ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್ ಅವರ ಪುತ್ರಿ ರಾಧಿಕಾ ಮರ್ಚಂಟ್ (Radhika Merchant) ಅವರ ವಿವಾಹವು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ (Anant Ambani Wedding). ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಮಾರಂಭದಲ್ಲಿ ಕೌಟುಂಬಿಕ ಮುನಿಸು ಮರೆತು ಅನಿಲ್ ಅಂಬಾನಿ (Anil Ambani) ಅವರೂ ಪಾಲ್ಗೊಂಡಿದ್ದು ವಿಶೇಷ.
ಸದ್ಯ ವರ ಅನಂತ್ ಜತೆ ಅನಿಲ್ ಅಂಬಾನಿ ಹೆಜ್ಜೆ ಹಾಕಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. “ವರ ಅನಂತ್ ಆಗಮಿಸುತ್ತಿದ್ದಾರೆ” ಎನ್ನುವ ಶೀರ್ಷಿಕೆ ನೀಡಿ ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿಕ್ಕ ವಿಡಿಯೊದಲ್ಲಿ ಮದುಮಗ ಅನಂತ್ ಒಂದು ಕಡೆ ತಂದೆ ಮುಖೇಶ್ ಅಂಬಾನಿ ಮತ್ತು ಮತ್ತೊಂದೆಡೆ ಚಿಕ್ಕಪ್ಪ ಅನಿಲ್ ಅಂಬಾನಿಯೊಂದಿಗೆ ಮದುವೆಯ ಮಂಟಪಕ್ಕೆ ನಡೆದುಕೊಂಡು ಬರುವುದು ಕಂಡು ಬಂದಿದೆ. ಅನಂತ್ ಅಂಬಾನಿ ಅವರನ್ನು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಅತಿಥಿಗಳು ಕೈ ಕುಲುಕುತ್ತಿರುವುದೂ ಕಾಣಬಹುದು.
ಗಣ್ಯರ ದಂಡೇ ಉಪಸ್ಥಿತಿ
ಅನಂತ್ ಅಂಬಾನಿ ಮದುವೆಯಲ್ಲಿ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್ ಧೋನಿ, ಅಮಿತಾಭ್ ಬಚ್ಚನ್, ಆಲಿಯಾ ಭಟ್, ರಣವೀರ್ ಸಿಂಗ್, ರಣಬೀರ್ ಕಪೂರ್, ಅನನ್ಯಾ ಪಾಂಡೆ, ರಜನಿಕಾಂತ್, ಮಹೇಶ್ ಬಾಬು, ಹಾರ್ದಿಕ್ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಬ್ರಿಟನ್ ಮಾಜಿ ಪ್ರಧಾನಿಗಳಾದ ಬೋರಿಸ್ ಜಾನ್ಸನ್, ಟೋನಿ ಬ್ಲೇರ್ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.
ಈ ವರ್ಷಾರಂಭದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳೂ ಅದ್ಧೂರಿಯಾಗಿ ನಡೆದಿದ್ದವು. ಗುಜರಾತ್‌ನ ಜಾಮ್‌ನಗರದಲ್ಲಿರುವ ಅಂಬಾನಿ ಎಸ್ಟೇಟ್‌ನಲ್ಲಿ ಮಾರ್ಚ್ 1ರಿಂದ 3 ರವರೆಗೆ ಮೊದಲ ವಿವಾಹ ಪೂರ್ವ ಆಚರಣೆಯು 1,200 ಅತಿಥಿಗಳೊಂದಿಗೆ ನಡೆದಿದ್ದವು. ಇದರಲ್ಲಿ ಬಿಲ್ ಗೇಟ್ಸ್, ಹಿಲರಿ ಕ್ಲಿಂಟನ್, ಜೇರೆಡ್ ಕುಶ್ನರ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ ಹಲವು ಅತಿಥಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಧೋನಿಯಿಂದ ರಜನಿಕಾಂತ್‌ವರೆಗೆ; ಅನಂತ್ ಅಂಬಾನಿ ಮದುವೆಯಲ್ಲಿ ಪಾಲ್ಗೊಂಡ ಗಣ್ಯರ ಫೋಟೊ, ವಿಡಿಯೊಗಳು ಇಲ್ಲಿವೆ
ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಆಗಿದೆ. ಇನ್ನು ಮದುವೆಯ ಕುರಿತಾದ ಫೋಟೊ, ವಿಡಿಯೊ ಎಲ್ಲಡೆ ಹರಿದಾಡುತ್ತಿದ್ದು, ವೈರಲ್ ಆಗುತ್ತಿವೆ. ಅಂಬಾನಿ ವೈಭವಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಶತಮಾನದ ಮದುವೆ ಎಂದು ಹಲವರು ಬಣ್ಣಿಸಿದ್ದಾರೆ.