ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani Wedding) ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್ ಅವರ ಪುತ್ರಿ ರಾಧಿಕಾ ಮರ್ಚಂಟ್ (Radhika Merchant) ಅವರ ವಿವಾಹವು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಹಿನ್ನೆಲೆಯಲ್ಲಿ ಅಂಬಾನಿ ಕುಟುಂಬ 4 ದಿನಗಳ ಕಾಲ ವೈಭವದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸೋಮವಾರ ತೆರೆ ಬಿದ್ದಿದೆ. ಕೊನೆಯ ದಿನವಾದ ಸೋಮವಾರ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳು, ರಿಲಯನ್ಸ್ ಉದ್ಯೋಗಿಗಳು ಮತ್ತು ಅಂಬಾನಿ ಕುಟುಂಬದ ಸಿಬ್ಬಂದಿಗೆ ವಿಶೇಷ ಸಮಾರಂಭ ಆಯೋಜಿಸಲಾಗಿತ್ತು.
ಮಾಧ್ಯಮಗಳು ಮತ್ತು ರಿಲಯನ್ಸ್ ಸಿಬ್ಬಂದಿಗೆಂದು ವಿಶೇಷವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪಾಲ್ಗೊಂಡಿದ್ದರು. ಅಕ್ಷಯ್ ಕುಮಾರ್ ಅವರಿಗೆ ಕೋವಿಡ್ ಬಾಧಿಸಿದ್ದ ಹಿನ್ನೆಲೆಯಲ್ಲಿ ಅವರು ಮದುವೆಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಸೋಮವಾರ ಅವರು ಸಮಾರಂಭದಕ್ಕೆ ಪತ್ನಿ ಟ್ವಿಂಕಲ್ ಖನ್ನಾ ಜತೆಗೆ ಆಗಮಿಸಿದ ವಧು-ವರರಿಗೆ ಶುಭಾಶಯ ತಿಳಿಸಿದ್ದರು.
ಯಾರೆಲ್ಲ ಭಾಗಿ?
ಅಂಬಾನಿ ಆಸ್ತಿಗಳ ಹೌಸ್ ಕೀಪಿಂಗ್, ಸೆಕ್ಯುರಿಟಿ, ಸೆಕ್ರೆಟರಿಯಲ್ ಮತ್ತು ನಿರ್ವಹಣಾ ವಿಭಾಗಗಳ ಉದ್ಯೋಗಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಸಾವಿರಾರು ಕಾರ್ಮಿಕರು ಮತ್ತು ಅವರ ಕುಟುಂಬಗಳ ಜತೆಗೆ ಮಾಧ್ಯಮ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ಈ ಮೂಲಕ ಅನಂತ್-ರಾಧಿಕಾ ಮದುವೆಯ ಆಚರಣೆಗೆ ತೆರೆ ಎಳೆಯಲಾಗಿದೆ.
ಗಣ್ಯರ ದಂಡೇ ಉಪಸ್ಥಿತಿ
ಸಮಾರಂಭಕ್ಕೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಿ ಮದುಮಕ್ಕಳನ್ನು ಆಶೀರ್ವದಿಸಿದ್ದರು. ಜತೆಗೆ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್ ಧೋನಿ, ಅಮಿತಾಭ್ ಬಚ್ಚನ್, ಯಶ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ರಣವೀರ್ ಸಿಂಗ್, ರಣಬೀರ್ ಕಪೂರ್, ಅನನ್ಯಾ ಪಾಂಡೆ, ರಜನಿಕಾಂತ್, ಮಹೇಶ್ ಬಾಬು, ಹಾರ್ದಿಕ್ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ನಯನತಾರಾ, ವಿಘ್ನೇಶ್ ಶಿವನ್, ಜೆನಿಲಿಯಾ, ರಿತೇಶ್ ದೇಶ್‌ಮುಖ್, ಮಾಧುರಿ ದೀಕ್ಷಿತ್, ಶಾರುಖ್ ಖಾನ್, ಸಲ್ಮಾನ್ ಖಾನ್, ಸೂರ್ಯ, ಜ್ಯೋತಿಕಾ, ರಶ್ಮಿಕಾ ಮಂದಣ್ಣ, ಪ್ರಿಯಾಂಕಾ ಚೋಪ್ರಾ, ಬ್ರಿಟನ್ ಮಾಜಿ ಪ್ರಧಾನಿಗಳಾದ ಬೋರಿಸ್ ಜಾನ್ಸನ್, ಟೋನಿ ಬ್ಲೇರ್ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಧೋನಿಯಿಂದ ರಜನಿಕಾಂತ್‌ವರೆಗೆ; ಅನಂತ್ ಅಂಬಾನಿ ಮದುವೆಯಲ್ಲಿ ಪಾಲ್ಗೊಂಡ ಗಣ್ಯರ ಫೋಟೊ, ವಿಡಿಯೊಗಳು ಇಲ್ಲಿವೆ
5 ಸಾವಿರ ಕೋಟಿ ರೂ. ಖರ್ಚು
ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಮಾರ್ಚ್‌ನಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಜಾಗತಿಕ ಗಾಯನ ಐಕಾನ್‌ಗಳಾದ ಜಸ್ಟಿನ್ ಬೀಬರ್, ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಾಲಿವುಡ್-ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.