ಮುಂಬೈ: ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ತಮ್ಮ ಪತಿ ಅಮಿತಾಭ್ ಬಚ್ಚನ್ ಅವರೊಂದಿಗೆ 1,578 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ (Amitabh, Jaya Bachchan). ಈ ತಾರಾ ಜೋಡಿ ಬಳಿ 17 ಐಷಾರಾಮಿ ಕಾರುಗಳು, 130 ಕೋಟಿ ರೂ.ಗೂ ಅಧಿಕ ಬ್ಯಾಂಕ್ ಠೇವಣಿ ಮತ್ತು ಚಿನ್ನಾಭರಣ ಇದೆ. ಜಯಾ ಬಚ್ಚನ್ 5ನೇ ಬಾರಿಗೆ ಉತ್ತರ ಪ್ರದೇಶದಿಂದ ಸಮಾಜವಾದಿ ಪಾರ್ಟಿಯ ಅಭ್ಯರ್ಥಿಯಾಗಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ.
ಆಸ್ತಿ ವಿವರ
ನಾಮ ನಿರ್ದೇಶನದ ವೇಳೆ ನೀಡಿರುವ ಆಸ್ತಿಯ ವಿವರಗಳ ಪ್ರಕಾರ ಜಯಾ ಬಚ್ಚನ್ 2022-23ರಲ್ಲಿ 1.63 ಕೋಟಿ ರೂ. ಸಂಪಾದಿಸಿದ್ದಾರೆ. ಈ ವೇಳೆ ಅಮಿತಾಭ್ ಅವರ ಸಂಪಾದನೆ 273.74 ಕೋಟಿ ರೂ. ಎಂದು ತಿಳಿಸಲಾಗಿದೆ. ಜಯಾ ಬಚ್ಚನ್ ಅವರ ಹೆಸರಿನಲ್ಲಿ 10.11 ಕೋಟಿ ರೂ. ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾಗಿದೆ. ಅಮಿತಾಭ್ ಅವರ ಬ್ಯಾಂಕ್ ಬ್ಯಾಲನ್ಸ್ 120.45 ಕೋಟಿ ರೂ. ಜಯಾ ಬಚ್ಚನ್ 40.97 ಕೋಟಿ ರೂ. ಮೌಲ್ಯದ ಆಭರಣ ಮತ್ತು 9.82 ಲಕ್ಷ ರೂ. ಮೌಲ್ಯದ ಕಾರು ಹೊಂದಿದ್ದಾರೆ. ಇತ್ತ ಬಿಗ್ ಬಿ ಬಳಿ 54.77 ಕೋಟಿ ರೂ. ಮೌಲ್ಯದ ಆಭರಣ ಮತ್ತು ಎರಡು ಮರ್ಸಿಡೀಸ್ ಮತ್ತು ರೇಂಜ್ ರೋವರ್ ಸೇರಿದಂತೆ 16 ಕಾರುಗಳಿವೆ.
ಕಳೆದ ವರ್ಷ ಅಮಿತಾಭ್ ತಮ್ಮ ನೆಚ್ಚಿನ ʼಪ್ರತೀಕ್ಷಾʼ ಬಂಗಲೆಯನ್ನು ಪುತ್ರಿ ಶ್ವೇತಾ ಬಚ್ಚನ್ ನಂದ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇತ್ತೀಚೆಗೆ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ ಆಸ್ತಿಯೊಂದನ್ನು ಖರೀದಿಸಿದ್ದರು. ಜನವರಿ 22ರಂದು ನಡೆದ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಮತ್ತೊಮ್ಮೆ ಅಯೋಧ್ಯೆಗೆ ಭೇಟಿ ನೀಡಿ ಆಸ್ತಿ ಪರಿಶೀಲಿಸಿ ಬಂದಿದ್ದರು.
ಜಯಾ ಬಚ್ಚನ್ ಅವರಿಗೆ ಬೇರೆ ಬೇರೆ ಮೂಲಗಳಿಂದ ಆದಾಯ ಹರಿದು ಬರುತ್ತದೆ. ಬ್ರ್ಯಾಂಡ್ಗಳ ಪ್ರಚಾರ, ಎಂ.ಪಿ. ವೇತನ ಹಾಗೂ ಸಿನಿಮಾಗಳಿಂದ ಹಣ ಗಳಿಸುತ್ತಾರೆ. ಅವರು ಕಳೆದ ವರ್ಷ ತೆರೆಕಂಡ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದರು. ಕರಣ್ ಜೋಹರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದರೆ, ಹಿರಿಯ ಕಲಾವಿದರಾದ ಧರ್ಮೇಂದ್ರ, ಶಬಾನಾ ಆಜ್ಮಿ ಮತ್ತಿತರರು ಮುಖ್ಯ ಪಾತ್ರ ನಿರ್ವಹಿಸಿದ್ದರು.
ಇದನ್ನೂ ಓದಿ: ISPL : ಮುಂಬೈ ತಂಡವನ್ನು ಖರೀದಿಸಿದ ಅಮಿತಾಭ್ ಬಚ್ಚನ್
ಇನ್ನು ಅಮಿತಾಭ್ ಜಾಹೀರಾತು, ಸಿನಿಮಾ, ಕಿರುತೆರೆ ಹೀಗೆ ಎಲ್ಲ ಕಡೆ ಸಕ್ರಿಯರಾಗಿದ್ದಾರೆ. ಸದ್ಯ ಅವರು ಭಾರತದ ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿರುವ ʼಕಲ್ಕಿ 2898 ಎಡಿʼ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಟಾಲಿವುಡ್ ನಿರ್ದೇಶಕ ನಾಗ್ ಅಶ್ವಿನ್ ಅವರ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮೊದಲ ಬಾರಿಗೆ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕಮಲ್ ಹಾಸನ್ ಕೂಡ ಈ ಸಿನಿಮಾದಲ್ಲಿದ್ದಾರೆ. ಇದರ ಜತೆಗೆ ಬಿಗ್ ಬಿ ಅನೇಕ ವರ್ಷಗಳ ಬಳಿಕ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ʼವೆಟ್ಟೈಯನ್ʼ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