ನವದೆಹಲಿ: ಕಾಂಗ್ರೆಸ್(Congress) ಹಿಂದುಳಿದ ಮತ್ತು ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ (Reservation)ಯನ್ನು ಕಿತ್ತು ಅಕ್ರಮವಾಗಿ ಮುಸ್ಲಿಮರಿಗೆ ನೀಡಿದೆ. ಬಿಜೆಪಿ(BJP) ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಂದ ಕೂಡಲೇ ಧರ್ಮದ ಆಧಾರದಲ್ಲಿ ನೀಡಲಾಗಿರುವ ಮೀಸಲಾತಿಯನ್ನು ತೆಗೆದು ಹಾಕುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ನಮ್ಮ ಸಂವಿಧಾನ ಎಂದಗೂ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಧರ್ಮದ ಆಧಾರದಲ್ಲಿ ಮೀಸಲಾತಿ ಕಲ್ಪಿಸಲು ನಮ್ಮ ಸಂವಿಧಾನದಲ್ಲಿ ಯಾವುದೇ ಅವಕಾಶ ಇಲ್ಲ. ಕಾಂಗ್ರೆಸ್ ಅಕ್ರಮವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡುತ್ತಿದೆ. ಈಗ ನಾವು ಸುಳ್ಳು ಹೇಳುತ್ತಿದ್ದೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಅವರು ದೇಶದ ಜನತೆಗೆ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಧರ್ಮದ ಆಧಾರದಲ್ಲಿ ನಾವು ಎಂದಿಗೂ ಮೀಸಲಾತಿ ನೀಡುವುದಿಲ್ಲ. ಜನ ಈ ಬಗ್ಗೆ ಆತಂಕ ವ್ಯಕ್ತಪಡಿಸುವ ಅಗತ್ಯವಿಲ್ಲ. ಜಾತಿ, ಕುಟುಂಬ, ಭ್ರಷ್ಟಾಚಾರ ಮತ್ತು ಓಲೈಕೆಗಳಿಂದ ಪ್ರಜಾಪ್ರಭುತ್ವ ಮುಕ್ತವಾಗಿರಬೇಕು. ಬಿಜೆಪಿ ಜಾತಿ ,ಧರ್ಮ ಓಲೈಕೆಯನ್ನು ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ಎನ್‌ಡಿಎ ಪ್ರಣಾಳಿಕೆಯಲ್ಲಿ ಮೈತ್ರಿ ಪಕ್ಷ ತೆಲುಗು ದೇಶಂ ಪಾರ್ಟಿಯ ಚಂದ್ರಬಾಬು ನಾಯ್ಡು ಮುಸ್ಲಿಂ ಓಲೈಕೆಗೆಂದು ಸೇರ್ಪಡೆಗೊಳಿಸಿರುವ ಕೆಲವೊಂದು ಭರವಸೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಕೇವಲ ಒಂದು ಧರ್ಮದ ಓಲೈಕೆಯನ್ನು ಸಹಿಸಲ್ಲ. ಅದು ಅವರ ಪ್ರಣಾಳಿಕೆ . ನಮ್ಮ ಪ್ರಣಾಳಿಯಲ್ಲಿ ಈ ವಿಚಾರಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದು ನಮ್ಮ ಪಕ್ಷದಿಂದ ರವಾಣೆಯಾಗಿರುವ ಸ್ಪಷ್ಟ ಸೂಚನೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್‌ನ ಸಂಪತ್ತಿನ ಮರು ಹಂಚಿಕೆ ಭರವಸೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಇತರ ಜಾತಿಗಳ ಜನರಿಂದ ಸಂಪತ್ತನ್ನು ಕಸಿದು ಅದನ್ನು ಮುಸ್ಲಿಮರಿಗೆ ಹಂಚಚಲು ಬಯಸುತ್ತಿದೆ. ಈ ಮಾಜಿ ಪ್ರಧಾನಿ ಮನಮೋಹನ್ ಕೂಡ ಈ ದೇಶದ ಸಂಪತ್ತಿನ ಮೇಲೆ ಅಲ್ಪ ಸಂಖ್ಯಾತರಿಗೆ ಬಹುದೊಡ್ಡ ಅಧಿಕಾರ ಇದೆ ಎಂದು ಹೇಳಿದ್ದರು. ಇದು ಕಾಂಗ್ರೆಸ್‌ನ ಓಲೈಕೆಯ ರಾಜಕಾರಣ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಲ್ಲಿ ಮೂರು ರೀತಿಯ ಬಿಕ್ಕಟ್ಟು
ಕಾಂಗ್ರೆಸ್ ಪ್ರಸ್ತುತ ಮೂರು ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಭ್ಯರ್ಥಿಗಳ ಬಿಕ್ಕಟ್ಟು, ನಾಯಕರ ಬಿಕ್ಕಟ್ಟು ಮತ್ತು ನೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮೂರು ಬಿಕ್ಕಟ್ಟುಗಳ ನಡುವೆ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಅವರು ಈ ಬಾರಿ ತಮ್ಮ ಎನ್‌ಡಿಎ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ: Drama Artist: ಶಕುನಿಯಾಗಿ ಗರ್ಜಿಸುತ್ತಿರುವಾಗಲೇ ಹೃದಯಾಘಾತ; ಮೊಬೈಲ್‌ನಲ್ಲಿ ಸೆರೆಯಾಯ್ತು ಕಲಾವಿದನ ಕೊನೆಯ ಕ್ಷಣ
ಕೆಲವು ದಿನಗಳ ಹಿಂದೆ ಮುಸ್ಲಿಮರಿಗೆ ನೀಡಲಾದ ಶೇ. 4ರಷ್ಟು ‘ಅಸಾಂವಿಧಾನಿಕ’ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಅಮಿತ್ ಶಾ ತೆಲಂಗಾಣದಲ್ಲಿ ಮಾತನಾಡುತ್ತಿರುವ ಹಳೆಯ ವಿಡಿಯೊವನ್ನು ಬಳಸಿಕೊಂಡು ಅವರು ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ತೆಗೆಯಬೇಕು ಎಂದು ಹೇಳಿದ್ದಾರೆ ಎನ್ನುವಂತೆ ಬದಲಾಯಿಸಲಾಗಿತ್ತು. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿತ್ತು. ಇದಾದ ಬಳಿಕ ಗೃಹ ಸಚಿವಾಲಯ ಮತ್ತು ಬಿಜೆಪಿ ದೂರು ನೀಡಿತ್ತು.