನ್ ಅವರು ಪಕ್ಷದ ನಾಯಕತ್ವ ವಹಿಸಿಕೊಂಡಿದ್ದಾಗ ಸಮಸ್ಯೆ ಇರಲಿಲ್ಲ. ಅಣ್ಣಾಮಲೈ ಅವರು ರಾಜ್ಯಾಧ್ಯಕ್ಷರಾದ ಬಳಿಕವೇ ಸಮಸ್ಯೆಗಳು ಆರಂಭವಾಗಿವೆ” ಎಂದು ಎಐಎಡಿಎಂಕೆ ನಾಯಕ ಎಸ್.ಪಿ. ವೇಲುಮಣಿ ಹೇಳಿದ್ದಾರೆ.
ಅಣ್ಣಾಮಲೈ ಅವರು ಎಸ್.ಪಿ.ವೇಲುಮಣ್ಣಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, “ಎಐಎಡಿಎಂಕೆಯು ತಮಿಳುನಾಡಿನಲ್ಲಿ ಸ್ಪರ್ಧಿಸಿ ಒಂದೇ ಒಂದು ಕ್ಷೇತ್ರ ಗೆದ್ದಿಲ್ಲ. ಹಾಗಾಗಿ, ಅವರ ಹೇಳಿಕೆಯನ್ನು ಹೇಗೆ ಒಪ್ಪಿಕೊಳ್ಳಬೇಕು” ಎಂದಿದ್ದಾರೆ. ಆದರೆ, “ಎಸ್.ಪಿ. ವೇಲುಮಣಿ ನೀಡಿದ ಹೇಳಿಕೆಯು ವಾಸ್ತವಕ್ಕೆ ಹತ್ತಿರವಾಗಿದೆ” ಎಂದು ತಮಿಳ್‌ಸಾಯಿ ಪ್ರತಿಕ್ರಿಯಿಸಿದ್ದಾರೆ. ಇದು ಈಗ ತಮಿಳುನಾಡು ಬಿಜೆಪಿಯಲ್ಲಿ ಭಿನ್ನಮತದ ಅಲೆ ಸೃಷ್ಟಿಸಿದೆ. ಹಾಗಾಗಿಯೇ, ಅಮಿತ್ ಶಾ ಅವರು ತಮಿಳ್‌ಸಾಯಿ ಅವರಿಗೆ ವಾರ್ನಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Election Results 2024: 7 ಲಕ್ಷ ಮತಗಳಿಂದ ಗೆದ್ದು ಬೀಗಿದ ಅಮಿತ್ ಶಾ