Site icon Vistara News

Vistara Explainer: 3 ವಿಧೇಯಕ ಮಂಡಿಸಿದ ಅಮಿತ್ ಶಾ, ಬಿಲ್ ಕಾನೂನು ಆಗಿ ಬದಲಾಗುವುದು ಹೇಗೆ? ಮುಂದೇನಾಗುತ್ತದೆ?

Amit Shah On Manipur Violence

ಭಾರತದ ಅಪರಾಧ ನ್ಯಾಯ ವ್ಯವಸ್ಥೆಗೆ (India’s criminal justice system) ಹೊಸ ರೂಪ ನೀಡುವ ಮೂರು ವಿಧೇಯಕಗಳನ್ನು (Three Bill) ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರು ಮಳೆಗಾಲದ ಅಧಿವೇಶನದ (Monsoon Parliament Session) ಕೊನೆಯ ದಿನವಾದ ಶುಕ್ರವಾರ ಲೋಕಸಭೆಯಲ್ಲಿ (Lok Sabha) ಮಂಡಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ವಿಧೇಯಕ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ವಿಧೇಯಕ 2023 ಮತ್ತು ಭಾರತೀಯ ಸಾಕ್ಷ್ಯ ವಿಧೇಯಕ 2023. ಈ ಮೂರು ವಿಧೇಯಕಗಳ ಮೂಲಕ ಬ್ರಿಟಿಷ್ ಕಾಲದ ಕಾನೂನುಗಳನ್ನು ಬದಲಿಸಲಾಗುತ್ತದೆ(vistara Explainer).

ಈ ಪ್ರಸ್ತಾವಿತ ಕಾನೂನುಗಳು ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ನಿಯಂತ್ರಿಸುವ ಭಾರತದ ವಸಾಹತುಶಾಹಿ ಯುಗದ ಕಾನೂನುಗಳನ್ನು ಬದಲಿಸಲಿವೆ. ಭಾರತೀಯ ದಂಡ ಸಂಹಿತೆ, 1860; ಕ್ರಿಮಿನಲ್ ಪ್ರೊಸೀಜರ್ ಕೋಡ್, 1898; ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್, 1872ಗಳನ್ನು ಹೊಸ ವಿಧೇಯಕಗಳು ರಿಪ್ಲೇಸ್ ಮಾಡಲಿವೆ. 1860ರಿಂದ 2023ರವರೆಗೆ, ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಬ್ರಿಟಿಷರು ಮಾಡಿದ ಕಾನೂನುಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದೆ. ಈ ಮೂರು ಕಾನೂನುಗಳನ್ನು ಬದಲಾಯಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಹೇಳಿದರು. ಈ ಮೂರೂ ವಿಧೇಯಕಗಳು ಹೇಗೆ ಕಾನೂನು ಆಗಿ ಬದಲಾಗುತ್ತವೆ, ಆ ಪ್ರಕ್ರಿಯೆ ಹೇಗೆ ನಡೆಯುತ್ತದೆ ತಿಳಿದುಕೊಳ್ಳೋಣ ಬನ್ನಿ.

ಈ ವಿಧೇಯಕಗಳ ಮುಂದಿನ ಹಂತವೇನು?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿರುವ ಈ ಮೂರು ವಿಧೇಯಕಗಳು ಕಾನೂನಾಗಿ ಹೇಗೆ ಬದಲಾಗುತ್ತವೆ ಎಂಬ ಕುತೂಹಲ ಸಹಜ. ಆ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ. ಲೋಕಸಭೆಯಲ್ಲಿ ಮಂಡನೆಯಾದ ಯಾವುದೇ ವಿಧೇಯಕವನ್ನು ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಲಾಗುತ್ತದೆ. ಈ ಸಮಿತಿಯ ಆಯಾ ವಿಧೇಯಕವನ್ನು ಕೂಲಂಕುಷವಾಗಿ ಪರಿಶೀಲಿಸುತ್ತದೆ ಮತ್ತು ಅಗತ್ಯ ಬಿದ್ದರೆ ಗೃಹ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ, ವಿವರಣೆಯನ್ನು ಪಡೆದುಕೊಳ್ಳುತ್ತದೆ.

