ಹೊಸ ದಿಲ್ಲಿ: ಪ್ರಜೆಗಳ ಜನನ ಮತ್ತು ಮರಣ ನೋಂದಣಿಯನ್ನು ಮತದಾರರ ಪಟ್ಟಿಯೊಂದಿಗೆ ಜೋಡಿಸುವ ವಿಧೇಯಕವನ್ನು ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ನಾಗರಿಕರ ನೋಂದಣಿ, ಮತದಾರರ ಪಟ್ಟಿ ಮತ್ತು ಫಲಾನುಭವಿ ಯೋಜನೆಗಳನ್ನು ಪಡೆಯುವ ಜನರ ಪಟ್ಟಿಯನ್ನು ನವೀಕರಿಸಲು ಜನನ ಮತ್ತು ಮರಣಗಳ ನೋಂದಣಿ ಮುಖ್ಯವಾಗಿದೆ ಎಂದು ಸಚಿವರು ಹೇಳಿದರು. ದಿಲ್ಲಿಯಲ್ಲಿ ಹೊಸ ಜನಗಣತಿ (census) ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
2021ರಲ್ಲಿ ನಡೆಯಬೇಕಿದ್ದ ದಶವಾರ್ಷಿಕ ಜನಗಣತಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಮೊದಲು COVID-19 ಸಾಂಕ್ರಾಮಿಕ ರೋಗದ ಕಾರಣದಿಂದ ಅದನ್ನು ಮುಂದೂಡಲಾಗಿತ್ತು. ನಂತರದ ಮುಂದೂಡುವಿಕೆಗೆ ಸರ್ಕಾರ ಯಾವುದೇ ಕಾರಣ ನೀಡಿಲ್ಲ. ಶಾ ಅವರು ಕೂಡ, ಮುಂದಿನ ಜನಗಣತಿಯನ್ನು ಯಾವಾಗ ನಡೆಸಲಾಗುತ್ತದೆ ಎಂದು ಉಲ್ಲೇಖಿಸಲಿಲ್ಲ.
ಎರಡು ಜನಗಣತಿಗಳ ನಡುವಿನ ಮಧ್ಯಂತರ ಅವಧಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಲು ಜನನ ಮತ್ತು ಮರಣಗಳ ನೋಂದಣಿ ಸಹಾಯವಾಗಲಿದೆ. ವ್ಯಕ್ತಿಗೆ 18 ವರ್ಷ ತುಂಬಿದ ತಕ್ಷಣ ಚುನಾವಣಾ ಆಯೋಗವು ಆತನಿಗೆ ಮತದಾರರ ಕಾರ್ಡ್ ಮಾಡಿಸುವಂತೆ ಸೂಚನೆ ಕಳುಹಿಸಲಿದೆ. ಯಾರಾದರೂ ತೀರಿಕೊಂಡರೆ, ಜನಗಣತಿ ರಿಜಿಸ್ಟ್ರಾರ್ ಅವರು ವ್ಯಕ್ತಿಯ ಸಾವಿನ ಬಗ್ಗೆ ತಾವು ಮಾಹಿತಿಯನ್ನು ಪಡೆದಿದ್ದೇವೆ ಎಂದು ಎಂದು ಕುಟುಂಬಕ್ಕೆ ನೋಟಿಸ್ ಕಳುಹಿಸುತ್ತಾರೆ. ಕುಟುಂಬವು ಅದನ್ನು ಆಕ್ಷೇಪಿಸಲು 15 ದಿನಗಳ ಕಾಲಾವಕಾಶವಿರುತ್ತದೆ. ನಂತರ ಚುನಾವಣಾ ಆಯೋಗ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತದೆ ಎಂದು ಶಾ ಹೇಳಿದರು.
ಜನನ ಮತ್ತು ಮರಣ ನೋಂದಣಿ ಕಾಯಿದೆ- 1969ರ ತಿದ್ದುಪಡಿಗೆ ಗೃಹ ವ್ಯವಹಾರಗಳ ಸಚಿವಾಲಯ (MHA) ಈ ಹಿಂದೆ ಪ್ರಸ್ತಾಪಿಸಿತ್ತು. ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (RGI)ದಲ್ಲಿ ಲಭ್ಯವಿರುವ ಜನನ- ಮರಣ ಮಾಹಿತಿಯನ್ನು ಚುನಾವಣಾ ನೋಂದಣಿ, ಆಧಾರ್, ಪಡಿತರ ಚೀಟಿ, ಪಾಸ್‌ಪೋರ್ಟ್ ಮತ್ತು ಚಾಲನಾ ಪರವಾನಗಿ ಮಾಹಿತಿಗಳ ಜತೆ ಜೋಡಿಸಿ ರಾಷ್ಟ್ರೀಯ ಡೇಟಾಬೇಸ್ ಸೃಷ್ಟಿಸಿ, ಜನಗಣತಿ ಕಡತವನ್ನು ನಿರ್ವಹಿಸಲಾಗುವುದು ಎಂದು ಹೇಳಲಾಗಿತ್ತು.
ಇದನ್ನೂ ಓದಿ: Caste census: ಜಾತಿ ಜನಗಣತಿ ಕೂಡಲೇ ನಿಲ್ಲಿಸಿ; ಬಿಹಾರ ಸರ್ಕಾರಕ್ಕೆ ಹೈಕೋರ್ಟ್ನಿಂದ ಆದೇಶ