Site icon Vistara News

India Canada Row: ಆನೆ ಜತೆ ಇರುವೆ ಜಗಳವಾಡುತ್ತಿದೆ! ಕೆನಡಾಗೆ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಗೇಲಿ!

Narendra Modi And Justin Trudeau

An ant picking up a fight against an elephant; US Taunts Canada On Diplomatic Row With India

ವಾಷಿಂಗ್ಟನ್‌: ಭಾರತ ಹಾಗೂ ಕೆನಡಾ ನಡುವಿನ ಬಿಕ್ಕಟ್ಟು (India Canada Row) ದಿನೇದಿನೆ ಉಲ್ಬಣವಾಗುತ್ತಿರುವ ಕಾರಣ ಅಮೆರಿಕ ಮಧ್ಯಪ್ರವೇಶಿಸಲು ಯತ್ನಿಸುತ್ತಿದೆ. ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಯ ತನಿಖೆ ವಿಚಾರದಲ್ಲಿ ಭಾರತ ಸಹಕರಿಸಬೇಕು ಎಂದೂ ಹೇಳಿದೆ. ಇದರ ಬೆನ್ನಲ್ಲೇ, ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕಲ್‌ ರುಬಿನ್‌ (Michael Rubin) ಅವರು ಭಾರತದ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಹಾಗೆಯೇ, “ಕೆನಡಾ ಭಾರತದ ಜತೆ ಸಂಘರ್ಷಕ್ಕೆ ಇಳಿದಿದೆ ಎಂದರೆ, ಅದು ಇರುವೆಯೊಂದು ಆನೆಯ ಜತೆ ಕಾಳಗಕ್ಕೆ ಇಳಿದಂತೆ” ಎಂದು ಗೇಲಿ ಮಾಡಿದ್ದಾರೆ.

“ಯಾವುದೇ ಎರಡು ದೇಶಗಳು ಸಂಘರ್ಷಕ್ಕೆ ಇಳಿದಾಗ, ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾದಾಗ ಮೂರನೇ ದೇಶವು ಮಧ್ಯಸ್ಥಿಕೆ ವಹಿಸುವುದು ಸುಲಭ. ಆದರೆ, ಯಾವುದೇ ಒಂದು ದೇಶದ ಪರ ನಿಲ್ಲುವುದು ಕಷ್ಟ. ಈಗ ಭಾರತ ಹಾಗೂ ಕೆನಡಾ ವಿಚಾರದಲ್ಲಿ ಅಮೆರಿಕಕ್ಕೂ ಇದೇ ಆಗುತ್ತಿದೆ. ಆದರೂ, ದ್ವಿಪಕ್ಷೀಯ ಹಾಗೂ ವ್ಯೂಹಾತ್ಮಕ ಸಂಬಂಧದ ವಿಚಾರದಲ್ಲಿ ಅಮೆರಿಕಕ್ಕೆ ಭಾರತವೇ ಪ್ರಮುಖವಾಗಿದೆ. ಅಷ್ಟಕ್ಕೂ, ಕೆನಡಾದ ಪರಿಸ್ಥಿತಿಯು ಆನೆ (ಭಾರತ) ಜತೆ ಇರುವೆ ಕದನಕ್ಕೆ ಇಳಿದಿದೆ” ಎಂದು ಕೆನಡಾಗೆ ಗೇಲಿ ಮಾಡಿದ್ದಾರೆ.

ಟ್ರುಡೋ ತುಂಬ ದಿನ ಅಧಿಕಾರದಲ್ಲಿ ಇರಲ್ಲ

ಭಾರತದ ಜತೆ ಏಕೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎಂಬುದಕ್ಕೂ ಮೈಕಲ್‌ ರುಬಿನ್‌ ಕಾರಣ ನೀಡಿದ್ದಾರೆ. “ಜಸ್ಟಿನ್‌ ಟ್ರುಡೋ ಅವರು ತುಂಬ ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ. ಹಾಗಾಗಿ, ಅಮೆರಿಕವು ಭಾರತಕ್ಕೆ ಬೆಂಬಲ ನೀಡಿ, ಜಸ್ಟಿನ್‌ ಟ್ರುಡೋ ಅಧಿಕಾರದಿಂದ ಕೆಳಗಿಳಿದ ಬಳಿಕ ಉತ್ತಮ ಸಂಬಂಧ ಹೊಂದಬಹುದು” ಎಂದು ಹೇಳಿದ್ದಾರೆ. ಆ ಮೂಲಕ ಜಸ್ಟಿನ್‌ ಟ್ರುಡೋ ಅವರು ತುಂಬ ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಕೆನಡಾ ಪ್ರಧಾನಿಯದ್ದೇ ತಪ್ಪು

ಖಲಿಸ್ತಾನಿ ಉಗ್ರನ ಹತ್ಯೆ ವಿಚಾರದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರದ್ದೇ ದೊಡ್ಡ ತಪ್ಪು ಎಂದು ಮೈಕಲ್‌ ರುಬಿನ್‌ ಹೇಳಿದ್ದಾರೆ. “ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಕುರಿತು ಜಸ್ಟಿನ್‌ ಟ್ರುಡೋ ಅವರಿಗೇ ಸ್ಪಷ್ಟತೆ ಇಲ್ಲ. ಅಷ್ಟಕ್ಕೂ, ಭಾರತದ ವಿರುದ್ಧ ಅವರು ಆರೋಪ ಮಾಡುವ ಮೊದಲು ಯೋಚಿಸಬೇಕಿತ್ತು. ಸಾಕ್ಷ್ಯಗಳೇ ಇಲ್ಲದೆ ಆರೋಪ ಮಾಡಬಾರದಿತ್ತು. ಅಷ್ಟಕ್ಕೂ ಹರ್ದೀಪ್‌ ಸಿಂಗ್‌ ನಿಜ್ಜರ್‌ ಒಬ್ಬ ಉಗ್ರ. ನಮಗೆ ಭಾರತ ಪ್ರಮುಖ, ನಮಗೆ ಭಾರತದ ಜತೆಗಿನ ಸಂಬಂಧ ಮುಖ್ಯವಾಗಬೇಕು” ಎಂದು ಎಂದಿದ್ದಾರೆ.

ಇದನ್ನೂ ಓದಿ: India Canada Row: ನಿಜ್ಜರ್‌ ಧಾರ್ಮಿಕ ನಾಯಕನಲ್ಲ, 200 ಜನರ ಕೊಲೆಗಾರ; ಕೆನಡಾಗೆ ಭಾರತ ಪ್ರತ್ಯುತ್ತರ

ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ. ಭಾರತದ ಏಜೆಂಟ್‌ಗಳೇ ಹತ್ಯೆ ಮಾಡಿದ್ದಾರೆ ಎಂದು ಜಸ್ಟಿನ್‌ ಟ್ರುಡೋ ಆರೋಪ ಮಾಡಿರುವುದು ಹಾಗೂ ಇದಕ್ಕೆ ಯಾವುದೇ ಸಾಕ್ಷ್ಯ ಒದಗಿಸದಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಭಾರತ ಕೂಡ ಸಾಕ್ಷ್ಯ ಕೊಡಿ ಎಂದು ಆಗ್ರಹಿಸುವ ಜತೆಗೆ ಕೆನಡಾ ನಾಗರಿಕರಿಗೆ ವೀಸಾ ರದ್ದು ಸೇರಿ ಹಲವು ಕ್ರಮ ತೆಗೆದುಕೊಂಡಿದೆ.

Exit mobile version