Site icon Vistara News

Amit Shah: ಮೋದಿ ಹೆಸರು ಕೊಡುವಂತೆ ನನ್ನನ್ನು ಸಿಬಿಐ ಪೀಡಿಸಿತ್ತು: ತನಿಖಾ ದಳಗಳ ದುರ್ಬಳಕೆಗೆ ನಾನೇ ಬಲಿಪಶು ಎಂದ ಗೃಹ ಸಚಿವ

Amit shah

ನವ ದೆಹಲಿ: ಕೇಂದ್ರ ಸರ್ಕಾರ ಉನ್ನತ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ದೂರುಗಳಿಗೆ ಪ್ರಬಲ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ತನಿಖಾ ಸಂಸ್ಥೆಗಳ ದುರ್ಬಳಕೆಗೆ ತಾನೇ ಬಲಿಪಶುವಾಗಿದ್ದೆ ಎಂದು ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಇದನ್ನು ಪ್ರಸ್ತಾಪಿಸಿದ್ದಾರೆ.

ನೀವು ಇತರರ ಕಡೆಗೆ ಒಂದು ಬೆರಳು ತೋರುವ ಮುನ್ನ, ಉಳಿದ ನಾಲ್ಕು ಬೆರಳುಗಳು ನಿಮ್ಮನ್ನೇ ತೋರುತ್ತಿವೆ ಎಂಬುದನ್ನು ಮರೆಯಬಾರದು. ಕೇಂದ್ರದ ಉನ್ನತ ತನಿಖಾ ಸಂಸ್ಥೆಗಳು ಹೇಗೆ ದುರ್ಬಳಕೆಯಾಗಿದ್ದವು ಎನ್ನುವುದಕ್ಕೆ ನಾನೇ ಉದಾಹರಣೆ, ನಾನೇ ಬಲಿಪಶು. ನಾನು ಗುಜರಾತ್‌ನ ಗೃಹ ಸಚಿವನಾಗಿದ್ದಾಗ ರಾಜ್ಯದಲ್ಲಿ ಒಂದು ಎನ್‌ಕೌಂಟರ್‌ ನಡೆಯಿತು. ನನ್ನ ವಿರುದ್ಧ ಪ್ರಕರಣ ದಾಖಲಾಯಿತು ಹಾಗೂ ಸಿಬಿಐ ನನ್ನನ್ನು ಬಂಧಿಸಿತು. ಇಡೀ ತನಿಖೆಯುದ್ದಕ್ಕೂ ಸಿಬಿಐಯವರು ನನ್ನ ಮೇಲೆ ಒತ್ತಡ ಹಾಕಿದ್ದು ಒಂದೇ ವಿಷಯಕ್ಕಾಗಿ- ʼಕ್ಯೋಂ ಪರೇಶಾನ್‌ ಹೋ ರಹೇ ಹೋ, ಮೋದಿ ಕಾ ನಾಮ್‌ ದೇ ದೋʼ (ಯಾಕೆ ಕಷ್ಟಪಡುತ್ತಿದ್ದೀರಿ, ನರೇಂದ್ರ ಮೋದಿಯವರ (narendra modi) ಹೆಸರು ಬಿಟ್ಟುಕೊಡಿ). ʼಮೋದಿ ಹೆಸರು ಹೇಳಿದರೆ ನಿಮ್ಮನ್ನು ಬಿಟ್ಟುಬಿಡುತ್ತೇವೆʼ ಎಂದು ಒತ್ತಡ ಹಾಕಿದ್ದರು ಎಂದು ಅಮಿತ್‌ ಶಾ ಹೇಳಿದ್ದಾರೆ.

ಆಗ ನಾವು ಪ್ರತಿಭಟಿಸಿರಲಿಲ್ಲ; ಸಂಸತ್ತಿನ ಕಲಾಪಗಳಿಗೆ ಅಡ್ಡ ಮಾಡಿರಲಿಲ್ಲ. ಮೋದಿಯವರ ವಿರುದ್ಧ ತನಿಖಾ ಸಂಸ್ಥೆ ರಚಿಸಲಾಯಿತು. ಅದನ್ನು ಸುಪ್ರೀಂ ಕೋರ್ಟೇ ರದ್ದು ಮಾಡಿತು. 90 ದಿನಗಳ ವಿಚಾರಣೆಯ ಹಿಂಸೆಯ ಬಳಿಕ ನನಗೆ ಜಾಮೀನು ಸಿಕ್ಕಿತು. ಹೈಕೋರ್ಟ್‌ ನನ್ನ ವಿರುದ್ಧ ಸಾಕ್ಷಿಗಳಿಲ್ಲ ಎಂದು ಬಿಡುಗಡೆ ಮಾಡಿತು. ನನ್ನ ಪ್ರಕರಣ ಮುಂಬಯಿಯಲ್ಲಿ ದಾಖಲಾಗಿತ್ತು. ರಾಜಕೀಯ ಒತ್ತಡದಿಂದ ನನ್ನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೋರ್ಟ್‌ ಗುರುತಿಸಿತು ಹಾಗೂ ನನ್ನ ಮೇಲಿನ ದೂರುಗಳನ್ನೆಲ್ಲ ಕೈಬಿಡಲಾಯಿತು. ಆಗ ಇವರೇ- ಚಿದಂಬರಂ, ಸೋನಿಯಾ ಗಾಂಧಿ, ಮನಮೋಹನ್‌ ಸಿಂಗ್‌, ರಾಹುಲ್‌ ಗಾಂಧಿ ಮುಂತಾದವರೇ ಅಧಿಕಾರದಲ್ಲಿದ್ದರು ಎಂದು ಶಾ ವಿವರಿಸಿದರು.

ಇಡೀ ವಿಚಾರಣೆಯಲ್ಲಿ ನನ್ನನ್ನು ಮೋದಿ ಹೆಸರು ಹೇಳುವಂತೆ ಪೀಡಿಸಲಾಗಿತ್ತು. ಆದರೆ ನಾನೇನೆ ಅವರ ಹೆಸರು ಹೇಳಲಿ? ಅಂದು ನನ್ನನ್ನು ಪೀಡಿಸಿದವರೇ ಇಂದು ತಮ್ಮ ವಿಧಿಯ ಬಗ್ಗೆ ಹಳಿದುಕೊಳ್ಳುತ್ತಿದ್ದಾರೆ. ತಮ್ಮ ವರ್ತನೆಯ ಬಗ್ಗೆ ಅವರೇ ಅವಲೋಕನ ಮಾಡಿಕೊಳ್ಳಲಿ. ಅವರು ಅಮಾಯಕರಾಗಿದ್ದರೆ ಕಾನೂನಿನ ಮೇಲೆ ನಂಬಿಕೆ ಇರಲಿ ಎಂದು ಅಮಿತ್‌ ಶಾ ನುಡಿದಿದ್ದಾರೆ.

ಇದನ್ನೂ ಓದಿ: Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

Exit mobile version