ವಿಧೇಯಕಗಳಿಗೆ ಸಂಬಂಧಿಸಿದವರಿಂದ ತಜ್ಞರು ಮತ್ತು ಜನರಿಂದ ಸಲಹೆಗಳನ್ನು ಸೂಚನೆಗಳನ್ನು ಪಡೆಯುತ್ತದೆ. ಇದರಲ್ಲಿ ವಕೀಲರು, ಕಾನೂನು ವಿದ್ಯಾರ್ಥಿಗಳು, ತೀರ್ಪುಗಾರರು, ಹಿರಿಯ ಪತ್ರಕರ್ತರು ಮುಂತಾದವರು ಇರಬಹುದು. ಈ ವಿಧೇಯಕಗಳ ಮೇಲೆ ಸಮಿತಿಯಲ್ಲೇ ಸಾಕಷ್ಟು ಚರ್ಚೆಗಳಾದ ಬಳಿಕ ಕೆಲವು ಶಿಫಾರಸುಗಳನ್ನು ನೀಡಬಹುದು.

ಗಮನಿಸಬೇಕಾದ ಅಂಶ ಎಂದರೆ, ವಿಧೇಯಕಗಳು ಸಮಿತಿಯ ಅಧೀನದಲ್ಲಿದ್ದಾಗ ಅವುಗಳ ಕುರಿತು ಲೋಕಸಭೆಯಲ್ಲಿ ಚರ್ಚಿಸಲು ಅವಕಾಶವಿರುವುದಿಲ್ಲ. ಹಾಗಂತ, ವಿಧೇಯಕಗಳನ್ನು ಸಮಿತಿಯ ಎಷ್ಟು ದಿನಗಳ ಕಾಲ ತನ್ನಲ್ಲಿ ಇಟ್ಟುಕೊಳ್ಳಬಹುದು. ಇದು ಆಯಾ ವಿಧೇಯಕದ ತೀವ್ರತೆ ಮತ್ತು ಮಹತ್ವವನ್ನು ಆಧರಿಸುತ್ತದೆ.

ಸಮಿತಿ ಶಿಫಾರಸುಗಳನ್ನು ಸರ್ಕಾರ ಮಾನ್ಯ ಮಾಡುತ್ತದೆಯೇ?

ವಿಧೇಯಕಗಳ ಕುರಿತು ಸಂಸದೀಯ ಸ್ಥಾಯಿ ಸಮಿತಿಯು ಎಲ್ಲ ತನ್ನ ಕಾರ್ಯಗಳನ್ನು ಪೂರೈಸಿ, ಶಿಫಾರಸುಗಳನ್ನು ಕಳುಹಿಸುತ್ತದೆ. ಆ ಬಳಿಕವಷ್ಟೇ ಈ ವಿಧೇಯಕಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ಆರಂಭಿಸಲಾಗುತ್ತದೆ. ಇದಕ್ಕೂ ಮೊದಲು ಸಮಿತಿ ನೀಡಿದ ಯಾವ ಶಿಫಾರಸುಗಳನ್ನು ವಿಧೇಯಕದಲ್ಲಿ ಸೇರಿಸಬೇಕು ಎಂಬುದನ್ನು ಚರ್ಚೆ ಮಾಡಿ ಸರ್ಕಾರ ನಿರ್ಧರಿಸುತ್ತದೆ. ಒಂದು ವೇಳೆ, ಯಾವುದೇ ಶಿಫಾರಸು ಇಲ್ಲದೇ ಹೋದರೆ, ಸರ್ಕಾರವು ಮೂಲ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿ ಸರಳವಾಗಿ ಅಂಗೀಕಾರ ಪಡೆದುಕೊಳ್ಳುತ್ತದೆ.

ಒಂದೊಮ್ಮೆ, ವಿಧೇಯಕದ ಮಹತ್ವದ ಭಾಗದ ಕುರಿತು ಆಕ್ಷೇಪವಿದ್ದು, ಸಾಕಷ್ಟು ಶಿಫಾರಸುಗಳನ್ನು ಮಾಡಿದ್ದರೆ ಸರ್ಕಾರವು ಅಂಥ ವಿಧೇಯಕವನ್ನು ಹಿಂಪಡೆದು ಹೊಸ ವಿಧೇಯಕವನ್ನು ಮಂಡಿಸಬಹುದು. ಆದರೆ, ಸಮಿತಿಯ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಂಡು ಹೊಸ ವಿಧೇಯಕವನ್ನು ಮಂಡಿಸಿರುವುದರಿಂದ ಮತ್ತೆ ಅಂಥ ವಿಧೇಯಕವನ್ನು ಸಮಿತಿ ಅಧ್ಯಯನಕ್ಕೆ ಕಳುಹಿಸುವ ಅಗತ್ಯವಿರುವುದಿಲ್ಲ.

