Site icon Vistara News

ವಿದೇಶಿ ದೇಣಿಗೆ ಅಕ್ರಮ: ಅಮ್ನೆಸ್ಟಿ ಮತ್ತು ಮಾಜಿ ಸಿಇಒ ಆಕಾರ್‌ ಪಟೇಲ್‌ಗೆ ಇ.ಡಿ ಭಾರಿ ದಂಡ

Amnesty international

ನವ ದೆಹಲಿ: ಜಾರಿ ನಿರ್ದೇಶನಾಲಯವು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆ ವಿರುದ್ಧ ೫೧.೭೨ ಕೋಟಿ ಮತ್ತು ಅದರ ಮಾಜಿ ಸಿಇಒ ಆಕಾರ್‌ ಪಟೇಲ್‌ಗೆ ೧೦ ಕೋಟಿ ರೂ. ದಂಡ ವಿಧಿಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಅಮ್ನೆಸ್ಟಿ ಮತ್ತು ಆಕಾರ್‌ ಪಟೇಲ್‌ಗೆ ಇ.ಡಿ. ನೋಟಿಸನ್ನೂ ಜಾರಿಗೊಳಿಸಿದೆ.

ವಿದೇಶಿ ಅನುದಾನ ನಿಯಂತ್ರಣ ಕಾಯಿದೆಯ ಪ್ರಕಾರ, ಭಾರತದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಶಾಖೆ ಈಗ ಯಾವುದೇ ವಿದೇಶಿ ದೇಣಿಗೆಯನ್ನು ಪಡೆಯುವಂತಿಲ್ಲ. ಇದಕ್ಕೆ ಸರಕಾರ ನಿರ್ಬಂಧ ವಿಧಿಸಿದೆ. ಆದರೆ, ಈ ಸಂಸ್ಥೆ ವಿದೇಶಿ ನೇರ ಹೂಡಿಕೆಯ ಹೆಸರಿನಲ್ಲಿ ದೊಡ್ಡ ಮಟ್ಟದ ಮೊತ್ತವನ್ನು ಪಡೆಯುತ್ತಿರುವುದನ್ನು ಇ.ಡಿ ಪತ್ತೆಹಚ್ಚಿದೆ.

ನೇರವಾಗಿ ಹಣ ನೀಡುವುದನ್ನು ನಿರ್ಬಂಧಿಸಿರುವುದರಿಂದ ಅನ್ಯ ದಾರಿಗಳನ್ನು ಹುಡುಕಿಕೊಂಡಿರುವ ಅಮ್ನೆಸ್ಟಿ, ವ್ಯವಹಾರದ ರೂಪದಲ್ಲಿ ಹಣವನ್ನು ಒದಗಿಸುತ್ತಿದೆ. ಭಾರತದ ಸಂಸ್ಥೆಯು ವ್ಯವಹಾರ ಸಮಾಲೋಚನೆ ಮತ್ತು ಪಿಆರ್‌ ಸೇವೆಗಳನ್ನು ಪಡೆದುಕೊಂಡಿದ್ದಕ್ಕೆ ಪ್ರತಿಯಾಗಿ ನಿಗದಿತ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿ ವ್ಯವಹಾರದ ರೂಪ ನೀಡುತ್ತಿರುವುದನ್ನು ಇ.ಡಿ. ಪತ್ತೆ ಹಚ್ಚಿದೆ. ಆದರೆ, ಇದು ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆಯ ಉಲ್ಲಂಘನೆ ಎಂದು ಹೇಳಿ ಈಗ ನೋಟಿಸ್‌ ಜಾರಿ ಮಾಡಿದೆ.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ತಾನು ಯಾವುದೇ ವಾಣಿಜ್ಯ ವ್ಯವಹಾರಗಳನ್ನು ನಡೆಸುವುದಿಲ್ಲ ಎಂದು ಘೋಷಿಸಿಕೊಂಡಿದೆ. ಆದರೆ, ವಾಣಿಜ್ಯ ಕೆಲಸಗಳಿಗಾಗಿ ಇಷ್ಟು ದೊಡ್ಡ ಮೊತ್ತವನ್ನು ವರ್ಗಾವಣೆ ಮಾಡಿದ್ದಾಗಿ ಹೇಳುತ್ತಿದೆ. ದೇಣಿಗೆಗಳನ್ನು ನೀಡಲು ಉದ್ಯಮ ಸೋಗು ಹಾಕುವ ಮೂಲಕ ವಿದೇಶಿ ಅನುದಾನ ನಿಯಂತ್ರಣ ಕಾಯಿದೆ (ಎಫ್‌ಆರ್‌ಸಿಎ)ಯನ್ನು ಉಲ್ಲಂಘಿಸುತ್ತಿದೆ ಎಂದು ಇ.ಡಿ ಹೇಳಿದೆ.

೨೦೧೪ರಿಂದ ೨೦೧೮ರವರೆಗೆ ನಡೆದ ವಾಣಿಜ್ಯ ವ್ಯವಹಾರಗಳ ಹೆಸರಲ್ಲಿ ಪಾವತಿಯಾಗಿರುವ ೫೧.೭೨ ಕೋಟಿ ರೂ. ಭಾರತದಲ್ಲಿ ತನ್ನ ಚಟುವಟಿಕೆಯನ್ನು ವಿಸ್ತರಿಸುವುದಕ್ಕಾಗಿ ನೀಡಿದ ದೇಣಿಗೆ ಎಂದೇ ಪರಿಗಣಿಸಿ ಇ.ಡಿ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇದನ್ನೂ ಓದಿ| ಅಕ್ರಮ ಹಣ ವರ್ಗಾವಣೆ, ಚೀನಿ ಮೊಬೈಲ್‌ ಕಂಪನಿ ವಿವೊ ವಿರುದ್ಧ ಇ.ಡಿ ದಾಳಿ

Exit mobile version