Site icon Vistara News

Amul Milk: ಗ್ರಾಹಕರಿಗೆ ಬಿಗ್‌ ಶಾಕ್‌; ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ

Amul Milk

Amul Milk

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶದತ್ತ ಇಡೀ ದೇಶದ ಗಮನ ನೆಟ್ಟಿದೆ. ಈ ಮಧ್ಯೆ ಜನತೆಗೆ ಅಮುಲ್‌ ಕಂಪನಿ ಬೆಲೆ ಏರಿಕೆಯ ಶಾಕ್‌ ಕೊಟ್ಟಿದೆ (Amul Milk). ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಬೆಲೆ ಏರಿಕೆ ಸೋಮವಾರದಿಂದಲೇ (ಜೂನ್ 3) ಜಾರಿಗೆ ಬರಲಿದೆ.

ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ತಿಳಿಸಿದೆ. ಜಿಸಿಎಂಎಂಎಫ್ ಕೊನೆಯ ಬಾರಿಗೆ ಹಾಲಿನ ಬೆಲೆಯನ್ನು 2023ರ ಫೆಬ್ರವರಿಯಲ್ಲಿ ಹೆಚ್ಚಿಸಿತ್ತು.

‘ಅಮುಲ್’ ಬ್ರ್ಯಾಂಡ್‌ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಜಿಸಿಎಂಎಂಎಫ್‌ನ ಎಂ.ಡಿ. ಜಯೇನ್ ಮೆಹ್ತಾ ಈ ಬಗ್ಗೆ ಮಾತನಾಡಿ, ʼʼಹೆಚ್ಚಿದ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯʼʼ ಎಂದು ತಿಳಿಸಿದ್ದಾರೆ.

ಪರಿಷ್ಕೃತ ದರ ಹೀಗಿದೆ

ಬೆಲೆ ಏರಿಕೆಯೊಂದಿಗೆ 500 ಎಂಎಲ್‌ನ ಅಮುಲ್ ಎಮ್ಮೆ ಹಾಲು, 500 ಎಂಎಲ್‌ನ ಅಮುಲ್ ಗೋಲ್ಡ್ ಹಾಲು ಮತ್ತು 500 ಎಂಎಲ್‌ನ ಅಮುಲ್ ಶಕ್ತಿ ಹಾಲಿನ ದರ ಕ್ರಮವಾಗಿ 36 ರೂ., 33 ರೂ. ಮತ್ತು 30 ರೂ. ಆಗಲಿದೆ. “ಪ್ರತಿ ಲೀಟರ್‌ಗೆ 2 ರೂ.ಗಳ ಹೆಚ್ಚಳದೊಂದಿಗೆ ದರ ಶೇ. 3-4ರಷ್ಟು ಅಧಿಕವಾಗಲಿದೆ. 2023ರ ಫೆಬ್ರವರಿಯಿಂದ ಅಮುಲ್ ತಾಜಾ ಹಾಲಿನ ಬೆಲೆಯನ್ನು ಹೆಚ್ಚಿಸಿರಲಿಲ್ಲ. ಸುಮಾರು ಒಂದೂವರೆ ವರ್ಷಗಳ ಬಳಿಕ ಈ ಹೆಚ್ಚಳ ಕಂಡು ಬಂದಿದೆʼʼ ಎಂದು ಜಿಸಿಎಂಎಂಎಫ್‌ನ ಪ್ರಕಟಣೆ ತಿಳಿಸಿದೆ.

ಹಾಲು ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಈ ಬೆಲೆ ಏರಿಕೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅದು ಹೇಳಿದೆ. ಜಿಸಿಎಂಎಂಎಫ್ ಪ್ರಕಾರ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯಲ್ಲಿ ಸುಮಾರು 80 ಪೈಸೆಯನ್ನು ಅಮುಲ್ ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ. “ಬೆಲೆ ಪರಿಷ್ಕರಣೆಯು ನಮ್ಮ ಹಾಲು ಉತ್ಪಾದಕರ ನಷ್ಟವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಹಾಲು ಉತ್ಪಾದನೆಗೆ ರೈತರನ್ನು ಪ್ರೋತ್ಸಾಹಿಸುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: Nandini milk: ಅಮುಲ್‌ಗೆ ನಂದಿನಿ ಸೆಡ್ಡು; ಇಂದಿರಾ ಕ್ಯಾಂಟೀನ್‌ಗಳಲ್ಲೂ ಹಾಲು ಮಾರಾಟಕ್ಕೆ ಪ್ಲಾನ್‌!

ಕಮರ್ಷಿಯಲ್ ಅಡುಗೆ ಅನಿಲ ದರ ಇಳಿಕೆ

ಜೂನ್‌ 1ರಂದು ಕಮರ್ಷಿಯಲ್ ಅಡುಗೆ ಅನಿಲ ದರ ಇಳಿಕೆಯಾಗಿ ಗ್ರಾಹಕರ ಮೊಗದಲ್ಲಿ ನಗು ಮೂಡಿತ್ತು. ಜೂನ್‌ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 69.50 ರೂ. ಕಡಿಮೆ ಮಾಡಿದ್ದವು (LPG Price Cut). ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 69.50 ರೂ. ಕಡಿತಗೊಂಡು 1,756 ರೂ.ಗೆ ತಲುಪಿದೆ. ಕಳೆದ ತಿಂಗಳು ಕೂಡ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಕಡಿತಗೊಳಿಸಲಾಗಿತ್ತು. ಮೇ 1ರಂದು ದರ ಪರಿಷ್ಕರಿಸಿ 19 ರೂ. ಇಳಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿಯೂ 19 ಕೆಜಿಯ ಸಿಲಿಂಡರ್‌ ಬೆಲೆಯನ್ನು 30.50 ರೂ. ಇಳಿಸಲಾಗಿತ್ತು.

Exit mobile version