ಈ ವಿಸ್ತಾರ ಎಕ್ಸ್‌ಪ್ಲೇನರ್ ಓದಿ: ವಿಸ್ತಾರ Explainer: ಇನ್ನು ಇಂಟರ್‌ನೆಟ್‌ ಇಲ್ಲದೇ ಮೊಬೈಲ್‌ನಲ್ಲಿ ಟಿವಿ ನೋಡಿ!

ವಿಧೇಯಕದ ಮಹತ್ವದ ಹಂತ

ಇಷ್ಟೆಲ್ಲ ಪ್ರಕ್ರಿಯೆಗಳಾದ ಲೋಕಸಭೆಯಲ್ಲಿ ಈ ವಿಧೇಯಕದ ಕುರಿತು ಮಹತ್ವದ ಚರ್ಚೆ ನಡೆಯುತ್ತದೆ. ಇದು ವಿಧೇಯಕದ ಮಹತ್ವದ ಹಂತವಾಗಿದೆ. ಈ ವಿಧೇಯಕದ ಅಂಗೀಕಾರಕ್ಕೆ ಸರಳ ಬಹುಮತ ಸರ್ಕಾರವು ಕ್ರೋಡೀಕರಿಸಬೇಕಾಗುತ್ತದೆ. ಬಳಿಕ ಲೋಕಸಭೆ ಅಂಗೀಕರಿಸಿದ ಈ ವಿಧೇಯಕಗಳನ್ನು ರಾಜ್ಯ ಸಭೆಗೆ ಕಳುಹಿಸಲಾಗುತ್ತದೆ. ಇಲ್ಲೂ ಸದಸ್ಯರು ಮಸೂದೆ ಕುರಿತು ಸಾಕಷ್ಟು ಚರ್ಚೆ ಮಾಡುತ್ತಾರೆ ಮತ್ತು ಅಂತಿಮವಾಗಿ ಮತಕ್ಕೆ ಹಾಕುತ್ತಾರೆ.

ರಾಷ್ಟ್ರಪತಿಯಿಂದ ಅಂಕಿತ

ಮಳೆಗಾಲದ ಅಧಿವೇಶನದ ಕೊನೆಯ ದಿನ ಈ ಮೂರು ವಿಧೇಯಕಗಳನ್ನು ಮಂಡಿಸಿರುವುದರಿಂದ ಅವುಗಳ ಚರ್ಚೆಗಾಗಿ ನಾವು ಮುಂದಿನ ವರ್ಷದವರೆಗೂ ಕಾಯಬೇಕಾಗುತ್ತದೆ. ಅಥವಾ ಮೇ 2024ರೊಳಗೇ ಹಾಲಿ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಒಂದೊಮ್ಮೆ ಸಾಧ್ಯವಾಗದಿದ್ದರೆ, ಸಾರ್ವತ್ರಿಕ ಚುನಾವಣೆ ಬಳಿಕ ಅಧಿಕಾರಕ್ಕೆ ಬರುವ ಹೊಸ ಸರ್ಕಾರವು ಈ ವಿಧೇಯಕಗಳನ್ನು ಮರು ಮಂಡಿಸಬೇಕಾಗುತ್ತದೆ. ಅಂತಿಮವಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಿಂದ ಪಾಸಾದ ವಿಧೇಯಕವನ್ನು ರಾಷ್ಟ್ರಪತಿ ಅವರ ಅಂಕಿತಕ್ಕಾಗಿ ಕಳುಹಿಸಿಕೊಡಲಾಗುತ್ತದೆ. ಈ ಹೀಗೆ ತಮ್ಮ ಬಳಿ ಬರುವ ವಿಧೇಯಕವನ್ನು ರಾಷ್ಟ್ರಪತಿಗಳ ಒಂದು ಬಾರಿ ಮಾತ್ರ ವಿಟೋ ಪವರ್ ಬಳಸಲು ಸಂವಿಧಾನ ಅಧಿಕಾರ ನೀಡಿರುತ್ತದೆ.

ಇನ್ನಷ್ಟು ವಿಸ್ತಾರ ಎಕ್ಸ್‌ಪ್ಲೇನರ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version