ಚಂಡೀಗಢ: ಖಲಿಸ್ತಾನ ಪರ ನಿಲುವು ಹಾಗೂ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದ ‘ವಾರಿಸ್ ಪಂಜಾಬ್ ದೆ’ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್‌ನನ್ನು (Amrit Pal Singh) ಪೊಲೀಸರು ಬಂಧಿಸಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಆತ ಪೊಲೀಸರನ್ನೇ ಯಾಮಾರಿಸಿ ಪರಾರಿಯಾಗಲು ಯತ್ನಿಸುತ್ತಿದ್ದಾನೆ ಎಂಬುದಾಗಿ ಹೇಳಲಾಗುತ್ತಿದೆ. ಆತನ ಬಂಧನಕ್ಕಾಗಿ ಪಂಜಾಬ್ ಪೊಲೀಸರು ಶನಿವಾರ ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅದಕ್ಕಾಗಿ ಪಂಜಾಬ್‌ನಾದ್ಯಂತ ಇಂಟರ್‌ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ.
ಪಂಜಾಬ್‌ನ ನಕೋಡಾರ್‌ನಲ್ಲಿ ಅಮೃತ್‌ಪಾಲ್ ಸಿಂಗ್‌ನನ್ನು ಬಂಧಿಸಲಾಗಿದ್ದು, ಜಲಂಧರ್‌ಗೆ ಕರೆದೊಯ್ಯಲಾಗಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಅಮೃತ್‌ಪಾಲ್ ಸಿಂಗ್‌ನ ಆರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.
ಅಮೃತ್‌ಪಾಲ್ ಸಿಂಗ್ ಬೆಂಬಲಿಗರು ಪೊಲೀಸ್ ಠಾಣೆಯೊಂದಕ್ಕೆ ಮಾರಕಾಸ್ತ್ರ ಹಿಡಿದು ನುಗ್ಗಿ ದಾಳಿ ನಡೆಸಿದ್ದರು. ಇದರೊಂದಿಗೆ ಪ್ರತ್ಯೇಕ ಖಲಿಸ್ತಾನ ಸ್ಥಾಪನೆಯ ಪರವಾದ ಮಾತುಗಳು ಕೇಳಿ ಬಂದಿದ್ದವು. ಜತೆಗೆ ಹಿಂಸಾಚಾರ ನಡೆಯವು ಸೂಚನೆಯೂ ಸಿಕ್ಕಿತ್ತು. ದೇಶ ದ್ರೋಹಿ ಕೃತ್ಯಗಳ ಹಿಂದಿರುವ ಅಮೃತ್‌ಪಾಲ್‌ನನ್ನು ಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 78 ಜನರನ್ನು ಬಂಧಿಸಿರುವ ಪೊಲೀಸರು, ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಅಮೃತ್‌ಪಾಲ್ ಮತ್ತು ಆತನ ಇತರೆ ಸಹಚರರು ತಪ್ಪಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಲಂಧರ್‌ನ ಮೆಹತ್‌ಪುರ್‌ನಲ್ಲಿ ಪೊಲೀಸರು ಕುದುರೆ ಮೆರವಣಿಗೆ ತಡೆದು ಅಮೃತ್‌ಪಾಲ್ ಸೆರೆಗೆ ಯತ್ನಿಸಿದ್ದರು. ಆದರೆ, ಅಮೃತ್‌ಪಾಲ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆತನ ಆರು ಮಂದಿ ಸಹಚರರನ್ನು ಪೊಲೀಸರು ವಶಕ್ಕೆ ಪಡೆದರು. ಆರೋಪಿಯು ತಪ್ಪಿಸಿಕೊಳ್ಳದಂತೆ ಪಂಜಾಬ್‌ನಲ್ಲಿ ಭಾನುವಾರದವರೆಗೂ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಎಲ್ಲ ಮೊಬೈಲ್ ಇಂಟರ್‌ನೆಟ್ ಸೇವೆಗಳು, ಬ್ಯಾಂಕಿಂಗ್ ಸೇವೆಗಳು ಹಾಗೂ ಮೊಬೈಲ್ ರಿಚಾರ್ಜ್ ಹೊರತುಪಡಿಸಿ ಎಲ್ಲ ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮೊಬೈಲ್ ನೆಟ್‌ವರ್ಕ್‌ಗಳ ಮೂಲಕ ಕಾರ್ಯಾಚರಿಸುವ ಡಾಂಗಲ್ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಧ್ವನಿ ಕರೆಗಳಿಗೆ ನಿರ್ಬಂಧ ಇಲ್ಲ. ಮಾರ್ಚ್ 18ರ ಮಧ್ಯಾಹ್ನ 12ರಿಂದ ಮಾರ್ಚ್ 19ರಂದು 12 ಗಂಟೆ ವರೆಗೂ ಪಂಜಾಬ್‌ನಲ್ಲಿ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ” ಎಂದು ಪಂಜಾಬ್‌ನ ಗೃಹ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಖಲಿಸ್ತಾನಿ ನಾಯಕನಾಗಿರುವ, ಉಗ್ರರ ಜತೆ ಸಂಪರ್ಕ ಹೊಂದಿರುವ ಕುರಿತು ಶಂಕೆ ಇರುವ ಕಾರಣ ಅಮೃತ್‌ಪಾಲ್ ಸಿಂಗ್, ಕಳೆದ ಕೆಲವು ವರ್ಷಗಳಿಂದ ಪಂಜಾಬ್‌ನಲ್ಲಿ ಖಲಿಸ್ತಾನಿ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದ್ದಾನೆ. ಅದರಲ್ಲೂ, ಇತ್ತೀಚೆಗೆ ಅಮೃತ್‌ಪಾಲ್‌ನ ಸಿಂಗ್‌ನ ಆಪ್ತರನ್ನು ಬಿಡಬೇಕು ಎಂಬುದಾಗಿ ಈತನ ಆಪ್ತರು ಅಂಜಾಲ ಪೊಲೀಸ್ ಠಾಣೆಯಲ್ಲಿ ಭಾರಿ ಗಲಾಟೆ ನಡೆಸಿದ್ದರು.
ಸಿಂಗ್ ಬಂಧನಕ್ಕೆ ಪೊಲೀಸರ ಕಾರ್ಯಾಚರಣೆ
ಅಮೃತ್‌ಪಾಲ್ ಸಿಂಗ್‌ನ ಬಂಧನಕ್ಕೆ ಶನಿವಾರ ಬೆಳಗ್ಗೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಈತನ ಬಂಧನಕ್ಕಾಗಿ ಪಂಜಾಬ್ ಪೊಲೀಸರು ಹಲವು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದರು.
ಪಂಜಾಬ್ ಪೊಲೀಸರ ಪ್ರಕಟಣೆ
“ಕೆಲವು ಆಯ್ದ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್, ಎಸ್‌ಎಂಎಸ್‌ಗಳನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಈಗಲೂ ನಿರ್ಬಂಧ ಮುಂದುವರಿದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದಿಸೆಯಲ್ಲಿ ಇಂತಹ ಕ್ರಮ ತೆಗೆದುಕೊಳ್ಳಲಾಗಿದೆ. ಖಲಿಸ್ತಾನದ ಬೆಂಬಲಿಗರು ಗಲಾಟೆ ಮಾಡುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2012ರಿಂದ 10 ವರ್ಷಗಳವರೆಗೆ ದುಬೈನಲ್ಲಿ ಟ್ರಾನ್ಸ್‌ಪೋರ್ಟ್ ಉದ್ಯಮದಲ್ಲಿ ತೊಡಗಿದ್ದ ಈತ, ಕಳೆದ ವರ್ಷ ಪಂಜಾಬ್‌ಗೆ ಆಗಮಿಸಿದ್ದಾನೆ ಎಂದು ತಿಳಿದುಬಂದಿದೆ. ಪಂಜಾಬ್‌ಗೆ ಆಗಮಿಸುತ್ತಲೇ ಖಲಿಸ್ತಾನ ಪರ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದ. ಈತನನ್ನು ಪಂಜಾಬ್‌ನ ಎರಡನೇ ಬಿಂದ್ರಾನ್‌ವಾಲೆ ಎಂದೇ ಹೇಳಲಾಗುತ್ತದೆ